ನ್ಯಾಯಾಧೀಶೆ ಸ್ವರ್ಣಕಾಂತ ಶರ್ಮಾ ಮತ್ತು ಅರವಿಂದ್ ಕೇಜ್ರಿವಾಲ್ 
ದೇಶ

ನ್ಯಾಯಾಂಗ ನಿಂದನೆ ಪ್ರಕರಣ; ಮಾಜಿ ಸಿಎಂ ಕೇಜ್ರಿವಾಲ್, ಸಿಸೋಡಿಯಾ ಸೇರಿ ಇತರರಿಗೆ ದೆಹಲಿ ಹೈಕೋರ್ಟ್​ನಿಂದ ನೋಟಿಸ್ | Contempt of court case

ನವದೆಹಲಿ: ನ್ಯಾ. ಸ್ವರ್ಣಕಾಂತ ಶರ್ಮಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹಪೋಸ್ಟ್ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ(Contempt of court case) ಆಪ್​ ಮುಖ್ಯಸ್ಥ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ದುರ್ಗೇಶ್ ಪಾಠಕ್, ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್ ಹಾಗೂ ಇತರರಿಗೆ ದೆಹಲಿ ಹೈಕೋರ್ಟ್ ಮಂಗಳವಾರ(ಮೇ 19) ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಹೂಡಿರುವ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಎಲ್ಲರಿಗೂ ನೋಟಿಸ್ ಜಾರಿ ಮಾಡಿತು. ಆರೋಪಿತ ದೂರುದಾರರು ನೋಟಿಸ್ ಸ್ವೀಕರಿಸಿದ ನಾಲ್ಕು ವಾರಗಳ ಒಳಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು ಎಂದು ಸೂಚಿಸಿ, ಆ. 04ಕ್ಕೆ ವಿಚಾರಣೆಯನ್ನು ಮುಂದೂಡಿತು.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ಆರೋಪಿಸಿ, ನ್ಯಾಯಮೂರ್ತಿ ಶರ್ಮಾ ಅವರು ಮೇ 14ರಂದು ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರ ಎಎಪಿ ನಾಯಕರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಆರಂಭಿಸಿದ್ದರು.
ಮಾಜಿ ಸಿಎಂ ತಮ್ಮ ಕಾನೂನು ಪರಿಹಾರಗಳನ್ನು ಅನುಸರಿಸುವ ಬದಲು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯೋಜಿತ ಅಪಪ್ರಚಾರ ಅಭಿಯಾನವನ್ನು ಆಯೋಜಿಸಿದ್ದಾರೆ ಎಂದು ನ್ಯಾ. ಶರ್ಮಾ ಪ್ರತಿಪಾದಿಸಿದ್ದರು. ಮತ್ತು ಎಲ್ಲಾ ಆರೋಪಿಗಳ ಖುಲಾಸೆ ವಿರುದ್ಧ ಸಿಬಿಐ ಸಲ್ಲಿಸಿದ ಅರ್ಜಿಯನ್ನು ಮತ್ತೊಂದು ಪೀಠ ವಿಚಾರನೆ ನಡೆಸಲಿದೆ ಎಂದು ಹೇಳಿದ್ದರು.

ನ್ಯಾಯಾಂಗ ನಿಂದನೆ ಕೇಸ್ ದಾಖಲಾಗಿದ್ದೇಕೆ?

