ನ್ಯಾವಿಗೇಷನ್ ಉಪಗ್ರಹ ಎನ್ವಿಎಸ್-03 ಯಶಸ್ವಿ ಉಡಾವಣೆ.
ಬಾಹ್ಯಾಕಾಶ ವಿಜ್ಞಾನಿಗಳ ಸಮರ್ಪಣಾ ಭಾವವು ದೇಶಕ್ಕೆ ಸದಾ ಹೆಮ್ಮೆ ಎಂದ ಪ್ರಧಾನಿ ಮೋದಿ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಜಿತೇಂದ್ರ ಸಿಂಗ್ರಿಂದ ಮೆಚ್ಚುಗೆ ವ್ಯಕ್ತ.
ನವ ದೆಹಲಿ: ನ್ಯಾವಿಗೇಷನ್ ಉಪಗ್ರಹ ಎನ್ವಿಎಸ್-03 ಅನ್ನು ನಿಗದಿತ ಕಕ್ಷೆ ಸೇರಿಸುವಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಭರ್ಜರಿಯಾಗಿ ಯಶಸ್ಸು ಕಂಡಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇಸ್ರೋ ಮತ್ತು ಬಾಹ್ಯಾಕಾಶ ವಿಜ್ಞಾನಿಗಳು ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಈ ಮಿಷನ್ ಭಾರತದ ಸ್ವದೇಶಿ ಉಪಗ್ರಹ ಸಂಚಾರ ವ್ಯವಸ್ಥೆಯಾದ 'ನಾವಿಕ್ ಅನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ. ಇದು ನಮ್ಮ ದೇಶಕ್ಕೆ ಸದಾ ಹೆಮ್ಮೆ ಎಂದು ಕೊಂಡಾಡಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'NVS-03 ಅನ್ನು ಹೊತ್ತೊಯ್ದ GSLV-F18 ನ ಯಶಸ್ವಿ ಉಡಾವಣೆಗಾಗಿ ISRO ನಲ್ಲಿರುವ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಈ ಮಿಷನ್ ನಮ್ಮ ಸ್ವದೇಶಿ ಉಪಗ್ರಹ ಸಂಚಾರ ವ್ಯವಸ್ಥೆಯಾದ 'ನಾವಿಕ್' ಅನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ವರ್ಧಿತ ಸಾಮರ್ಥ್ಯಗಳನ್ನು ಹೊಂದಿರುವ NVS-03, ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಆತ್ಮನಿರ್ಭರತೆ ಸಾಧಿಸುವ ನಮ್ಮ ಪ್ರಯತ್ನಕ್ಕೆ ಹಾಗೂ ಜನರಿಗೆ ಉಪಯುಕ್ತವಾಗುವ ನ್ಯಾವಿಗೇಷನ್ ಸೇವೆಗಳಿಗೆ ನೆರವಾಗಲಿದೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಸಮರ್ಪಣಾ ಭಾವವು ದೇಶಕ್ಕೆ ಸದಾ ಹೆಮ್ಮೆ ತಂದಿದೆ' ಎಂದು ಪ್ರಶಂಸಿಸಿದ್ದಾರೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಜಿತೇಂದ್ರ ಸಿಂಗ್ ಎಕ್ಸ್ನಲ್ಲಿ ಬರೆದುಕೊಂಡಿದ್ದು, 'GSLV-F18/NVS-03 ಮಿಷನ್‌ನ ಯಶಸ್ವಿ ಉಡಾವಣೆಗಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ಈ ಅದ್ಭುತ ಸಾಧನೆಯು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಮತ್ತು ನಮ್ಮ ಸಾರ್ವಭೌಮ ಸ್ವದೇಶಿ ನ್ಯಾವಿಗೇಷನ್ ಸಾಮರ್ಥ್ಯಗಳನ್ನು ಬಲಪಡಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ'.
'ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿ ಅವರು ಘೋಷಿಸಿದ ಕ್ರಾಂತಿಕಾರಿ ಬಾಹ್ಯಾಕಾಶ ಸುಧಾರಣೆಗಳೊಂದಿಗೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಯಶೋಗಾಥೆಗಳು ಸಂಸ್ಥಾಪಕ ತಂದೆಯರಾದ ವಿಕ್ರಮ್ ಸಾರಾಭಾಯ್ ಮತ್ತು ಸತೀಶ್ ಧವನ್ ಅವರ ಕನಸನ್ನು ಸಾಕ್ಷೀಕರಿಸುತ್ತಿವೆ. ಇಂದು ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣದ ಆಚರಣೆಯಾಗಿದೆ' ಎಂದರು.
1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ವಿದೇಶಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಗಳನ್ನು ಅವಲಂಬಿಸುವುದರ ಮಿತಿಗಳನ್ನು ಭಾರತ ಅನುಭವಿಸಿತ್ತು. ಈ ನಿಟ್ಟಿನಲ್ಲಿ NVS-03 ನಾಗರಿಕ ಮತ್ತು ಕಾರ್ಯತಂತ್ರದ ಎರಡೂ ಕ್ಷೇತ್ರಗಳಿಗೆ ಭಾರತೀಯ ಸೇನೆಗೆ ಹೆಚ್ಚಿನ ಭದ್ರತೆ ಮತ್ತು ಸ್ವಾವಲಂಬನೆ ಒದಗಿಸಲಿದೆ. ನಾವಿಕ್ ಭಾರತದಾದ್ಯಂತ ಹಾಗೂ ಅದರ ಭೌಗೋಳಿಕ ಗಡಿಯಿಂದ 1,500 ಕಿ.ಮೀ ವರೆಗೆ ವ್ಯಾಪಕ ಸೇವೆ ಒದಗಿಸಲು ವಿನ್ಯಾಸಗೊಳಿಸಲಾಗಿದೆ, (ಏಜೆನ್ಸೀಸ್).