ಮದ್ವೆ ಆಗುವಂತೆ ನನ್ನ ಸಹೋದರನ ಮನವೊಲಿಸಿ... ಸಿಜೆಪಿ ಪ್ರತಿಭಟನಾಕಾರನ ಬಳಿ ಪ್ರಿಯಾಂಕಾ ಗಾಂಧಿ ಮನವಿ! CJP
- ರಾಹುಲ್ ಗಾಂಧಿಗೆ ಮದುವೆ ಮಾಡಿಕೊಳ್ಳಲು ಮನವೊಲಿಸುವಂತೆ ವೈರಲ್ ಪ್ರತಿಭಟನಾಕಾರನಲ್ಲಿ ಪ್ರಿಯಾಂಕಾ ವಿನಂತಿ
- ರಾಹುಲ್ ಗಾಂಧಿ ಅವರು ಈಗಲೇ ಮದುವೆಯಾಗುವುದು ಬೇಡ ಎಂಬುದೇ ನನ್ನ ಭಾವನೆ ಎಂದ ಇರ್ಫಾನ್
- ಯೂಟ್ಯೂಬ್ ನೋಡಿ ಸಂವಿಧಾನ ಕಲಿತ ಐಸ್ ವ್ಯಾಪಾರಿ ಮನೆಗೆ ರಾಹುಲ್ ಗಾಂಧಿ ದಿಢೀರ್ ಭೇಟಿ
- ಸಿಜೆಪಿ ಪ್ರತಿಭಟನೆಯಲ್ಲಿ ಧ್ವನಿಯೆತ್ತಿದ ವೈರಲ್ ಕಾರ್ಮಿಕ ಇರ್ಫಾನ್ ಮನೆಗೆ ರಾಹುಲ್ ವಿಸಿಟ್
ನವದೆಹಲಿ: ರಾಜಕೀಯ ಹೋರಾಟಗಳ ನಡುವೆ ಕೆಲವೊಮ್ಮೆ ಜರುಗುವ ಸ್ವಾರಸ್ಯಕರ ಸನ್ನಿವೇಶಗಳು ಸಾರ್ವಜನಿಕರ ಗಮನ ಸೆಳೆಯುವುದು ಸಾಮಾನ್ಯ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' ( CJP ) ಪ್ರತಿಭಟನೆಯಲ್ಲಿ ಧ್ವನಿ ಎತ್ತಿ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದ ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಡುವಿನ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೊಹಮ್ಮದ್ ಇರ್ಫಾನ್ ಅವರ ದೆಹಲಿಯ ಸಾವ್ಡಾ ಜೆಜೆ ಕಾಲೋನಿಯಲ್ಲಿರುವ ಮನೆಗೆ ಭೇಟಿ ನೀಡುವ ಮುನ್ನ, ಪ್ರಿಯಾಂಕಾ ಗಾಂಧಿ ಅವರು ಇರ್ಫಾನ್ಗೆ ದೂರವಾಣಿ ಕರೆ ಮಾಡಿದ್ದರು ಎಂಬ ಕುತೂಹಲಕಾರಿ ಸಂಗತಿ 'ದಿ ಲಾಲಂಟಾಪ್' ಮಾಧ್ಯಮಕ್ಕೆ ಇರ್ಫಾನ್ ನೀಡಿದ ಸಂದರ್ಶನದಲ್ಲಿ ಬೆಳಕಿಗೆ ಬಂದಿದೆ. ಈ ವೇಳೆ ಪ್ರಿಯಾಂಕಾ ಅವರು ರಾಹುಲ್ ಗಾಂಧಿ ಅವರ ವಿವಾಹದ ವಿಚಾರವನ್ನು ಎಳೆದು ತಂದು ತಮಾಷೆಯ ಸಂಭಾಷಣೆ ನಡೆಸಿದ್ದಾರೆ.
