ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್! 
ದೇಶ

ಸಂವಿಧಾನವನ್ನು ಜೇಬಿನಲ್ಲಿಟ್ಟುಕೊಂಡವರಿಗೆ ಅಧಿಕಾರದ ಅಮಲು ಇನ್ನೂ ಇಳಿದಿಲ್ಲ: ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್! | PM Modi dig at Rahul Gandhi

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೆಲವು ನಾಯಕರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ತಮ್ಮ ವೈಯಕ್ತಿಕ ಆಸ್ತಿಯಂತೆ ಪರಿಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರದಲ್ಲಿ ಇಲ್ಲದಿದ್ದರೂ ಇವರಲ್ಲಿ ವಿಚಿತ್ರವಾದ ಅಧಿಕಾರದ ಅಮಲು ಮತ್ತು ಹಕ್ಕಿನ ಮನೋಭಾವ ಕಂಡುಬರುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಇಂಡಿಯಾ ಟುಡೇ ಸಮೂಹ ಆಯೋಜಿಸಿದ್ದ ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ 2026 ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷ ನಾಯಕರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಕುಟುಕಿದರು. ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಜೇಬಿನಿಂದ ಸಂವಿಧಾನದ ಪ್ರತಿಯನ್ನು ಹೊರತೆಗೆದು, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವೇ ತಮ್ಮ ಜೇಬಿನಲ್ಲಿದೆ ಎಂದು ಭಾವಿಸಿದ್ದಾರೆ. ಅಧಿಕಾರದಲ್ಲಿ ಇಲ್ಲದಿದ್ದರೂ ಅವರು ಇದೇ ರೀತಿ ವರ್ತಿಸುತ್ತಾರೆ. ಇದು ಒಂದು ವಿಚಿತ್ರ ಬಗೆಯ ಅಧಿಕಾರದ ಅಮಲು ಎಂದು ಮೋದಿ ಕಿಡಿಕಾರಿದರು.

ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಘಟನೆಯೊಂದನ್ನು ಸ್ಮರಿಸಿದ ಪ್ರಧಾನಿ ಮೋದಿ, ಅಂದು ಕೇಂದ್ರದಲ್ಲಿದ್ದ ಸರ್ಕಾರವು ಆರ್ಥಿಕ ಶ್ರೇಯಾಂಕಗಳನ್ನು ಪ್ರಕಟಿಸುವ ಮುನ್ನ ತಮ್ಮ ಅನುಮತಿ ಪಡೆಯುವಂತೆ ಸಂಶೋಧಕರ ಮೇಲೆ ಒತ್ತಡ ಹೇರಿತ್ತು ಎಂದು ಗಂಭೀರ ಆರೋಪ ಮಾಡಿದರು.

ಒಂದು ಕಾಲದಲ್ಲಿ ಮಾಧ್ಯಮಗಳು ರಾಜ್ಯಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಶ್ರೇಯಾಂಕ ನೀಡುತ್ತಿದ್ದವು. ಆರ್ಥಿಕತೆಗೆ ಸಂಬಂಧಿಸಿದ ಅಂತಹ ಒಂದು ಸಮೀಕ್ಷೆಯಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದಿತ್ತು, ಆಗ ನಾನು ಮುಖ್ಯಮಂತ್ರಿಯಾಗಿದ್ದೆ. ಮಾಜಿ ಪ್ರಧಾನಿಯೊಬ್ಬರ ಹೆಸರಿನಲ್ಲಿದ್ದ ಸಂಸ್ಥೆಯೊಂದು ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರ ಸಂಶೋಧನೆಯ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಿತ್ತು. ಆದರೆ, ಗುಜರಾತ್‌ಗೆ ಸಿಕ್ಕ ಈ ಗೌರವವನ್ನು ದೆಹಲಿಯಲ್ಲಿ ಅಧಿಕಾರದಲ್ಲಿದ್ದವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಯಾವುದೇ ವರದಿ ಪ್ರಕಟಿಸುವ ಮುನ್ನ ನಮ್ಮ ಅನುಮತಿ ಪಡೆಯಬೇಕು ಎಂದು ಅವರು ಸಂಶೋಧಕರಿಗೆ ತಾಕೀತು ಮಾಡಿದ್ದರು ಎಂದು ಮೋದಿ ಹಳೆಯ ಘಟನೆಯನ್ನು ಬಿಚ್ಚಿಟ್ಟರು.

