ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

ಟಿವಿಕೆಗೆ ಕಾಂಗ್ರೆಸ್​ ಬೆಂಬಲ; ಆದರೆ ನಮ್ಮ ಬೆಂಬಲವಿಲ್ಲ ಎಂದು ಡಿಎಂಕೆಗೆ ನಿಷ್ಠೆ ಮೆರೆದ ಎಡಪಕ್ಷಗಳು ಮತ್ತು ಮುಸ್ಲಿಂ ಲೀಗ್​ | DMK

ಚೆನ್ಮೈ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ಟಿವಿಕೆ ಹಲವು ಸಣ್ಣಪುಟ್ಟ ಪಕ್ಷಗಳಿಗೆ ಬೆಂಬಲ ಕೋರಿದ್ದು, ಮೈತ್ರಿಕೂಟದಿಂದ ಮೊದಲು ಹೋರಹೋಗಿರುವ ಕಾಂಗ್ರೆಸ್​​ ಟಿವಿಕೆಗೆ ಬೆಂಬಲ ನೀಡಿದೆ. ಆದರೆ ಎಡಪಕ್ಷಗಳು ಮತ್ತು ಮುಸ್ಲೀಂ ಲೀಗ್ ಬೆಂಬಲ ನೀಡಲ್ಲ ಎಂದು ಡಿಎಂಕೆಗೆ(DMK) ನಿಷ್ಠೆಯನ್ನು ತೋರಿಸಿವೆ.
ಡಿಎಂಕೆಯ ಮತ್ತೊಂದು ಮಿತ್ರ ಪಕ್ಷವಾದ ತೋಲ್ ತಿರುಮಾವಲವನ್ ನೇತೃತ್ವದ ವಿಸಿಕೆಗೂ ಬೆಂಬಲ ನೀಡುವಂತೆ ದಳಪತಿ ವಿಜಯ್ ಮನವಿ ಮಾಡಿದ್ದು, ಪಕ್ಷದ ನಾಯಕತ್ವವೂ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಪಕ್ಷದ ಪದಾಧಿಕಾರಿಯೊಬ್ಬರು ಬೆಂಬಲದ ನಿರ್ಧಾರವನ್ನು ಪಕ್ಷದ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ. ವಿಸಿಕೆ ಎರಡು ಸ್ಥಾನಗಳನ್ನು ಗೆದ್ದಿದೆ.
ಇಂದು ಚುನಾವಣೆಯಲ್ಲಿ ಗೆದ್ದ ಸಿಪಿಐ(ಎಂ) ಶಾಸಕರಾದ ಆರ್. ಚೆಲ್ಲಸ್ವಾಮಿ ಮತ್ತು ಲತಾ, ಸಿಪಿಐ ಶಾಸಕರಾದ ಟಿ. ರಾಮಚಂದ್ರನ್ ಮತ್ತು ಮಾರಿಮುತ್ತು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ಡಿಎಂಕೆ ಪಕ್ಷದ ಪ್ರಧಾನ ಕಚೇರಿಯಾದ ಅಣ್ಣಾ ಅರಿವಲಯಂನಲ್ಲಿ ಭೇಟಿಯಾಗಿ ನಿಮ್ಮ ಜೊತೆಯಲ್ಲಿರುವುದಾಗಿ ತಿಳಿಸಿದ್ದಾರೆ. ಅದೇ ರೀತಿಯಲ್ಲಿ ಐಯುಎಂಎಲ್ ಶಾಸಕರಾಗಿ ಆಯ್ಕೆಯಾದ ಸೈಯದ್ ಫಾರೂಕ್ ಬಾಷಾ ಎಸ್‌ಎಸ್‌ಬಿ ಮತ್ತು ಎಎಂ ಶಹಜಹಾನ್ ಕೂಡ ಭೇಟಿಯಾಗಿ ಮೈತ್ರಿಕೂಟ ತೊರೆಯಲ್ಲ ಎಂದಿದ್ದಾರೆ.
ಇನ್ನೂ ಭಾರತದ ಸಂವಿಧಾನವನ್ನು ನಂಬದ ಕೋಮು ಶಕ್ತಿಗಳನ್ನು ದೂರವಿಡಲು ಟಿವಿಕೆಗೆ ಷರತ್ತುಬದ್ಧ ಬೆಂಬಲ ನೀಡುವುದಾಗಿ ಕಾಂಗ್ರೆಸ್​ ಘೋಷಣೆ ಮಾಡಿದೆ. ಬಳಿಕ ವಿಜಯ್ ಅವರು ಚೆನ್ನೈನ ಲೋಕ ಭವನದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿಯಾಗಿ ಮುಂದಿನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ (ಏಜೆನ್ಸೀಸ್).