Pradnya Satav | ಮಹಾರಾಷ್ಟ್ರ ವಿಧಾನಪರಿಷತ್ ಸದಸ್ಯೆ ಪ್ರಜ್ಞಾ ಸತವ್
ಮುಂಬೈ: ಮುಂಬರುವ ಮಹಾರಾಷ್ಟ್ರ ಪುರಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ವಿಧಾನಪರಿಷತ್ ಸದಸ್ಯೆ ಪ್ರಜ್ಞಾ ಸತವ್ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಜ್ಞಾ, ಮಾಜಿ ಸಂಸದ, ದಿವಂಗತ ರಾಜೀವ್ ಸತವ್ ಪತ್ನಿ.
ಈ ದಿಢೀರ್ ಬೆಳವಣಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಠಿಸಿದೆ ಎನ್ನಲಾಗಿದ್ದು, ಪುರಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಬಹುದು ಎನ್ನಲಾಗಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ರಾಜ್ಯಾದ್ಯಂತ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಮುಂದಿನ ವರ್ಷ ಜನವರಿ 15 ರಂದು ಒಂದೇ ಹಂತದಲ್ಲಿ ಚುನಾವಣೆಗಳು ನಡೆಯಲಿವೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಮರುದಿನ ಜನವರಿ 16 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಸತಾವ್ ದಂಪತಿ ಹಿನ್ನಲೆ..
ಗಾಂಧಿ ಕುಟುಂಬಕ್ಕೆ ಬಹಳ ಆಪ್ತರಾಗಿದ್ದ ರಾಜೀವ್ ಸತವ್ 2021 ರಲ್ಲಿ ಕೋವಿಡ್ ಸೋಂಕಿನಿಂದ ನಿಧನರಾದರು. ಕಾಂಗ್ರೆಸ್ ನಾಯಕ ಶರದ್ ರಾನ್ಪೈಸ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಪ್ರಜ್ಞಾ ಸತವ್ 2021 ರಲ್ಲಿ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು. ರಾಜೀವ್ ಸತವ್ 2014 ರಿಂದ 2019 ರವರೆಗೆ ಹಿಂಗೋಲಿ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, 2019 ರ ಬಳಿಕ ಕಾಂಗ್ರೆಸ್ ಅವರಿಗೆ ರಾಜ್ಯಸಭೆಯಲ್ಲಿ ಅವಕಾಶ ನೀಡಿತು. 2017 ರಲ್ಲಿ ಕಾಂಗ್ರೆಸ್ ಪಕ್ಷದ ಗುಜರಾತ್ ವಿಧಾನಸಭಾ ಚುನಾವಣೆಯ ಉಸ್ತುವಾರಿಯಾಗಿ ಜವಾಬ್ದಾರಿ ತೆಗೆದುಕೊಂಡಿದ್ದರು. ರಾಜೀವ್ ಸತವ್ ಕಾಂಗ್ರೆಸ್ ಹೈ ಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು ಮತ್ತು ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಪ್ರಜ್ಞಾ ಸತವ್ 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಆ ಬಳಿಕ 2024 ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎರಡನೇ ಅವಧಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಅವರ ಅಧಿಕಾರಾವಧಿ 2030 ರವರೆಗೆ ಮಾನ್ಯವಾಗಿರುತ್ತದೆ(ಏಜೆನ್ಸೀಸ್).