Narendra Modi | ಪ್ರಧಾನಿ ನರೇಂದ್ರ ಮೋದಿ
ದಿಸ್ಪೂರ್: ಅಸ್ಸಾಂ ವಿಧಾನಸಭಾ ಚುನಾವಣೆಯ ಕಾವು ಜೋರಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ( Narendra Modi) ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡುವ ಮೂಲಕ ಭರ್ಜರಿ ಪ್ರಚಾರ ಆರಂಭಿಸಿದ್ದು, ಈ ವೇಳೆ 19,480 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ರಾಜ್ಯದ ಜನತೆಗೆ ಹೊಸ ಭರವಸೆಗಳನ್ನು ನೀಡಿದ್ದಾರೆ.
ಗುವಾಹಟಿ ಮತ್ತು ಕೊಕ್ರಝಾರ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆಗಳ ಅಂಗಡಿಯಾಗಿದ್ದು, ಅವರು ಒಂದು ಸುಳ್ಳು ಹೇಳಿದರೆ ಅದರ ಜೊತೆ ನಾಲ್ಕು ಸೂಪರ್-ಸುಳ್ಳುಗಳನ್ನು ಬೋನಸ್ ಆಗಿ ನೀಡುತ್ತಾರೆ. ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಯನ್ನು ಬಳಸಿಕೊಂಡು ತೈಲ ಮತ್ತು ಎಲ್‌ಪಿಜಿ ಬೆಲೆಗಳ ಬಗ್ಗೆ ಕಾಂಗ್ರೆಸ್ ದೇಶದ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.
ಬೋಡೋಲ್ಯಾಂಡ್ ಪ್ರದೇಶದ ಅಭಿವೃದ್ಧಿಗಾಗಿ ಸುಮಾರು 4,500 ಕೋಟಿ ರೂ.ಗಳ ಯೋಜನೆಗಳನ್ನು ಘೋಷಿಸಿದ ಪ್ರಧಾನಿ, ದಶಕಗಳ ಕಾಲ ಬೋಡೋಲ್ಯಾಂಡ್ ಹಿಂಸಾಚಾರ ಮತ್ತು ಕಷ್ಟಗಳನ್ನು ಅನುಭವಿಸಿತ್ತು. ಆದರೆ ಈಗ ಇಲ್ಲಿ ಶಾಂತಿ ಮತ್ತು ಪ್ರಗತಿಯ ಹೊಸ ಅಧ್ಯಾಯ ಆರಂಭವಾಗಿದೆ. ಬೋಡೋ ಶಾಂತಿ ಒಪ್ಪಂದದ ಮೂಲಕ ಬಿಜೆಪಿ ಸರ್ಕಾರವು ಈ ಭಾಗದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡಿದೆ ಎಂದರು.
ಅಭಿವೃದ್ಧಿ ಯೋಜನೆಗಳು
ರಸ್ತೆ ಸಂಪರ್ಕ: ಬೋಡೋಲ್ಯಾಂಡ್‌ನ ರಸ್ತೆಗಳಿಗಾಗಿ 1,100 ಕೋಟಿ ರೂ. ಹಂಚಿಕೆ.
ರೈಲು ಸೇವೆ: ಕಾಮಾಕ್ಯ-ಚಾರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಗುವಾಹಟಿ-ನ್ಯೂ ಜಲ್‌ಪೈಗುರಿ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ.
ಅಸ್ಸಾಂ ಮಾಲಾ: ಈ ಉಪಕ್ರಮದ 3ನೇ ಹಂತದ ಮೂಲಕ ರಾಜ್ಯದಾದ್ಯಂತ ರಸ್ತೆ ಸಂಪರ್ಕ ಬಲಪಡಿಸುವ ಯೋಜನೆ.
ರೋಟಿ, ಬೇಟಿ ಮತ್ತು ಮತಿಗೆ ಕಾಂಗ್ರೆಸ್ ಬೆದರಿಕೆ: ಮೋದಿ
ಕಾಂಗ್ರೆಸ್ ಪಕ್ಷವು ಯಾವಾಗಲೂ ಒಳನುಸುಳುಕೋರರಿಗೆ ಬೆಂಬಲ ನೀಡುತ್ತಾ ಬಂದಿದ್ದು, ಇದು ರೋಟಿ (ಜೀವನೋಪಾಯ), ಬೇಟಿ (ಹೆಣ್ಣುಮಕ್ಕಳು) ಮತ್ತು ಮತಿ (ಭೂಮಿ) ಮೂರಕ್ಕೂ ಬೆದರಿಕೆಯೊಡ್ಡಿದೆ. ಬುಡಕಟ್ಟು ಜನಾಂಗದವರ ಭೂಮಿಯನ್ನು ಅಕ್ರಮವಾಗಿ ನುಸುಳುಕೋರರಿಗೆ ಹಸ್ತಾಂತರಿಸಲಾಗಿತ್ತು. ಈಗ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಆ ಭೂಮಿಯನ್ನು ಮರಳಿ ಪಡೆಯಲು ಶ್ರಮಿಸುತ್ತಿದೆ ಎಂದು ಹೇಳಿದರು(ಏಜೆನ್ಸೀಸ್).