ನಿನ್ನೆಯಿಂದ ವೈರಲ್​ ಆಗುತ್ತಿರುವ ಮೊಸಳೆ ದಾಳಿಯ ವಿಡಿಯೋ ನಿಜವೇ? ಭೀಕರ ದುರಂತದ ಹಿಂದಿನ ಸತ್ಯಾಂಶ ಇಲ್ಲಿದೆ...Crocodile Attack 
ದೇಶ

ನಿನ್ನೆಯಿಂದ ವೈರಲ್​ ಆಗುತ್ತಿರುವ ಮೊಸಳೆ ದಾಳಿಯ ವಿಡಿಯೋ ನಿಜವೇ? ಭೀಕರ ದುರಂತದ ಹಿಂದಿನ ಸತ್ಯಾಂಶ ಇಲ್ಲಿದೆ...Crocodile Attack

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶದಲ್ಲಿ ಮುಖ ತೊಳೆಯಲು ಹೋದ 12 ವರ್ಷದ ಬಾಲಕನನ್ನು ನದಿಗೆ ಎಳೆದೊಯ್ದು ಕೊಂದ ಕ್ರೂರ ಮೊಸಳೆ
  • ಬಹರೈಚ್ ಘಾಘ್ರಾ ನದಿಯಲ್ಲಿ ಗದ್ದೆ ಕೆಲಸ ಮುಗಿಸಿ ಕೈಕಾಲು ತೊಳೆಯುವಾಗ ಬಾಲಕನ ಮೇಲೆ ಭೀಕರ ಮೊಸಳೆ ದಾಳಿ
  • ಕ್ಯಾಮೆರಾದಲ್ಲಿ ಸೆರೆಯಾಯಿತು ಬಾಲಕನನ್ನು ಮೊಸಳೆ ನದಿಯ ಆಳಕ್ಕೆ ಎಳೆದೊಯ್ಯುವ ಅತ್ಯಂತ ಭಯಾನಕ ವಿಡಿಯೋ
  • ನದಿಗೆ ಧುಮುಕಿ ಏಳು ನಿಮಿಷ ಹೋರಾಡಿದರೂ ಬಾಲಕನನ್ನು ಮೊಸಳೆಯ ದವಡೆಯಿಂದ ಬದುಕಿಸಲಾಗದ ಚಿಕ್ಕಪ್ಪ
ಲಖನೌ: ಉತ್ತರ ಪ್ರದೇಶದ ಬಹರೈಚ್‌ನಲ್ಲಿ ನದಿಯ ದಡದಲ್ಲಿ ಮುಗ್ಧ ಬಾಲಕನೊಬ್ಬ ಮುಖ ತೊಳೆದುಕೊಳ್ಳುತ್ತಿದ್ದಾಗ, ದಿಢೀರನೆ ದಾಳಿ ಮಾಡಿದ ಕ್ರೂರ ಮೊಸಳೆಯೊಂದು ( Crocodile ) ಆತನನ್ನು ನೀರಿನ ಆಳಕ್ಕೆ ಎಳೆದೊಯ್ದು ತಿಂದು ಹಾಕಿದ ಆಘಾತಕಾರಿ ಘಟನೆ ನಡೆದಿದೆ. ಕೇವಲ 12 ವರ್ಷದ ಆ ಬಾಲಕ ಭೀಕರ ದುರಂತದ ಸಣ್ಣ ಸುಳಿವೂ ಇಲ್ಲದೆ ನದಿಯ ನೀರನ್ನು ಮುಟ್ಟಿದ ಕೆಲವೇ ಕ್ಷಣಗಳಲ್ಲಿ ಆತನ ಪ್ರಾಣವನ್ನು ಮೊಸಳೆ ಕಸಿದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದ ಭಯಾನಕ ವಿಡಿಯೋ ವೈರಲ್​ ಆಗಿದ್ದು, ಅದನ್ನು ನೋಡಿದ ದೇಶದ ಜನತೆ ಕಂಬನಿ ಮಿಡಿದಿದ್ದಾರೆ.
ಗುರುವಾರ ಸಂಜೆ ನಡೆದ ಈ ಆಘಾತಕಾರಿ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸುನಿಲ್ ಸಿಂಗ್ ಎಂಬ ಬಾಲಕ ತನ್ನ ಚಿಕ್ಕಪ್ಪನ ಜೊತೆಗೆ ಗದ್ದೆಯ ನಾಟಿ ಕೆಲಸಕ್ಕೆ ಸಹಾಯ ಮಾಡಲು ಹೋಗಿದ್ದಾಗ ದುರಂತ ಸಂಭವಿಸಿದೆ. ದಿನದ ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ಮುನ್ನ ಕೈಕಾಲು ಹಾಗೂ ಮುಖ ತೊಳೆಯಲು ಆತ ಘಾಘ್ರಾ ನದಿಯ ದಡಕ್ಕೆ ಹೋದಾಗ, ನೀರಿನೊಳಗಿಂದ ದಿಢೀರನೆ ನುಗ್ಗಿ ಬಂದ ಮೊಸಳೆ ಆತನ ಮೇಲೆ ಭೀಕರವಾಗಿ ದಾಳಿ ನಡೆಸಿ ಎಳೆದೊಯ್ದಿದೆ.
