ದೇಶ

ಇಂಡಿಯಾ ಬ್ಲಾಕ್ ರ‍್ಯಾಲಿಗೆ ಕೌಂಟರ್: ದೆಹಲಿಯಲ್ಲಿಂದು ಸಿಖ್ ಗಲಭೆ ಸಂತ್ರಸ್ತರ ಜೊತೆ ಜಾಥಾ ನಡೆಸಲಿರುವ ಬಿಜೆಪಿ | BJP

ಎಸ್​ಐಆರ್ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ನಡೆಯಲಿರುವ ಇಂಡಿಯಾ ಒಕ್ಕೂಟದ ಪ್ರತಿಭಟನೆಗೆ ಕೌಂಟರ್ ಆಗಿ ಬಿಜೆಪಿಯೂ ಭರ್ಜರಿ ಸಿದ್ಧತೆ ನಡೆಸಿದ್ದು, ಹರಿನಗರ ಪ್ರದೇಶದಲ್ಲಿ ಸಿಖ್ ಗಲಭೆಯ ಸಂತ್ರಸ್ತರ ಜೊತೆ ಜಾಥಾ ನಡೆಸಲಿದೆ.

ನವದೆಹಲಿ: ಎಸ್​ಐಆರ್ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ನಡೆಯಲಿರುವ ಇಂಡಿಯಾ ಒಕ್ಕೂಟದ ಪ್ರತಿಭಟನೆಗೆ ಕೌಂಟರ್ ಆಗಿ ಬಿಜೆಪಿಯೂ ಭರ್ಜರಿ ಸಿದ್ಧತೆ ನಡೆಸಿದ್ದು, ಹರಿನಗರ ಪ್ರದೇಶದಲ್ಲಿ ಸಿಖ್ ಗಲಭೆಯ ಸಂತ್ರಸ್ತರ ಜೊತೆ ಜಾಥಾ ನಡೆಸಲಿದೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ನೇತೃತ್ವದಲ್ಲಿ ಈ ಮೆರವಣಿಗೆಯು ಭಾನುವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಹರಿನಗರ ಪ್ರದೇಶದಲ್ಲಿ ನಡೆಯಲಿದೆ. ವಿಶೇಷವೆಂದರೆ, ಈ ಮೆರವಣಿಗೆಯಲ್ಲಿ 1984ರ ಸಿಖ್ ಗಲಭೆಯ ಸಂತ್ರಸ್ತರು ಹಾಗೂ ಅವರ ಕುಟುಂಬದ ಸದಸ್ಯರು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಜಾಥಾದಲ್ಲಿ ಸುಮಾರು 5 ಸಾವಿರಕ್ಕಿಂತ ಹೆಚ್ಚಿನ ಬಿಜೆಪಿ ಕಾರ್ಯಕರ್ತರು, ಬಿಜೆಪಿಯ ಹಲವಾರು ಪ್ರಮುಖ ನಾಯಕರು ಹಾಗೂ ಪಕ್ಷದ ಹಿರಿಯ ಸಿಖ್ ಮುಖಂಡರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸಿಖ್ ಗಲಭೆ ಸಂತ್ರಸ್ತರ ಉಪಸ್ಥಿತಿಯು 1984ರ ದೌರ್ಜನ್ಯದ ಕರಾಳ ಇತಿಹಾಸ ಮತ್ತೊಮ್ಮೆ ರಾಜಕೀಯ ಮುನ್ನೆಲೆಗೆ ಬರುವ ಸಾಧ್ಯತೆಯಿದೆ.

ರಾಮಲೀಲಾ ಮೈದಾನದಲ್ಲಿ ಇಂಡಿಯಾ ಬ್ಲಾಕ್ ರ‍್ಯಾಲಿ

ಎಸ್​ಐಆರ್​​ನಲ್ಲಿ ಅಕ್ರಮ ಆರೋಪ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು(ನ. 01) ಬೃಹತ್ ರ‍್ಯಾಲಿ ಆಯೋಜಿಸಲಾಗಿದ್ದು, ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸುವ ನಿರೀಕ್ಷೆಯಿದೆ. ದೆಹಲಿ ಪೊಲೀಸರು ಸಹ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ವೋಟ್ ಬಚಾವೋ, ದೇಶ್ ಬಚಾವೋ ಬ್ಯಾನರ್ ಅಡಿಯಲ್ಲಿ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿದ್ದು, ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ರ್ಯಾಲಿ ನಡೆಯಲಿದೆ. ಮತ್ತು ಮಧ್ಯಾಹ್ನ ಮಿಂಟೋ ರಸ್ತೆ-ಕನ್ನಾಟ್ ಪ್ಲೇಸ್ ಜಂಕ್ಷನ್‌ನಿಂದ ರಾಮಲೀಲಾ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ.

ಇಂಡಿಯಾ ಒಕ್ಕೂಟದ ಹಿರಿಯ ನಾಯಕರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಿಂದ ಮೆರವಣಿಗೆ ಆರಂಭವಾಗುವ ಸ್ಥಳದವರೆಗೆ ತೆರೆದ ಬಸ್‌ಗಳಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ರ‍್ಯಾಲಿಯಲ್ಲಿ ದೇಶಾದ್ಯಂತದ ಜನರು ಭಾಗವಹಿಸುವ ನಿರೀಕ್ಷೆಯಿದೆ. 20,000ಕ್ಕೂ ಹೆಚ್ಚು ಕಾರ್ಯಕರ್ತರು ಸ್ವಯಂಸೇವಕರಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).