ಸಾಂದರ್ಭಿಕ ಚಿತ್ರ 
ದೇಶ

ದಿತ್ವಾ ಚಂಡಮಾರುತ: ಉತ್ತರ ತಮಿಳುನಾಡು, ಪುದುಚೇರಿಯಲ್ಲಿ ಭಾರಿ ಮಳೆ, ರೆಡ್​ ಅಲರ್ಟ್ ನೀಡಿದ ಐಎಂಡಿ | Cyclone Ditwah

ಚೆನ್ನೈ: ಬಂಗಾಳಕೊಲ್ಲಿಯ ನೈಋತ್ಯ ವಿಭಾಗದಲ್ಲಿ ನಿರ್ಮಾಣವಾಗಿರುವ ದಿತ್ವಾ ಚಂಡಮಾರುತವು(Cyclone Ditwah) ಗಂಟೆಗೆ 7 ಕಿಮೀ ವೇಗದಲ್ಲಿ ಉತ್ತರದ ಕಡೆ ತಿರುಗುತ್ತಿದ್ದು, ತಮಿಳುನಾಡು ಉತ್ತರ, ಪುದುಚೇರಿ ಹಾಗೂ ಆಂಧ್ರ ಕರಾವಳಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ, ಚಂಡಮಾರುತವು ಅಕ್ಷಾಂಶ 10.5°N ಮತ್ತು ರೇಖಾಂಶ 80.6°E ಬಳಿ ಕೇಂದ್ರೀಕೃತವಾಗಿದ್ದು, ಜಾಫ್ನಾ (ಶ್ರೀಲಂಕಾ) ದಿಂದ ಈಶಾನ್ಯಕ್ಕೆ ಸುಮಾರು 110 ಕಿಮೀ, ವೇದರಣ್ಯಂ ನಿಂದ ಪೂರ್ವಕ್ಕೆ 80 ಕಿಮೀ, ಕಾರೈಕಲ್ ನಿಂದ ಪೂರ್ವ-ಆಗ್ನೇಯಕ್ಕೆ 100 ಕಿಮೀ, ಪುದುಚೇರಿಯ ದಕ್ಷಿಣ-ಆಗ್ನೇಯಕ್ಕೆ 180 ಕಿಮೀ ಮತ್ತು ಚೆನ್ನೈ ನಿಂದ ದಕ್ಷಿಣಕ್ಕೆ 280 ಕಿಮೀ ದೂರದಲ್ಲಿದೆ. ಇದು ಉತ್ತರ-ವಾಯುವ್ಯಕ್ಕೆ ಚಲಿಸುವ ಮತ್ತು ಇಂದು ಬೆಳಗಿನ ಜಾವ ತಮಿಳುನಾಡು-ಪುದುಚೇರಿ ಕರಾವಳಿಯ ಬಳಿಯ ನೈಋತ್ಯ ಬಂಗಾಳ ಕೊಲ್ಲಿಯನ್ನು ತಲುಪುವ ನಿರೀಕ್ಷೆಯಿದೆ.
ಈ ಚಂಡಮಾರುತವು ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ತಮಿಳುನಾಡು ಕರಾವಳಿಯಿಂದ ಸುಮಾರು 50 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದ್ದು, ಸಂಜೆಯ ವೇಳೆಗೆ ಹತ್ತಿರಕ್ಕೆ ಚಲಿಸಲಿದೆ. ಆದಾಗ್ಯೂ, ಗಾಳಿಯ ವೇಗ ಬೆಳಿಗ್ಗೆ 90 ಕಿ.ಮೀ ನಿಂದ ಸಂಜೆ 55-65 ಕಿ.ಮೀ ಗೆ ಇಳಿಯುವ ಸಾಧ್ಯತೆಯಿದೆ.
ತಮಿಳುನಾಡಿನ ಕಡಲೂರು, ನಾಗಪಟ್ಟಣಂ, ಮೈಲುದುತುರೈ, ವಿಲ್ಲುಪುರಂ ಹಾಗೂ ಚೆಂಗಲ್ಪಟ್ಟು ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಲ್ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿನ ಚೆನ್ನೈ, ಪುದುಕೊಟ್ಟೈ, ಅರಿಯಲೂರು, ತಂಜಾವೂರು, ತಿರುವರೂರ್, ಪೆರಂಬಲೂರು, ತಿರುಚ್ಚಿ, ಸೇಲಂ, ಕಲ್ಲಕುರಿಚಿ, ತಿರುವಣ್ಣಾಮಲೈ, ಕಾಂಚೀಪುರಂ, ತಿರುವಳ್ಳೂರು ಮತ್ತು ರಾಣಿಪೇಟ್ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ (ಏಜೆನ್ಸೀಸ್).