ಕೃಷಿ ಕ್ಷೇತ್ರದ ಪ್ರಗತಿ ಮತ್ತು ಬಡತನ ನಿರ್ಮೂಲನೆಗೆ ಮೆಚ್ಚುಗೆ

ಇದೇ ಸಂದರ್ಭದಲ್ಲಿ ದೇಶದ ಕೃಷಿ ಕ್ಷೇತ್ರದ ಸಾಧನೆಗಳನ್ನು ವಿವರಿಸಿದ ಪ್ರಧಾನಿ ಮೋದಿ, ಕಳೆದ ಒಂದು ದಶಕದಲ್ಲಿ ಭಾರತದ ಕೃಷಿ ವಲಯವು ಸರಾಸರಿ ಶೇ. 4ಕ್ಕೂ ಹೆಚ್ಚು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ ಎಂದರು. ಸ್ವಾತಂತ್ರ್ಯದ ನಂತರ ಕೃಷಿ ಕ್ಷೇತ್ರವು ಇಷ್ಟು ಸುದೀರ್ಘ ಕಾಲ ನಿರಂತರ ಪ್ರಗತಿ ಸಾಧಿಸಿರುವುದು ಇದೇ ಮೊದಲು ಎಂದು ಅವರು ಬಣ್ಣಿಸಿದರು.

ವಿಶ್ವಬ್ಯಾಂಕ್ ಅಧ್ಯಯನವನ್ನು ಉಲ್ಲೇಖಿಸಿದ ಮೋದಿ, ಕಳೆದ 12 ರಿಂದ 13 ವರ್ಷಗಳಲ್ಲಿ ದೇಶದ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದರು. ಇದರಲ್ಲಿ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ಪಾಲು ದೊಡ್ಡದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಗಣನೀಯವಾಗಿ ಇಳಿಕೆಯಾಗಿದೆ ಎಂದರು.

ಜಾಗತಿಕ ಕೃಷಿ ಮಾರುಕಟ್ಟೆಯಲ್ಲಿ ಭಾರತದ ಬಲವನ್ನು ಒತ್ತಿಹೇಳಿದ ಅವರು, ದೇಶದ ವಾರ್ಷಿಕ ಕೃಷಿ ರಫ್ತು 4 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂದರು. ಹಾಲು, ಬೇಳೆಕಾಳುಗಳು ಮತ್ತು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದರೆ, ಅಕ್ಕಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ಗೋಧಿ, ಹತ್ತಿ, ತರಕಾರಿ ಮತ್ತು ಮೀನು ಉತ್ಪಾದನೆಯಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಇದು ಭಾರತೀಯ ರೈತರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಧಾನಿ ಶ್ಲಾಘಿಸಿದರು. ಕೃಷಿ ಪೂರಕ ಚಟುವಟಿಕೆಗಳಾದ ಜೇನು ಉತ್ಪಾದನೆಯು 80,000 ಟನ್‌ಗಳಿಂದ 1.5 ಲಕ್ಷ ಟನ್‌ಗಳಿಗೆ ಹಾಗೂ ತೋಟಗಾರಿಕಾ ಉತ್ಪಾದನೆಯು 280 ಮಿಲಿಯನ್ ಟನ್‌ಗಳಿಂದ 350 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ ಎಂದು ಅಂಕಿಅಂಶಗಳನ್ನು ನೀಡಿದರು.

ಮಾಧ್ಯಮಗಳ ಕಾಲೆಳೆದ ಪ್ರಧಾನಿ

ತಮ್ಮ ಭಾಷಣದ ನಡುವೆ ಮಾಧ್ಯಮಗಳ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಮೋದಿ, ಪತ್ರಕರ್ತರು ನಕಾರಾತ್ಮಕ ಹೆಡ್‌ಲೈನ್‌ಗಾಗಿ ಕಾಯುತ್ತಿರಬಹುದು ಎಂದರು. ಇಲ್ಲಿಯವರೆಗೆ ನನಗೆ ಯಾವುದೇ ನೆಗೆಟಿವ್ ಹೆಡ್‌ಲೈನ್ ಸಿಕ್ಕಿಲ್ಲವಲ್ಲ ಎಂದು ಆಜ್ ತಕ್ ಮಂದಿ ಯೋಚಿಸುತ್ತಿರಬಹುದು. ನಾನು ಇಲ್ಲಿಯವರೆಗೆ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೆ, ಹಾಗಾಗಿ ಹೆಡ್‌ಲೈನ್‌ಗಾಗಿ ಒಂದಿಷ್ಟು ಚರ್ಚೆಯಾಗುವ ವಿಷಯವೂ ಇರಲಿ ಎಂದು ನಗುತ್ತಲೇ ಮಾಧ್ಯಮಗಳ ಕಾಲೆಳೆದರು(ಏಜೆನ್ಸೀಸ್​).