Convicts Warn Judge (Image Credit- AI Generated)
ಬಿಜ್ನೋರ್ (ಉತ್ತರ ಪ್ರದೇಶ): ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಿಗೇ ಅಪರಾಧಿಗಳು ಬಹಿರಂಗವಾಗಿ ಕೊಲೆ ಬೆದರಿಕೆ(Convicts Warn Judge) ಹಾಕಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದ್ದು, ಇಡೀ ನ್ಯಾಯಾಂಗ ವ್ಯವಸ್ಥೆಯೇ ಬೆಚ್ಚಿಬಿದ್ದಿದೆ.
2014ರ ಮೇ ತಿಂಗಳಲ್ಲಿ ಬಿಜ್ನೋರ್‌ನ ಮಾತೂರ ದುರ್ಗಾ ಗ್ರಾಮದ ನಿವಾಸಿ ಪುಖ್ರಾಜ್ ಸಿಂಗ್ (55) ಎಂಬುವವರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಲಾಗಿತ್ತು. ಪುಖ್ರಾಜ್ ಅವರ ಮಗಳು ಜೈದೀಪ್ ಸಿಂಗ್ ಎಂಬಾತನ ಸಹೋದರ ಪ್ರದೀಪ್ ಸಿಂಗ್‌ನನ್ನು ಮದುವೆಯಾಗಿದ್ದರು. ಮದುವೆಯಾದ ಬೆನ್ನಲ್ಲೇ ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ಆರಂಭವಾಗಿತ್ತು. ಕಾರು ಮತ್ತು ನಗದು ಹಣಕ್ಕಾಗಿ ಪೀಡಿಸುತ್ತಿದ್ದ ಅತ್ತೆ-ಮಾವನ ವಿರುದ್ಧ ಮಗಳು ದೂರು ದಾಖಲಿಸಿದ್ದರು. ತನ್ನ ಮಗಳ ಪರವಾಗಿ ಹೋರಾಟ ನಡೆಸುತ್ತಿದ್ದ ತಂದೆ ಪುಖ್ರಾಜ್ ಸಿಂಗ್ ಅವರನ್ನು ಜೈದೀಪ್ ಸಿಂಗ್ ಮತ್ತು ಪಿಂಟು ಚೌಹಾಣ್ ಎಂಬುವವರು ರಸ್ತೆಯಲ್ಲಿ ಎಳೆದಾಡಿ, ಕಾರಿನಿಂದ ತುಳಿದು ಬರ್ಬರವಾಗಿ ಹತ್ಯೆ ಮಾಡಿದ್ದರು.
ನ್ಯಾಯಾಲಯದಲ್ಲಿ ನಡೆದಿದ್ದೇನು?
ಸುದೀರ್ಘ 10 ವರ್ಷಗಳ ಕಾನೂನು ಹೋರಾಟದ ನಂತರ, ಗುರುವಾರ ಬಿಜ್ನೋರ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೈದೀಪ್ ಸಿಂಗ್ (35) ಮತ್ತು ಪಿಂಟು ಚೌಹಾಣ್ (30) ಎಂಬುವವರನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿತು.
ತೀರ್ಪು ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ನ್ಯಾಯಾಲಯದ ಕೊಠಡಿಯಲ್ಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಶಿಕ್ಷೆಯಿಂದ ರೊಚ್ಚಿಗೆದ್ದ ಅಪರಾಧಿಗಳು ನ್ಯಾಯಾಧೀಶರತ್ತ ತಿರುಗಿ, "ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂದು ನಮಗೆ ತಿಳಿದಿದೆ, ನಿಮ್ಮನ್ನು ಬಿಡುವುದಿಲ್ಲ, ಕೊಲ್ಲುತ್ತೇವೆ" ಎಂದು ಕಿರುಚಾಡಿದ್ದಾರೆ. ಅಷ್ಟೇ ಅಲ್ಲದೆ, ಅಂದು ಕೊಲೆಯಾದ ವ್ಯಕ್ತಿಯ ಮಗಳನ್ನು (ದೂರುದಾರೆ) ಕೂಡ ಜೀವಂತವಾಗಿ ಬಿಡುವುದಿಲ್ಲ ಎಂದು ಕೂಗಾಡಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ಅಪರಾಧಿಗಳ ಈ ವರ್ತನೆಯಿಂದ ಆತಂಕದ ವಾತಾವರಣ ಸೃಷ್ಟಿಯಾಯಿತು. ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ನ್ಯಾಯಾಧೀಶರ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಭಾರೀ ಪೊಲೀಸ್ ಭದ್ರತೆಯಲ್ಲಿ ಅವರ ಅಧಿಕೃತ ನಿವಾಸಕ್ಕೆ ಕರೆದೊಯ್ಯಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಧೀಶರ ಮನೆಗೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಕಾನೂನು ಕ್ರಮ
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಮತ್ತು ನ್ಯಾಯಾಲಯದ ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಅಪರಾಧಿಗಳ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಮಾಜಕ್ಕೆ ಮಾದರಿಯಾಗಬೇಕಿದ್ದ ನ್ಯಾಯಾಲಯದ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ, (ಏಜೆನ್ಸೀಸ್).