ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್​ 
ದೇಶ

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್​ಗೆ ಸುಪ್ರೀಂನಲ್ಲೂ ಸಿಗಲಿಲ್ಲ ಜಾಮೀನು! Delhi 2020 riots case

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಗಲಭೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸುಪ್ರೀಂಕೋರ್ಟ್​ನಲ್ಲೂ ಬಿಗ್​ ಶಾಕ್​
  • ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್​ಗೆ ಜಾಮೀನು ನಿರಾಕರಿಸಿದ ಉನ್ನತ ನ್ಯಾಯಾಲಯ
  • ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಗೆ ಎಂದ ಸುಪ್ರೀಂಕೋರ್ಟ್
ನವದೆಹಲಿ: ದೆಹಲಿ ಗಲಭೆ ಪ್ರಕರಣದ ( Delhi 2020 riots case ) ಪ್ರಮುಖ ಆರೋಪಿಗಳಾದ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್​ಗೆ ಸುಪ್ರೀಂ ಕೋರ್ಟ್‌ ಇಂದು (ಜ.05) ಜಾಮೀನು ನಿರಾಕರಿಸಿದೆ.
ಖಾಲಿದ್​ ಹಾಗೂ ಇಮಾನ್​ ಹೊರತುಪಡಿಸಿ ಇತರ ಐದು ಜನರಿಗೆ ದೇಶದ ಉನ್ನತ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್​ಗೆ ಜಾಮೀನು ಭಾಗ್ಯ ಸಿಕ್ಕಿದೆ.
2020ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಗಲಭೆಯ ಹಿಂದೆ ದೊಡ್ಡ ಪಿತೂರಿ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಈ ಹಿಂದೆ ದೆಹಲಿ ಹೈಕೋರ್ಟ್​ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನೆ ಮಾಡಿ ಎಲ್ಲ ಏಳು ಆರೋಪಿಗಳು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಜಾಮೀನು ನೀಡದಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದರು. ಅಂತಿಮವಾಗಿ ಇಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ, ಈ ಪ್ರಕರಣದ ಪ್ರಮುಖ ಆರೋಪಿಗಳಾದ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್​ಗೆ ಜಾಮೀನು ನಿರಾಕರಿಸಿ, ಉಳಿದ ಐವರಿಗೆ ಜಾಮೀನು ನೀಡಿದೆ. 
ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಸಾಂವಿಧಾನಿಕ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಖಾಲಿದ್ ಮತ್ತು ಇಮಾಮ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಈ ಇಬ್ಬರು ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಪ್ರಾಸಿಕ್ಯೂಷನ್ ನೀಡಿದೆ ಎಂದು ಹೇಳಿದೆ. 
ಈ ಆರೋಪಿಗಳು ಎಸಗಿರುವ ಅಪರಾಧಗಳು ರಾಜ್ಯವನ್ನು ಅಸ್ಥಿರಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಹೊರತು, ಇದನ್ನು ಸ್ವಯಂಪ್ರೇರಿತ ಪ್ರತಿಭಟನೆಗಳು ಎಂದು ಹೇಳಲಾಗುವುದಿಲ್ಲ. ಈ ಆರೋಪಿಗಳು ಗಲಭೆಯ ಮೂಲಕ "ಆಡಳಿತ ಬದಲಾವಣೆ" ಮತ್ತು "ಆರ್ಥಿಕತೆಯ ಕತ್ತು ಹಿಸುಕುವ" ಗುರಿ ಹೊಂದಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ವರ್ಷ ನವೆಂಬರ್​ 20ರಂದು ದೆಹಲಿ ಪೊಲೀಸರು ಸುಪ್ರೀಂಕೋರ್ಟ್​ ಮುಂದೆ ಕಳವಳವೊಂದನ್ನು ವ್ಯಕ್ತಪಡಿಸಿತ್ತು. ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟ ಮತ್ತು ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಭೇದಿಸಿದ ಪ್ರಕರಣವನ್ನು ಉಲ್ಲೇಖಿಸಿ, ಬುದ್ಧಿಜೀವಿಗಳೇ ಭಯೋತ್ಪಾದಕರಾದಾಗ, ಅವರು ಇತರರಿಗಿಂತ ಹೆಚ್ಚು ಅಪಾಯಕಾರಿಯಾಗುತ್ತಾರೆ. ಹೀಗಾಗಿ, ದೆಹಲಿ ಗಲಭೆಯ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ದೆಹಲಿ ಪೊಲೀಸರ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಅವರು ಉನ್ನತ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು. 
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಷಯವನ್ನು ಜಾಗತಿಕೀಕರಣಗೊಳಿಸುವ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯುವ ಉದ್ದೇಶದಿಂದ ಗಲಭೆಯ ಪಿತೂರಿಯನ್ನು ಯೋಜಿಸಲಾಗಿತ್ತು ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಾಕ್ಷಿ ಸೇರಿದಂತೆ ಎಲ್ಲ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿ, ಉಳಿದ ಐವರಿಗೆ ಜಾಮೀನು ಮಂಜೂರು ಮಾಡಿದೆ. 

ಏನಿದು ದೆಹಲಿ ಗಲಭೆ?

ಅಂದಹಾಗೆ, 2020ರ ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಯ ವಿರುದ್ಧ ಭಾರಿ ಪ್ರತಿಭಟನೆ ನಡೆಯಿತು. ಇದು ಕೋಮುಗಲಭೆಗೆ ತಿರುಗಿ ಭಾರಿ ಹಿಂಸೆಯನ್ನು ಸೃಷ್ಟಿಸಿತು. ಈ ಗಲಭೆಗೆ ಕಾರಣವಾದ ದೊಡ್ಡ ಪಿತೂರಿಯ ಭಾಗವಾಗಿದ್ದ ಆರೋಪದ ಮೇಲೆ ಇಮಾಮ್ ಮತ್ತು ಖಾಲಿದ್ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು UAPA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನರು ಸಾವಿಗೀಡಾದರು ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡರು, (ಏಜೆನ್ಸೀಸ್​).