ಹಿರೋಜ್ ಜ್ಯೋತಿ ದಾಸ್‌,ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ 
ದೇಶ

ಮಧ್ಯಪ್ರದೇಶದಲ್ಲಿ ಅಸ್ಸಾಂ ವಿದ್ಯಾರ್ಥಿ ಮೇಲೆ ಡೆಡ್ಲಿ ಹಲ್ಲೆ: ನೀನು ಯಾವ ರಾಜ್ಯದವನೆಂದು ಕೇಳಿ ಮೂಳೆ ಮುರಿದ ಪಾಪಿಗಳು! Student

ಪ್ರಮುಖ ಮುಖ್ಯಾಂಶಗಳು

  • ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದಲ್ಲಿ ಜನಾಂಗೀಯ ಹಲ್ಲೆ
  • ಹೆಸರು, ರಾಜ್ಯದ ಹೆಸರನ್ನು ಕೇಳಿ ಥಳಿಸಿದ ದುರುಳರು
  • ಹಿರೋಜ್ ಜ್ಯೋತಿ ದಾಸ್‌ ಹಲ್ಲೆಗೊಳಗಾದ ವಿದ್ಯಾರ್ಥಿ
ಮಧ್ಯಪ್ರದೇಶ: ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ (ಐಜಿಎನ್‌ಟಿಯು) ಹಾಸ್ಟೆಲ್‌ನಲ್ಲಿ ಅಸ್ಸಾಂನ ವಿದ್ಯಾರ್ಥಿ(Student)ಯೊಬ್ಬನ ಮೇಲೆ ಅತನ ಹೆಸರು,ರಾಜ್ಯ ಮತ್ತು ಜನಾಂಗದ ಆಧಾರದ ಮೇಲೆ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಹಲ್ಲೆಗೊಳಗಾದ ಹುಡುಗನನ್ನು ಹಿರೋಜ್ ಜ್ಯೋತಿ ದಾಸ್‌ ಎಂದು ಗುರುತಿಸಲಾಗಿದ್ದು, ಇವನು ಪ್ರಥಮ ವರ್ಷದ ಎಂಎ ಅರ್ಥಶಾಸ್ತ್ರ ವಿದ್ಯಾರ್ಥಿಯಾಗಿದ್ದಾನೆ. ದಾಸ್‌ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಪರಿಣಾಮ ಹಲವು ಗಂಭೀರ ಗಾಯಗಳಾಗಿದ್ದು, ತನ್ನ ಪ್ರಾದೇಶಿಕ ಗುರುತಿನ ಆಧಾರದ ಮೇಲೆ ಹಲ್ಲೆ ನಡೆಸಿದವರು ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದಾಸ್‌ ಆರೋಪಿಸಿದ್ದಾನೆ.
ದಾಸ್​ ಹೇಳುವಂತೆ, ಜನವರಿ 13 ರ ಮುಂಜಾನೆ, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗುರು ಗೋಬಿಂದ್ ಬಾಲಕರ ಹಾಸ್ಟೆಲ್‌ನಲ್ಲಿರುವ ತನ್ನ ಕೊಠಡಿಯಿಂದ ಶೌಚಾಲಯಕ್ಕೆ ಹೋಗಲು ಹೊರಬಂದಾಗ ಈ ಘಟನೆ ಸಂಭವಿಸಿದೆ.
ಕುಡಿದ ಮತ್ತಿನಲ್ಲಿದ್ದಂತೆ ಕಾಣುತ್ತಿದ್ದ ಆರರಿಂದ ಏಳು ವಿದ್ಯಾರ್ಥಿಗಳು ಆತನನ್ನು ತಡೆದು ಆತನ ಹೆಸರು ಮತ್ತು ಅವನು ಎಲ್ಲಿಂದ ಬಂದವನು ಎಂದು ಪ್ರಶ್ನಿಸಲು ಪ್ರಾರಂಭಿಸಿದರು. ದಾಸ್ ತಾನು ಅಸ್ಸಾಂನವನೆಂದು ಗುರುತಿಸಿಕೊಂಡ ಸ್ವಲ್ಪ ಸಮಯದ ನಂತರ, ಆತನನ್ನು ಕ್ರೂರವಾಗಿ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ದಾಳಿಕೋರರು ಆತನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ದಾಳಿಯ ಸಮಯದಲ್ಲಿ ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಹೇಳಿದ್ದಾನೆ.
ಗಾಯಗೊಂಡ ವಿದ್ಯಾರ್ಥಿಗೆ ಆರಂಭದಲ್ಲಿ ವಿಶ್ವವಿದ್ಯಾಲಯದ ಔಷಧಾಲಯದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಕಂಡುಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಗೌರೇಲಾ-ಪೆಂದ್ರ-ಮಾರ್ವಾಹಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಅವರ ವೈದ್ಯಕೀಯ ವರದಿ ಪ್ರಕಾರ ಮೂಗಿನ ಮೂಳೆ ಮುರಿದಿದ್ದು, ಕಣ್ಣುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಮುಖ ಮತ್ತು ದೇಹದ ಮೇಲೆ ಹಲವಾರು ಗಂಭೀರ ಗಾಯಗಳಾಗಿವೆ ಎಂದು ದೃಢಪಡಿಸಲಾಗಿದೆ.
