ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿ ಮೈತ್ರಿಕೂಟ ಪ್ರತಿಭಟನೆಗೆ ಕರೆಕೊಟ್ಟಿದೆ.
ಆದರೆ, ದೆಹಲಿಯಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ, ರಾಹುಲ್ ಗಾಂಧಿಯನ್ನು ನಿಂಧಿಸಿದ ಹಿನ್ನಲೆ ಕಾಶ್ಮೀರದ ಮುಸ್ಲಿಂ ಯುವಕನೊಬ್ಬನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದು ಹಲ್ಲೆ ನಡೆಸಿದ್ದಾರೆಂದು ವರದಿಯಾಗಿದೆ.
ಮೂಲತಃ ಕಾಶ್ಮೀರದವನೆನ್ನಲಾದ ಫಹೀಮ್ ನಜೀರ್ ಎಂಬ ಯುವಕ ಕನ್ನಾಟ್ ಪ್ಲೇಸ್ ಭಾಗದಲ್ಲಿ ಓಡಾಡುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ಶುರುವಾಗಿದೆ. ಸ್ಥಳದಲ್ಲಿದ್ದವರ ಪ್ರಕಾರ, ಯುವಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು ಕಾಂಗ್ರೆಸ್ಸಿಗರನ್ನು ಕೆರಳಿಸಿದೆ.
ಕ್ಷಣಾರ್ಧದಲ್ಲಿ ಮಾತಿಗೆ ಮಾತು ಬೆಳೆದು, ರೊಚ್ಚಿಗೆದ್ದ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಡುಬೀದಿಯಲ್ಲೇ ನಡೆದ ಈ ಜಟಾಪಟಿ ವಿಡಿಯೋ ಈಗ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.
ಹಲ್ಲೆಯ ಬಳಿಕ ಮಾತನಾಡಿದ ಫಹೀಮ್ ನಜೀರ್, ಕ್ಯಾಮೆರಾ ಮುಂದೆಯೇ ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ಅಳಲು ತೋಡಿಕೊಂಡಿದ್ದಾನೆ. ತಾನು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಲ್ಲ ಎಂದು ಸ್ಪಷ್ಟಪಡಿಸಿದ ಆತ, "ನಾನು ಕೇವಲ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ ಅಷ್ಟೇ. ನಮ್ಮ ದೇಶ ನೇಪಾಳ ಅಥವಾ ಬಾಂಗ್ಲಾದೇಶದಂತೆ ಹಿಂಸಾಚಾರಕ್ಕೆ ಬಲಿಯಾಗುವುದನ್ನು ತಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದನ್ನೇ ನಾನು ಹೇಳಿದೆ" ಎಂದು ಭಾವುಕನಾಗಿ ನುಡಿದಿದ್ದಾನೆ.
ಇವಿಎಂ ತಿರುಚಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ನಜೀರ್, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಈ ಇವಿಎಂ ಯಂತ್ರಗಳನ್ನು ದೇಶಕ್ಕೆ ತಂದಿದ್ದು. ಚುನಾವಣೆಯಲ್ಲಿ ವಿರೋಧ ಪಕ್ಷಗಳು ಗೆದ್ದಾಗ ಇವಿಎಂ ಚೆನ್ನಾಗಿರುತ್ತೆ, ಮತ ಕಳ್ಳತನ ಆಗಲ್ವಾ? ಸೋತಾಗ ಮಾತ್ರ ಮತಗಳ ಕಳ್ಳತನವಾಗಿದೆ ಎಂದು ಬೊಬ್ಬೆ ಹೊಡೆಯುವುದೇಕೆ? ಎಂದು ಪ್ರಶ್ನಿಸಿದ್ದಾನೆ.
ಇನ್ನೊಂದೆಡೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹೊಸ ಕಾನೂನು ಕಂಟಕ ಎದುರಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ' ಮೈತ್ರಿಕೂಟ ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ದೆಹಲಿ ಪೊಲೀಸರು ರಾಹುಲ್ ಮತ್ತು ಪ್ರಿಯಾಂಕಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ, (ಏಜೆನ್ಸೀಸ್).