ಪತಿ ಆಶಿಶ್ ಮತ್ತು ಆರ್ಯ ಬಲ್ಲವಾರ್ 
ದೇಶ

ಮಿಲ್ಕ್​ಶೇಕ್​ಗೆ ವಿಷ ಬೆರೆಸಿ ಹೆಡ್​ ಕಾನ್ಸ್​ಟೇಬಲ್​ ತಂದೆಯನ್ನೇ ಕೊಂದಿದ್ದ ಪುತ್ರಿ; ಮೂರು ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ; ನಾಲ್ವರ ಬಂಧನ | Daughter kills father

ಮುಂಬೈ: ಮಹಾರಾಷ್ಟ್ರದ ಚಂದ್ರಾಪುರದಲ್ಲಿ 2023 ಏಪ್ರಿಲ್ 25ರಂದು ಬೆಳಗ್ಗೆ ಹಠಾತ್ ಮೃತಪಟ್ಟಿದ್ದ ಹೆಡ್​ಕಾನ್ಸ್​ಟೇಬಲ್ ಜಯಂತ್ ಬಲ್ಲವಾರ್(45) ಅವರ ಅಸಹಜ ಸಾವು ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನ ಜೊತೆಗೆ ಮದುವೆಗೆ ಒಪ್ಪದ ಹಿನ್ನೆಲೆ ಅವರ ಪುತ್ರಿ ಕಾನ್ಸ್​ಟೇಬಲ್ ಆರ್ಯ ಮಿಲ್ಕ್​ಶೇಕ್​ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಳೆ ಎಂದು ಬಹಿರಂಗವಾಗಿದೆ.
ಮೂರು ವರ್ಷಗಳ ಹಿಂದೆ ಜಯಂತ್ ಅವರ ಸಾವನ್ನು ಕೇವಲ ಹಠಾತ್ ಅನಾರೋಗ್ಯ ಎಂದು ದಾಖಲಿಸಿ ಯಾವುದೇ ಅಪರಾಧದ ಶಂಕೆ ಇಲ್ಲ ಎಂದು ಪ್ರಕರಣವನ್ನು ಮುಗಿಸಲಾಗಿತ್ತು. ಆದರೆ ಈಗ ಮಗಳು ಮತ್ತು ಅವರ ಪತಿ ನಡುವಿನ ಕಲಹದಿಂದಾಗಿ ಪತಿ ಪೊಲೀಸ್ ಠಾಣೆಗೆ ಹಾಜರಾಗಿ ತಪ್ಪನ್ನು ಒಪ್ಪಿಕೊಂಡಿದ್ದು ಪೂರ್ವ ನಿಯೋಜಿತ ಕೊಲೆ ಎಂದು ಸಾಬೀತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರಿ ಕಾನ್ಸ್​ಟೇಬಲ್ ಆರ್ಯ ಮತ್ತು ಅವರ ಪತಿ ಆಶಿಶ್ ಶೆಡ್ಮಾಕೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಘಟನೆಯ ಹಿನ್ನೆಲೆ