ಫೆಬ್ರವರಿ27 ರಂದು ವಿಚಾರಣಾ ನ್ಯಾಯಾಲಯವು ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರ 21 ಜನರನ್ನು ಖುಲಾಸೆಗೊಳಿಸಿತ್ತು. ಮತ್ತು ಈ ಪ್ರಕರಣವು ನ್ಯಾಯಾಂಗ ಪರಿಶೀಲನೆಗೆ ಒಳಪಡಲು ಸಂಪೂರ್ಣವಾಗಿ ಅಸಮರ್ಥವಾಗಿದೆ ಎಂದು ತೀರ್ಪು ನೀಡಿತು. ಮತ್ತು ಇಡಿ, ಸಿಬಿಐ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಸೂಚನೆ ನೀಡಿತ್ತು.
ವಿಚಾರಣಾ ನ್ಯಾಯಾಲಯದ ಟೀಕೆಯ ಟಿಪ್ಪಣಿ ಮತ್ತು ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಸಿಬಿಐ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾ. ಸ್ವರ್ಣಕಾಂತ ಶರ್ಮಾ ಅವರು, ವಿಚರಣಾ ನ್ಯಾಯಾಲಯದ ಆದೇಶ ಪುನರ್ ಪರಿಶೀಲನೆಗೆ ಒಳಪಡುವ ಅಗತ್ಯವಿದೆ ಎಂದು ಭಾವಿಸಿ ತೀರ್ಪಿಗೆ ತಡೆ ನೀಡಿ, ಎಲ್ಲ ಆರೋಪಿತರಿಗೆ ನೋಟಿಸ್ ನೀಡಿತ್ತು.
ಬಳಿಕ ಕೇಜ್ರಿವಾಲ್, ಸಿಸೋಡಿಯಾ ಮತ್ತು ಪಾಠಕ್ ಸೇರಿ ಎಲ್ಲಾ ಆರೋಪಿಗಳು ಪ್ರಕರಣದಿಂದ ತಮ್ಮನ್ನು ಬಿಡುಗಡೆ ಮಾಡುವುದರ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 20ರಂದು ನ್ಯಾಯಮೂರ್ತಿ ಶರ್ಮಾ ಅವರ ಪೀಠ ವಜಾಗೊಳಿಸಿತ್ತು.
ಅದಕ್ಕೂ ಮುನ್ನ ಏಪ್ರಿಲ್ 13ರಂದು ಸ್ಚತಃ ಹೈಕೋರ್ಟ್​ನಲ್ಲಿ ನ್ಯಾ. ಸ್ವರ್ಣಕಾಂತ ಶರ್ಮಾ ಅವರನ್ನು ವಿಚಾರಣೆಯಿಂದ ಹಿಂದೆ ಸರಿಯುವಂತೆ ವಾದಿಸಿದ್ದ ಆಪ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ನೀವು ಆರ್​ಎಸ್ಎಸ್ ಮತ್ತು ಬಿಜೆಪಿಯ ಅಂಗ ಸಂಸ್ಥೆಯಾದ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ್ದ 4 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ, ನಿಮ್ಮಿಂದ ನಿಷ್ಪಕ್ಷಪಾತ ನ್ಯಾಯವನ್ನು ನಿರೀಕ್ಷಿಸಬಹುದೇ? ದಯವಿಟ್ಟು ಪ್ರಕರಣದಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ್ದರು.
ಏಪ್ರಿಲ್ 20ರಂದು ನ್ಯಾ. ಶರ್ಮಾ ಅವರು ತಮ್ಮ ವಿರುದ್ಧ ಮಾಡಿದ ಆರೋಪಗಳ ಹಿನ್ನೆಲೆ ವಿಚಾರಣೆಯಿಂದ ಹಿಂದೆ ಸರಿದ್ರೆ, ಅದೇ ನಿಜವಾಗುತ್ತದೆ. ಎಲ್ಲಾ ಆರೋಪಗಳು ಊಹಾಪೋಹ ಎಂದು ವಿಚಾರಣೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದರು. ಮತ್ತು ಆರೋಪಿತರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದರು. ಬಳಿಕ ಕೇಜ್ರಿವಾಲ್, ಸಿಸೋಡಿಯಾ ಮತ್ತು ಪಾಠಕ್ ಅವರು ನ್ಯಾಯಮೂರ್ತಿ ಶರ್ಮಾ ಅವರಿಗೆ ಪತ್ರ ಬರೆದು, ತಾವು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಅವರ ಮುಂದೆ ಹಾಜರಾಗುವುದಿಲ್ಲ ಮತ್ತು ಮಹಾತ್ಮ ಗಾಂಧಿಯವರ ಸತ್ಯಾಗ್ರಹದ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಹೇಳಿದ್ದರು (ಏಜೆನ್ಸೀಸ್).