ನವದೆಹಲಿ: ವಿಮಾನ ಪ್ರಯಾಣಕ್ಕೆ ಸಿದ್ಧತೆ ನಡೆಸಿರುವ ಸ್ಪೈಸ್‌ಜೆಟ್ ಪ್ರಯಾಣಿಕರಿಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಹತ್ವದ ಎಚ್ಚರಿಕೆ ಸಂದೇಶ ರವಾನಿಸಿದೆ. ಆರ್ಥಿಕ ಹಾಗೂ ಕಾರ್ಯಾಚರಣೆಯ ಬಿಕ್ಕಟ್ಟಿಗೆ ಸಿಲುಕಿರುವ ವಿಮಾನಯಾನ ಸಂಸ್ಥೆಯ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದ್ದು, ಮನೆಯಿಂದ ಹೊರಡುವ ಮುನ್ನ ವಿಮಾನದ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಶುಕ್ರವಾರ ಬೆಳಗ್ಗೆ 10.05ಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಪ್ರಕಟಿಸಿರುವ ಸಲಹಾ ಸೂಚನೆಯಲ್ಲಿ ಸ್ಪೈಸ್‌ಜೆಟ್ ಸಂಸ್ಥೆಯಲ್ಲಿನ ಕಾರ್ಯಾಚರಣಾ ಸಮಸ್ಯೆಗಳಿಂದಾಗಿ ಕೆಲವು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಬಹುದು. ಪ್ರಯಾಣಿಕರು ತಮ್ಮ ವಿಮಾನದ ಸಮಯ, ಹಾರಾಟದ ಸ್ಥಿತಿ ಹಾಗೂ ಬದಲಾವಣೆಗಳ ಕುರಿತು ನಿಖರ ಮಾಹಿತಿಗಾಗಿ ನೇರವಾಗಿ ಸಂಸ್ಥೆಯನ್ನು ಸಂಪರ್ಕಿಸಬೇಕು ಎಂದು ದೆಹಲಿ ವಿಮಾನ ನಿಲ್ದಾಣ ಆಡಳಿತ ತಿಳಿಸಿದೆ. ಆದರೆ, ಎಷ್ಟು ವಿಮಾನಗಳ ಹಾರಾಟಕ್ಕೆ ಅಡಚಣೆಯಾಗಲಿದೆ ಎಂಬ ನಿಖರ ಅಂಕಿಅಂಶವನ್ನು ಪ್ರಾಧಿಕಾರ ಬಹಿರಂಗಪಡಿಸಿಲ್ಲ.
ದೆಹಲಿ ಏರ್‌ಪೋರ್ಟ್ ಎಚ್ಚರಿಕೆ ನೀಡುವ ಒಂದು ದಿನ ಮುನ್ನವಷ್ಟೇ ದುಬೈ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್‌ನ ನಾಲ್ಕು ವಿಮಾನಗಳ ಹಾರಾಟ ದಿಢೀರ್ ರದ್ದಾಗಿತ್ತು. ವಿಮಾನಗಳಿಗೆ ನೆಲಮಟ್ಟದ ಸೇವೆ ಒದಗಿಸುವ 'ಡಿಎನ್‌ಎಟಿಎ' ಸಂಸ್ಥೆಗೆ ಸ್ಪೈಸ್‌ಜೆಟ್ 1.4 ಕೋಟಿ ಯುಎಇ ಗಿಂತಲೂ ಹೆಚ್ಚಿನ ಬಾಕಿ ಹಣ ಪಾವತಿಸಬೇಕಿದೆ. ಇದೇ ಕಾರಣಕ್ಕೆ ನವೆಂಬರ್ 12ರಂದು ಡಿಎನ್‌ಎಟಿಎ ಚೆಕ್-ಇನ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ, ಅಂದು ದುಬೈನಿಂದ ಕೇವಲ ಎರಡು ವಿಮಾನಗಳಷ್ಟೇ ಹಾರಾಟ ನಡೆಸಲು ಸಾಧ್ಯವಾಯಿತು.
ಸದ್ಯ ದಿನಕ್ಕೆ ಕೇವಲ 65 ನಿಗದಿತ ವಿಮಾನಗಳನ್ನು ನಿರ್ವಹಿಸುತ್ತಿರುವ ಸ್ಪೈಸ್‌ಜೆಟ್, ಪ್ರತಿದಿನ ಸರಾಸರಿ 15ರಿಂದ 20 ವಿಮಾನಗಳ ಹಾರಾಟವನ್ನು ರದ್ದುಗೊಳಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಹಲವು ವಿಮಾನಗಳು 3ರಿಂದ 5 ಗಂಟೆಗಳವರೆಗೆ ವಿಳಂಬವಾಗಿ, ಅಂತಿಮವಾಗಿ ರದ್ದಾಗುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಮಾನ ಗುತ್ತಿಗೆದಾರರು, ತೈಲ ಕಂಪನಿಗಳು ಹಾಗೂ ವಿಮಾನ ನಿಲ್ದಾಣ ನಿರ್ವಾಹಕರಿಗೆ ಪಾವತಿಸಬೇಕಿರುವ ಬೃಹತ್ ಬಾಕಿ ಮೊತ್ತವೇ ಈ ಕಾರ್ಯಾಚರಣೆಯ ವೈಫಲ್ಯಕ್ಕೆ ಮೂಲ ಕಾರಣ ಎನ್ನಲಾಗಿದೆ.
ಒಂದು ಕಾಲದಲ್ಲಿ ಬರೋಬ್ಬರಿ 100 ವಿಮಾನಗಳ ಬಲ ಹೊಂದಿದ್ದ ಸ್ಪೈಸ್‌ಜೆಟ್, ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಈಗ ಕೇವಲ 12 ವಿಮಾನಗಳಿಗೆ ಸೀಮಿತವಾಗಿದೆ. ಇದರಲ್ಲಿಯೂ ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ 3 ವಿಮಾನಗಳು ನೆಲಕಚ್ಚಿದ್ದು, ಸದ್ಯ ಕೇವಲ 11 ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ದೆಹಲಿ ಮೂಲಕ ಸ್ಪೈಸ್‌ಜೆಟ್ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿರುವವರು, ಕೊನೆಯ ಕ್ಷಣದ ಗೊಂದಲ ಮತ್ತು ಪರದಾಟವನ್ನು ತಪ್ಪಿಸಲು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನವೇ ಸಂಸ್ಥೆಯ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರದ ಮೂಲಕ ವಿಮಾನದ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.