2022ರಲ್ಲಿ ಆರ್ಯ ಆಶಿಶ್ ಜೊತೆ ಪ್ರೀತಿಯಲ್ಲಿದ್ದಳು ಎನ್ನಲಾಗಿದೆ. ಈ ವೇಳೆ ಅವರ ತಂದೆ ಹೆಡ್​ ಕಾನ್ಸ್​ಟೇಬಲ್ ಆಗಿದ್ದ ಜಯಂತ್ ಬಲ್ಲವಾರ್ ಅವರು ಇಬ್ಬರ ಪ್ರೀತಿಯನ್ನು ವಿರೋಧಿಸಿ ಮದುವೆಗೆ ವಿರೋಧಿಸಿದ್ದರು ಎನ್ನಲಾಗಿದೆ. ಇದರಿಂದ ತಮ್ಮ ಮುದುವೆಗೆ ಅಡ್ಡಿಯಾದ ತಂದೆಯನ್ನೇ ಮುಗಿಸಲು ಇಬ್ಬರು ಸಂಚು ಮಾಡಿದ್ದು, ಸಂಬಂಧಿಯೊಬ್ಬನಿಗೆ 5 ಸಾವಿರ ನೀಡಿ ಮೂರನೇ ವ್ಯಕ್ತಿ ಮೂಲಕ ವಿಷವನ್ನು ತರಿಸಿಕೊಂಡಿದ್ದರು ಎನ್ನಲಾಗಿದೆ.
2025 ಏಪ್ರಿಲ್ 25ರಂದು ತಂದೆ ಜಯಂತ್ ಬಲ್ಲವಾರ್ ಬೆಳಗ್ಗೆ ಡ್ಯೂಟಿಗೆ ತೆರಳುವಾಗ ಪುತ್ರಿ ಅವರಿಗೆ ವಿಷ ಬೆರೆಸಿ ಮಿಲ್ಕ್​ಶೇಕ್ ನೀಡಿದ್ದಾರೆ. ಅದನ್ನು ಕುಡಿದು ತೆರಳಿದ್ದ ಜಯಂತ್ ಚಂದ್ರಾಪುರದಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಆಡಳಿತ ಕಟ್ಟಡವನ್ನು ತಲುಪುವ ಹೊತ್ತಿಗೆ ತಲೆತಿರುಗಿ, ಕುಸಿದು ಬಿದ್ದು ಸಾವನ್ನಪ್ಪಿದ್ದರು. ಸಹಜ ಸಾವು ಎಂದು ಮರಣೋತ್ತರ ಪರೀಕ್ಷೆ ನಡೆಸದ ಹಿನ್ನೆಲೆ ಪ್ರಕರಣವನ್ನು ಮುಚ್ಚಿ ಹಾಕಲಾಗಿತ್ತು ಎನ್ನಲಾಗಿದೆ.

ಕೊಲೆ ಬೆಳಕಿಗೆ ಬಂದಿದ್ದೇಗೆ?

ಜಯಂತ್ ಬಲ್ಲವಾರ್ ಅವರು ಮೃತರಾದ ಬಳಿಕ ಆರ್ಯ ಮತ್ತು ಆಶಿಶ್ ಮದುವೆಯಾಗಿದ್ದಾರೆ. ನಂತರ ಇಬ್ಬರು ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೇಬಲ್ ಹುದ್ದೆಯನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. ಬಹುಬೇಗನೇ ಇಬ್ಬರ ನಡುವೆ ಕೌಟುಂಬಿಕ ಕಲಹ ಎದ್ದಿದೆ. ಅಶಿಸ್ತು ಮತ್ತು ಕೆಟ್ಟ ನಡವಳಿಕೆಯಿಂದಾಗಿ ಆಶಿಶ್ ಅವರನ್ನು ಪೊಲೀಸ್ ತರಬೇತಿಯಿಂದ ವಜಾಗೊಳಿಸಲಾಗಿದೆ.
ಆರ್ಯ ತನ್ನ ಅತ್ತೆಯ ಮನೆಗೆ ಹೋಗುವ ಬದಲು ತನ್ನ ಹೆತ್ತವರ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾಳೆ. ಇದರಿಂದ ಪತಿ-ಪತ್ನಿ ನಡುವೆ ಪದೇ-ಪದೇ ಜಗಳವಾಗಿದೆ. ಇದರಿಂದ ಪತ್ನಿ ಮೇಲೆ ಕ್ರೋಧಗೊಂಡ ಪತಿ ಆಶಿಶ್ ಕಳೆದ ವಾರ ಪೊಲೀಸ್ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಪತ್ನಿ ಮೂರು ವರ್ಷಗಳ ಹಿಂದೆ ತನ್ನ ತಂದೆಗೆ ವಿಷ ನೀಡಿದ್ದಳು, ಈ ಕೃತ್ಯವನ್ನು ಮೊದಲೇ ಯೋಜಿಸಲಾಗಿತ್ತು. ಮತ್ತು ವಿಷವನ್ನು ಸೋದರಸಂಬಂಧಿಯ ಮೂಲಕ ತರಿಸಲಾಗಿತ್ತು ಎಂಬುದನ್ನು ಪೊಲೀಸರಿಗೆ ತಿಳಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರ್ಯ ಬಲ್ಲವಾರ್, ಆಕೆಯ ಪತಿ ಆಶಿಶ್ ಶೆಡ್ಮಾಕೆ, ಆಕೆಯ ಸೋದರಸಂಬಂಧಿ ಚೈತನ್ಯ ಗೆದಮ್ ಹಾಗೂ ವಿಷ ಸರಬರಾಜು ಮಾಡಿದ ನಾಲ್ಕನೇ ಆರೋಪಿ ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).