ಈ ಘಟನೆಯು ಕ್ಯಾಂಪಸ್‌ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಜನವರಿ 14 ರಂದು, ವಿದ್ಯಾರ್ಥಿಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳು ಪ್ರತಿಭಟನೆ ನಡೆಸಿ ವಿಶ್ವವಿದ್ಯಾಲಯದ ಆಡಳಿತ ಕಟ್ಟಡವನ್ನು ಸುತ್ತುವರೆದು ಹಲವಾರು ಗಂಟೆಗಳ ಕಾಲ ಘೋಷಣೆಗಳನ್ನು ಕೂಗಿದರು. ಅಧಿಕಾರಿಗಳ ಮೌಖಿಕ ಭರವಸೆಯಿಂದ ಅತೃಪ್ತರಾದ ಪ್ರತಿಭಟನಾಕಾರರು ರಿಜಿಸ್ಟ್ರಾರ್ ಕಚೇರಿಗೆ ಮುತ್ತಿಗೆ ಹಾಕಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ, ವಿಶ್ವವಿದ್ಯಾಲಯ ಆಡಳಿತವು ತನಿಖೆಯನ್ನು ಪ್ರಾರಂಭಿಸಿ ಅನುರಾಗ್ ಪಾಂಡೆ, ಜತಿನ್ ಸಿಂಗ್, ರಂಜೀತ್ ತ್ರಿಪಾಠಿ, ವಿಶಾಲ್ ಯಾದವ್ ಮತ್ತು ಉತ್ಕರ್ಷ್ ಸಿಂಗ್ ಎಂಬ ಐದು ವಿದ್ಯಾರ್ಥಿಗಳನ್ನು ತಕ್ಷಣ ವಿಶ್ವವಿದ್ಯಾಲಯದಿಂದ ಹೊರಹಾಕಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ವಿಶ್ವವಿದ್ಯಾಲಯವು ಸಂಪೂರ್ಣ ತನಿಖಾ ವರದಿಯನ್ನು ಪೊಲೀಸರಿಗೆ ಹಸ್ತಾಂತರಿಸಿದೆ.
ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳು, ಈ ಹಲ್ಲೆಯು ಕ್ಯಾಂಪಸ್‌ನಲ್ಲಿ ಭದ್ರತಾ ವೈಫಲ್ಯ ಮತ್ತು ತಾರತಮ್ಯದ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.ವಿದ್ಯಾರ್ಥಿಯೊಬ್ಬರ ಮೇಲೆ ಅವನ ರಾಜ್ಯದ ಬಗ್ಗೆ ಕೇಳಿದ ನಂತರ ದಾಳಿ ನಡೆಸಿದರೆ ಅದು ಸ್ವೀಕಾರಾರ್ಹವಲ್ಲ ಎಂದು ಎನ್‌ಸಿಸಿ ಕೆಡೆಟ್ ಅಕ್ಷಯ್ ಹೇಳಿದರು.
ಅಸ್ಸಾಂ ಭಾರತದ ಭಾಗ ಎಂದು ಅವರು ವಿಶ್ವವಿದ್ಯಾಲಯದ ಪ್ರತಿಕ್ರಿಯೆಯನ್ನು ಪ್ರಶ್ನಿಸಿದರು. ಸಮಿತಿ ರಚಿಸಲಾಗಿದ್ದರೂ, ಯಾವುದೇ ನಿರ್ದಿಷ್ಟ ಫಲಿತಾಂಶಗಳು ಗೋಚರಿಸದ ಕಾರಣ ವಿದ್ಯಾರ್ಥಿಗಳು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಮತ್ತೊಬ್ಬ ಎನ್‌ಸಿಸಿ ಕೆಡೆಟ್ ರಿಂಕಿ ಯಾದವ್ ಹೇಳಿದರು.
ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಅಮರಕಂಟಕ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಾಗಿದ್ದು, ನಂತರ ಬಲಿಪಶುವಿನ ಹೇಳಿಕೆಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಕೊಲೆ ಯತ್ನ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಹಿರೋಜ್ ಜ್ಯೋತಿ ದಾಸ್ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ. ಪ್ರಕರಣ ತನಿಖೆಯಲ್ಲಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಈ ಘಟನೆಯು ಬಲವಾದ ರಾಜಕೀಯ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ. ಶಹದೋಲ್ ಸಂಸದ ಹಿಮಾದ್ರಿ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ನಲ್ಲಿ, ಈ ಹಲ್ಲೆಯನ್ನು ಅತ್ಯಂತ ಖಂಡನೀಯ ಮತ್ತು ಕಳವಳಕಾರಿ ಎಂದು ಕೆರೆದಿದ್ದು, ಇದು ವಿದ್ಯಾರ್ಥಿಗಳ ಸುರಕ್ಷತೆ ಜತೆಗೆ ವಿಶ್ವವಿದ್ಯಾಲಯದ ಘನತೆ ಮತ್ತು ಶೈಕ್ಷಣಿಕ ವಾತಾವರಣಕ್ಕೂ ಹಾನಿಯನ್ನುಂಟುಮಾಡಿದೆ ಎಂದರು. ಅಪರಾಧಿಗಳು ಮತ್ತು ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ,(ಏಜನ್ಸೀಸ್).