Milan Pradhan Arrested > ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಅರೆಸ್ಟ್​! 
ದೇಶ

ಟ್ವಿಸ್ಟ್ ಮೇಲೆ ಟ್ವಿಸ್ಟ್​!...ಮಮತಾ ಬೆಂಬಲ ಘೋಷಿಸಿದ ಕೆಲವೇ ಗಂಟೆಗಳಲ್ಲಿ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಅರೆಸ್ಟ್​! | Milan Pradhan Arrested

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಉಪಚುನಾವಣೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಮತಾ ಬಣದ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಂತೆ, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ನೀಡುವುದಾಗಿ ದೀದಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಭಾರಿ ಬೆಳವಣಿಗೆ ನಡೆದಿದೆ. ಹಳೆಯ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್​ರನ್ನು (Milan Pradhan Arrested) ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ತಮ್ಮ ಕಾಳೀಘಾಟ್ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ತಮ್ಮ ಬಣವು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಘೋಷಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಮಮತಾ ಬಣದಿಂದ ಕಣಕ್ಕಿಳಿದಿದ್ದ ಸಂಚಿತಾ ಪ್ರಧಾನ್ ಡೇ ತಮ್ಮ ನಾಮಪತ್ರವನ್ನು ಹಿಂಪಡೆದ ಬೆನ್ನಲ್ಲೇ ದೀದಿ ಕಡೆಯಿಂದ ಕಾಂಗ್ರೆಸ್​ಗೆ ಬೆಂಬಲ ವ್ಯಕ್ತವಾಗಿತ್ತು.
ನಂದಿಗ್ರಾಮದಲ್ಲಿ ಭೂಸ್ವಾಧೀನದ ವಿರುದ್ಧ 2007 ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ 14 ಗ್ರಾಮಸ್ಥರು ಪ್ರಾಣ ಕಳೆದುಕೊಂಡಿದ್ದರು ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನ್​ ಬಂಧನವಾಗಿರುವ ಸಾಧ್ಯತೆ ಇದೆ.
ಕಾಂಗ್ರೆಸ್ ಅನ್ನು ಸಹೋದರಿ ಪಕ್ಷ ಎಂದು ಬಣ್ಣಿಸಿದ್ದ ದೀದಿ, ಇಂಡಿಯಾ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಮ್ಮ ಬಣ ಮೊದಲೇ ನಿರ್ಧರಿಸಿತ್ತು, ಮತ್ತು ಇದು ಭವಿಷ್ಯದ ಆರಂಭವಾಗಿದೆ ಎಂದು ಅವರು ಹೇಳಿದ್ದರು. ಮೈತ್ರಿಕೂಟವನ್ನು ಬಲಪಡಿಸುವ ಸಂದೇಶವು ಬಂಗಾಳದಿಂದಲೇ ಪ್ರಾರಂಭವಾಗಲಿ ಎಂದರು.
ಮಮತಾ ಬ್ಯಾನರ್ಜಿ ಘೋಷಣಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ, ಬ್ಯಾನರ್ಜಿ ಅವರಿಗೆ ಈ ಘೋಷಣೆ ಮಾಡುವ ಸ್ವಾತಂತ್ರ್ಯವಿದೆ, ಆದರೆ ಕಾಂಗ್ರೆಸ್ ಅವರಿಂದ ಬೆಂಬಲವನ್ನು ಕೋರಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ಬಣಗಳಿಗೆ ಹೊಸ ಹೆಸರು, ಚಿಹ್ನೆ

ಕ್ಷೇತ್ರಗಳಿಗೆ ಅಕ್ಟೋಬರ್ 6 ರಂದು ಉಪಚುನಾವಣೆ ನಡೆಯಲಿದೆ. ಈ ಉಪಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್‌ನ ಹಾಲಿ ಹೆಸರು ಮತ್ತು ಚಿಹ್ನೆಯನ್ನು (TMC Symbol) ಬಳಸದಂತೆ ಎರಡೂ ಬಣಗಳಿಗೆ ತಡೆ ನೀಡಿದ ಮರುದಿನವೇ, ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಎರಡೂ ಬಣಗಳಿಗೆ ನೂತನ ಹೆಸರು ಹಾಗೂ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.
ವಿಪಕ್ಷ ನಾಯಕ ರಿತಬ್ರತ ಬ್ಯಾನರ್ಜಿ ಬಣಕ್ಕೆ (ಅರೂಪ್ ರಾಯ್ ನೇತೃತ್ವದ) ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ (Democratic Trinamool Congress) ಎಂಬ ಹೆಸರು ಮತ್ತು ಲಕೋಟೆ (Envelope) ಚಿಹ್ನೆಯನ್ನು ಹಂಚಿಕೆ ಮಾಡಿದ್ದರೆ, ಮಾಜಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಎಂಬ ಹೆಸರು ಮತ್ತು ಫುಟ್‌ಬಾಲ್ ಆಟಗಾರ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ. ಈ ಗುಂಪನ್ನು ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ತ್ರಿಪುರಾಗಳಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷವೆಂದು ಪರಿಗಣಿಸಲಾಗುತ್ತದೆ(ಏಜೆನ್ಸೀಸ್​).