ಆ ಭೀಕರ ಜಲಚರವು ಬಾಲಕನನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ನದಿಯೊಳಕ್ಕೆ ಎಳೆದೊಯ್ಯುತ್ತಿದ್ದಂತೆ, ಸ್ಥಳದಲ್ಲಿದ್ದ ಸುನಿಲ್ ಚಿಕ್ಕಪ್ಪ ಹಾಗೂ ಗ್ರಾಮಸ್ಥರು ಆತನನ್ನು ರಕ್ಷಿಸಲು ತಕ್ಷಣವೇ ಧಾವಿಸಿ ಬಂದು ಮಗುವನ್ನು ದಡಕ್ಕೆ ಎಳೆಯಲು ತೀವ್ರ ಪ್ರಯತ್ನ ನಡೆಸಿದರಾದರೂ, ಮೊಸಳೆ ಆತನನ್ನು ನೀರಿನ ಆಳಕ್ಕೆ ಎಳೆದೊಯ್ದಿದ್ದರಿಂದ ಪ್ರಯತ್ನ ಫಲ ನೀಡಲಿಲ್ಲ.
ಮಗುವಿನ ಪ್ರಾಣವನ್ನು ಮೊಸಳೆ ಬಲಿಪಡೆದ ದುರಂತಮಯ ಘಟನೆಯ ಕೆಲ ವಿಡಿಯೋ ತುಣುಕುಗಳು ಅಪ್ಪಟ ನಿಜವಾದದ್ದು ಎಂಬುದನ್ನು ಪೊಲೀಸ್ ಅಧಿಕಾರಿಗಳೇ ಇದೀಗ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ವೈರಲ್​ ಆಗಿರುವ ವಿಡಿಯೋ ನೋಡಿದರೆ, ಎಂಥವರ ಎದೆ ಒಂದು ಕ್ಷಣ ಝಲ್​ ಎನಿಸದೇ ಇರದು. ಅಲ್ಲದೆ, ಬಾಲಕ ಭೀಕರ ಸಾವನ್ನು ನೋಡಿದ ಜನರು ಕಂಬನಿ ಮಿಡಿಯುತ್ತಿದ್ದಾರೆ.
ನಾನು ತಕ್ಷಣ ನದಿಗೆ ಧುಮುಕಿ ಅವನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಅವನನ್ನು ವಾಪಸ್ ದಡಕ್ಕೆ ಎಳೆಯಲು ಸುಮಾರು ಏಳು ನಿಮಿಷಗಳ ಕಾಲ ನದಿಯಲ್ಲೇ ಹೋರಾಡಿದೆ ಆದರೆ, ಆ ಮೊಸಳೆ ತುಂಬಾ ಬಲಶಾಲಿಯಾಗಿದ್ದರಿಂದ ಅವನನ್ನು ನೀರಿನ ಆಳಕ್ಕೆ ಎಳೆದೊಯ್ಯಿತು, ನನ್ನಿಂದ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಬಾಲಕನ ಚಿಕ್ಕಪ್ಪ ವಿಜಯ್ ರಾಜ್ ಸಿಂಗ್ ಇಂಗ್ಲಿಷ್ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಹಲವು ಗಂಟೆಗಳ ಕಾಲ ನಡೆದ ಸುದೀರ್ಘ ಹುಡುಕಾಟದ ನಂತರ, ರಾತ್ರಿ 10 ಗಂಟೆಯ ಸುಮಾರಿಗೆ ಗ್ರಾಮಸ್ಥರು ನದಿಯಿಂದ ಬಾಲಕನ ಶವವನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಮೊಸಳೆಯು ಬಾಲಕನ ದೇಹದ ಕೆಲವು ಭಾಗಗಳನ್ನು ಈಗಾಗಲೇ ತಿಂದುಹಾಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದು, ಬಾಲಕನ ಬಲಗಾಲು ಮತ್ತು ಸೊಂಟದ ಕೆಳಗಿನ ಭಾಗವನ್ನು ಮೊಸಳೆ ತಿಂದುಹಾಕಿದೆ ಎಂದು ಫಾರೆಸ್ಟ್ ರೇಂಜರ್ ಸಾಕಿಬ್ ಅನ್ಸಾರಿ ಮಾಹಿತಿ ನೀಡಿದ್ದಾರೆ.
ಆರನೇ ತರಗತಿ ವಿದ್ಯಾರ್ಥಿಯಾಗಿದ್ದ ಸುನಿಲ್, ಈಗಾಗಲೇ ತನ್ನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದನು ಹಾಗೂ ಮೂವರು ಸಹೋದರಿಯರಿಗೆ ಏಕೈಕ ಸಹೋದರನಾಗಿದ್ದನು. ಪೊಲೀಸರು ಶುಕ್ರವಾರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಸರ್ಕಾರದ ಪರಿಹಾರ ಯೋಜನೆಯಡಿ ಸಂತ್ರಸ್ತ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಈ ಘಟನೆಗೂ ಕೆಲವು ತಿಂಗಳುಗಳ ಮುನ್ನ ಗುಜರಾತ್‌ನ ವಡೋದರಾ ಜಿಲ್ಲೆಯಲ್ಲೂ ಇಂತಹುದೇ ಭೀಕರ ಮೊಸಳೆ ದಾಳಿ ನಡೆದಿತ್ತು. ಮೇ ತಿಂಗಳಲ್ಲಿ ವಘೋಡಿಯಾ ತಾಲೂಕಿನ ಕಾಗ್‌ದಿಪುರ ಗ್ರಾಮದ ಬಳಿ 22 ವರ್ಷದ ಮಿಥುನ್ ಮಹೇಶ್ ಭಾಯ್ ವಸಾವ ಎಂಬ ಯುವಕ ದನ ಮೇಯಿಸುತ್ತಿದ್ದಾಗ, ನೀರು ಕುಡಿಯಲು ನದಿಯ ದಡಕ್ಕೆ ತೆರಳಿದ್ದ ವೇಳೆ ಮೊಸಳೆಯೊಂದು ಆತನನ್ನು ದೇವ್ ನದಿಗೆ ಎಳೆದೊಯ್ದು ಬಲಿಪಡೆದಿತ್ತು, (ಏಜೆನ್ಸೀಸ್​).