ಚೆನ್ನೈ: ತಮಿಳುನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳ ಖರೀದಿಯಲ್ಲಿ ನಡೆದಿರುವ ಬೃಹತ್ ಅಕ್ರಮಗಳ ಬಗ್ಗೆ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಮಂಗಳವಾರ(ನ. 10) ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ(ಡಿವಿಎಸಿ) ನಿರ್ದೇಶನ ನೀಡಿದೆ.
ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪಾರದರ್ಶಕವಾಗಿ ಖರೀದಿಸುವ ಕುರಿತು ಹೈಕೋರ್ಟ್ 2024 ಜೂನ್ 19ರಂದು ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ರಾಮಸುಬ್ಬು ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಆದೇಶಗಳನ್ನು ಹೊರಡಿಸಲಾಗಿದೆ.
ವಂಚನೆಯಲ್ಲಿ ಭಾಗಿಯಾಗಿರುವ ಅಗಲ್ ವಿಲಕ್ಕು ಪಬ್ಲಿಕೇಷನ್ಸ್, ಅದರ ಮಾಲೀಕ ಮೋಹನ್ ಮತ್ತು ಇತರರ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಎಂ.ಡಿ. ಸುಮತಿ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.
ವಂಚನೆಯ ಖರೀದಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಅಮಾನತು ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕಳೆದ ಎರಡು ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಖರೀದಿಗಳಿಗೆ ಕಾರಣರಾದ ಎಲ್ಲಾ ಅಧಿಕಾರಿಗಳನ್ನು ಗುರುತಿಸಿ ಅವರ ವಿವರಗಳನ್ನು ಒದಗಿಸುವಂತೆ ಸಾರ್ವಜನಿಕ ಗ್ರಂಥಾಲಯಗಳ ನಿರ್ದೇಶಕರಿಗೆ ಸೂಚಿಸಿದೆ.
ಇತ್ತೀಚೆಗೆ ಕೊಯಮತ್ತೂರಿನಲ್ಲಿ ಉದ್ಘಾಟಿಸಿರುವ ಪೆರಿಯಾರ್ ವರ್ಲ್ಡ್ ನಾಲೆಡ್ಜ್ ಲೈಬ್ರರಿಗೆ ಎಐ ರಚಿತ ನಕಲಿ ಲೇಖಕರ ಪುಸ್ತಕ ಖರೀದಿ ಸೇರಿದಂತೆ ಹಲವು ಪುಸ್ತಕ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದ ಬೆಳಕಿಗೆ ಬಂದಿದೆ. ತಮಿಳುನಾಡು ಸರ್ಕಾರ ಸಂಬಂಧ ತನಿಖೆಗೆ ಆದೇಶಿಸಿದೆ (ಏಜೆನ್ಸೀಸ್).