ದೂರವಾಣಿ ಕರೆಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ನನ್ನ ಸಹೋದರ ರಾಹುಲ್ ಗಾಂಧಿ ನನ್ನ ಮಾತನ್ನಂತೂ ಕೇಳುವುದಿಲ್ಲ, ನೀವಾದರೂ ಅವರಿಗೆ ಮದುವೆಯಾಗುವಂತೆ ಒಪ್ಪಿಸಿ ಎಂದು ತಮಾಷೆಯಾಗಿ ಇರ್ಫಾನ್ ಅವರಲ್ಲಿ ಕೋರಿದ್ದಾರೆ. ಅದಕ್ಕೆ ಪ್ರತಿಯಾಗಿ ಇರ್ಫಾನ್, ರಾಹುಲ್ ಗಾಂಧಿ ಅವರು ಈಗಲೇ ಮದುವೆಯಾಗುವುದು ಬೇಡ ಎಂಬುದೇ ನನ್ನ ಭಾವನೆ ಎಂದು ಹಾಸ್ಯದ ಧಾಟಿಯಲ್ಲೇ ಉತ್ತರಿಸಿರುವುದಾಗಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ಅವರ ಸಂದರ್ಶನ ವೈರಲ್ ಆದ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ಇರ್ಫಾನ್ ಅವರ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ, ಕಾರ್ಮಿಕರ ಹಕ್ಕುಗಳು ಮತ್ತು ಗೌರವಯುತ ಜೀವನೋಪಾಯದ ಬಗ್ಗೆ ಇರ್ಫಾನ್ ಹೊಂದಿರುವ ಆಳವಾದ ತಿಳುವಳಿಕೆಯನ್ನು ರಾಹುಲ್ ಆಲಿಸಿದರು. ಅಷ್ಟೇ ಅಲ್ಲದೆ, ಇರ್ಫಾನ್ ಮತ್ತು ಅವರ ಕುಟುಂಬದವರನ್ನು ಸಂಸತ್ತಿಗೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಸುಮಾರು 35 ವರ್ಷ ವಯಸ್ಸಿನ ಇರ್ಫಾನ್, ಸಾವ್ಡಾ ಜೆಜೆ ಕಾಲೋನಿಯ ಅರೆಬರೆ ನಿರ್ಮಿತ ಮನೆಯಲ್ಲಿ ವಾಸಿಸುತ್ತಿದ್ದು, ಐಸ್ ಮಾರಿ ಜೀವನ ಸಾಗಿಸುತ್ತಿದ್ದಾರೆ. ಯಾವುದೇ ಸಾಂಪ್ರದಾಯಿಕ ಶಿಕ್ಷಣವಿಲ್ಲದೆ, ಕೇವಲ ಅಂಗನವಾಡಿ ಮಟ್ಟದವರೆಗೆ ಮಾತ್ರ ಓದಿರುವ ಇವರಿಗೆ ಸರಿಯಾಗಿ ಓದಲು-ಬರೆಯಲು ಬರುವುದಿಲ್ಲ. ಆದಾಗ್ಯೂ ಗೂಗಲ್ ವಾಯ್ಸ್ ಸರ್ಚ್ ಹಾಗೂ ಯೂಟ್ಯೂಬ್ ವಿಡಿಯೋಗಳ ಮೂಲಕ ಸಂವಿಧಾನ ಮತ್ತು ಕಾರ್ಮಿಕರ ಹಕ್ಕುಗಳ ಬಗ್ಗೆ ತಾವಾಗಿಯೇ ಜ್ಞಾನ ಸಂಪಾದಿಸಿದ್ದಾರೆ.
ಜಂತರ್ ಮಂತರ್ ಪ್ರತಿಭಟನೆಯ ವೇಳೆ 'ದಿ ಲಾಲಂಟಾಪ್' ವರದಿಗಾರ ರಜತ್ ಪಾಂಡೆ ಅವರೊಂದಿಗೆ ಇರ್ಫಾನ್ ನಡೆಸಿದ ಮಾತುಕತೆಯು ಲಕ್ಷಾಂತರ ಜನರ ಮನ ಗೆದ್ದಿತ್ತು. ಪ್ರಚಾರಕ್ಕಾಗಿ ಅಲ್ಲ, ಬದಲಾಗಿ ಅಸಂಘಟಿತ ವಲಯದ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತುವುದಕ್ಕಾಗಿ ಮಾತ್ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗಿ ಹೇಳಿರುವ ಇರ್ಫಾನ್, ರಾಹುಲ್ ಗಾಂಧಿ ಅವರಲ್ಲಿಯೂ ಯಾವುದೇ ವೈಯಕ್ತಿಕ ಬೇಡಿಕೆ ಇಡದೆ ದೇಶದ ಬಡವರ ಹಾಗೂ ಶ್ರಮಿಕರ ಧ್ವನಿಯಾಗಿ ಹೋರಾಟ ಮುಂದುವರಿಸಲು ವಿನಂತಿಸಿದ್ದಾರೆ, (ಏಜೆನ್ಸೀಸ್).