ಕೋಟಾ: ರಾಜಸ್ಥಾನದ ಕೋಟಾ ಎಂದ ಕೂಡಲೇ ನೆನಪಾಗುವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಹಗಲಿರುಳು ಓದುವ ವಿದ್ಯಾರ್ಥಿಗಳ ಚಿತ್ರ ನಮ್ಮ ಕಣ್ಮುಂದೆ ಬರುತ್ತದೆ. ಆದರೆ ಕೋಟಾದ ಹಾಸ್ಟೆಲ್ ಕೊಠಡಿಯೊಂದರಲ್ಲಿ ನಡೆದಿರುವ ಘಟನೆಯೊಂದು ಈಗ ಸೋಷಿಯಲ್ ಮೀಡಿಯಾ ಟ್ರೆಂಡ್ ಆಗಿ ಬದಲಾಗಿದೆ.
ರಾತ್ರಿ ವೇಳೆ ವಿದ್ಯಾರ್ಥಿ ಮಲಗಿದ್ದ ಹಾಸಿಗೆಯ ಮೇಲೆಯೇ ಗೋಡೆಗೆ ಫಿಕ್ಸ್ ಮಾಡಿದ್ದ ಕ್ಯಾಬಿನೆಟ್ ಧಡೀರನೆ ಕುಸಿದು ಬಿದ್ದಿದೆ. ಸೆಕೆಂಡುಗಳ ಅಂತರದಲ್ಲಿ ಆ ವಿದ್ಯಾರ್ಥಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಭಯಾನಕ ದೃಶ್ಯ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಕಾಣುವಂತೆ, ಹಾಸ್ಟೆಲ್ ರೂಮಿನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಹಾಸಿಗೆಯ ಮೇಲೆ ನೆಮ್ಮದಿಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಸುತ್ತಲೂ ಎಂದಿನಂತೆ ಓದುವ ಪುಸ್ತಕಗಳು, ನೋಟ್‌ಬುಕ್‌ಗಳು ಹರಡಿಕೊಂಡಿವೆ. ಎಲ್ಲವೂ ಶಾಂತವಾಗಿದ್ದ ಹೊತ್ತಲ್ಲೇ, ಯಾವುದೇ ಸದ್ದು-ಗದ್ದಲವಿಲ್ಲದೆ, ಗೋಡೆಗೆ ಜೋಡಿಸಲಾಗಿದ್ದ ಭಾರವಾದ ಬಿಳಿ ಬಣ್ಣದ ಸ್ಟೋರೇಜ್ ಕ್ಯಾಬಿನೆಟ್ ದಿಢೀರನೆ ಕಳಚಿ ನೇರವಾಗಿ ವಿದ್ಯಾರ್ಥಿಯ ಮೈಮೇಲೆಯೇ ಬಿದ್ದಿದೆ.
ಕ್ಯಾಬಿನೆಟ್‌ನಲ್ಲಿದ್ದ ಭಾರವಾದ ಪುಸ್ತಕಗಳು, ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಹಾಸಿಗೆಯ ಮೇಲೆ ಅಪ್ಪಳಿಸಿವೆ. ಘಟನೆಯ ಆಘಾತಕ್ಕೆ ವಿದ್ಯಾರ್ಥಿ ಮೊದಲಿಗೆ ಶಾಕ್‌ಗೆ ಒಳಗಾಗಿ ಮೌನವಾಗಿಯೇ ಉಳಿಯುತ್ತಾನೆ. ಕೆಲವೇ ಸೆಕೆಂಡುಗಳ ನಂತರ ಪರಿಸ್ಥಿತಿ ಅರ್ಥವಾಗಿ ನಿಧಾನವಾಗಿ ಎದ್ದು ಕುಳಿತು, ತನ್ನ ಮೊಬೈಲ್ ಕೈಗೆತ್ತಿಕೊಳ್ಳುತ್ತಾನೆ. ಅದೃಷ್ಟವಶಾತ್ ಭಾರವಾದ ಮರದ ಕಬೋರ್ಡ್ ಬಿದ್ದರೂ ಆತನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.
ಹಾಸ್ಟೆಲ್‌ನಲ್ಲಿ ಈ ಹಿಂದೆ ಪದೇ ಪದೇ ಸಣ್ಣಪುಟ್ಟ ಕಳ್ಳತನಗಳು ನಡೆಯುತ್ತಿದ್ದ ಕಾರಣ, ತನ್ನ ವಸ್ತುಗಳನ್ನು ರಕ್ಷಿಸಿಕೊಳ್ಳಲು ವಿದ್ಯಾರ್ಥಿಯೇ ಸ್ವಂತ ಖರ್ಚಿನಲ್ಲಿ ಕೊಠಡಿಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದನು. ಕಳ್ಳರನ್ನು ಹಿಡಿಯಲೆಂದು ಹಾಕಿದ್ದ ಈ ಕ್ಯಾಮೆರಾದಲ್ಲಿ, ಆತನ ಜೀವಕ್ಕೇ ಎದುರಾಗಲಿದ್ದ ಅನಿರೀಕ್ಷಿತ ದುರಂತದ ದೃಶ್ಯ ರೆಕಾರ್ಡ್ ಆಗಿದೆ. ಈ ವಿಡಿಯೋ ಏಪ್ರಿಲ್ 6, 2025ರಲ್ಲಿ ಸೆರೆಯಾಗಿದ್ದು, ಇತ್ತೀಚೆಗೆ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ನೀಟ್ (NEET), ಜೆಇಇ (JEE) ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕನಸು ಹೊತ್ತು ಕೋಟಾಗೆ ಬರುತ್ತಾರೆ. ತಿಂಗಳಿಗೆ ಸಾವಿರಾರು ರೂಪಾಯಿ ಬಾಡಿಗೆ, ಮೆಸ್ ಫೀಸ್ ವಸೂಲಿ ಮಾಡುವ ಹಾಸ್ಟೆಲ್ ಮಾಲೀಕರು, ಕೊಠಡಿಗಳ ಕನಿಷ್ಠ ಸುರಕ್ಷತೆಯನ್ನೂ ಗಮನಿಸುತ್ತಿಲ್ಲವೇ ಎಂದು ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ.
ಕಳಪೆ ಮಟ್ಟದ ಫಿಟ್ಟಿಂಗ್ ಮತ್ತು ಹಾಳಾದ ಪೀಠೋಪಕರಣಗಳಿಂದಾಗಿ ವಿದ್ಯಾರ್ಥಿಯೊಬ್ಬ ಪ್ರಾಣಾಪಾಯದ ದವಡೆಗೆ ಸಿಲುಕಬೇಕಾಯಿತು ಎಂದು ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು, "ದೇವರೇ ಆ ಹುಡುಗನ ಜೀವ ಉಳಿಸಿದ್ದಾನೆ. ಆದರೆ ಇಂತಹ ನಿರ್ಲಕ್ಷ್ಯ ವಹಿಸುವ ಹಾಸ್ಟೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಕಾಮೆಂಟ್‌ಗಳಲ್ಲಿ ಒತ್ತಾಯಿಸುತ್ತಿದ್ದಾರೆ, (ಏಜೆನ್ಸೀಸ್).