Sonia Gandhi 
ದೇಶ

ಕೇರಳದ ಮುಂದಿನ ಸಿಎಂ ಯಾರು?; ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ಬಗೆಹರಿಯದ ಗೊಂದಲ; ಅಂತಿಮ ನಿರ್ಧಾರ ಸೋನಿಯಾ ಗಾಂಧಿಗೆ ಹೆಗಲಿಗೆ!.. Sonia Gandhi

ಪ್ರಮುಖ ಮುಖ್ಯಾಂಶಗಳು

  • ​ಮೇ 23ರೊಳಗೆ ಕೇರಳದಲ್ಲಿ ನೂತನ ಸರ್ಕಾರ ರಚನೆಗೆ ಗಡುವು
  • ​ಕೇರಳ ಸಿಎಂ ಅಭ್ಯರ್ಥಿ ಆಯ್ಕೆ ಹೊಣೆ ಸೋನಿಯಾ ಗಾಂಧಿ ಹೆಗಲಿಗೆ.
  • ​ವೇಣುಗೋಪಾಲ್, ಚೆನ್ನಿತ್ತಲ, ಸತೀಶನ್ ನಡುವೆ ರೇಸ್.
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)​​  140 ಕ್ಷೇತ್ರಗಳ ಪೈಕಿ  102 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ, ಇನ್ನೂ ಕೇರಳದ ಮುಂದಿನ ಸಿಎಂ ಯಾರು ಎನ್ನುವುದು ಸಸ್ಪೆನ್ಸ್​ ಆಗೆ ಉಳಿದಿದೆ. 
 ಮುಂದಿನ ಸಿಎಂ ಯಾರಾಗಬೇಕು ಎನ್ನುವ ನಿಟ್ಟಿನಲ್ಲಿ ಶನಿವಾರ ದೆಹಲಿಯಲ್ಲಿ ನಡೆದ ಸುದೀರ್ಘ ಸಭೆ ನಡೆಸಲಾಯಿತು. ಇಷ್ಟಾಗಿಯೂ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳದ ಕಾರಣ, ಸಿಎಂ ಆಯ್ಕೆಯ ಅಂತಿಮ ಜವಾಬ್ದಾರಿಯನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ವಹಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

 ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದೀಗೆ

ಕೇರಳದ ನೂತನ ಸಿಎಂ ಯಾರು ಎಂದು ನಿರ್ಧರಿಸುವ ಆಯ್ಕೆಯನ್ನು ನಾವೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್​ಗೆ ಬಿಟ್ಟಿದ್ದೇವೆ. ಅವರು ಶೀಘ್ರದಲ್ಲೇ ಯಾರು ಮುಂದಿನ ಮುಖ್ಯಮಂತ್ರಿ ಎನ್ನುವುದನ್ನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಾ ದಾಸ್ ಮುನ್ಶಿ ಹೇಳಿದರು. 
ಸುದೀರ್ಘ ಸಭೆಯ ಚರ್ಚಾ ಸಮಯದಲ್ಲಿ ಯುಡಿಎಫ್​ ಶಾಸಕರು  ಹೈಕಮಾಂಡ್​ಗೆ ಮುಂದಿನ ಸಿಎಂ ಆಯ್ಕೆ ಮಾಡಲಿ ಎಂಬುದಾಗಿ ಬಲಾವಾಗಿ ಮಂಡಿಸಿದರು. ಅಷ್ಟೇ ಅಲ್ಲದೆ ಹೈಕಮಾಂಡ್​ ನಿರ್ಧಾರವೇ ಅಂತಿಮ ಎನ್ನುವುದಾಗಿ ಮಾತನಾಡಿದರು.  ಇದು ಪಕ್ಷದ ಒಳಗಿನ ಭಿನ್ನಮತವನ್ನು ತಡೆಯುವ ತಂತ್ರ ಎಂದು ವಿಶ್ಲೇಷಿಸಲಾಗಿದೆ.

ಕೆಸಿ ವೇಣುಗೋಪಾಲ್​ಗೆ ಶಾಸಕರ ಬೆಂಬಲ

​ ಮುಖ್ಯಮಂತ್ರಿ ಗದ್ದುಗೆಯನ್ನೇರಲು ಮೂವರು ಘಟಾನುಘಟಿ ನಾಯಕರು ಆಕಾಂಕ್ಷಿಗಳು. ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ವಿ.ಡಿ. ಸತೀಶನ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಶಾಸಕರಲ್ಲಿ ಹೆಚ್ಚಿನವರು ವೇಣುಗೋಪಾಲ್ ಅವರ ಪರವಾಗಿದ್ದಾರೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ.

ಪೋಸ್ಟರ್​ ಬಗ್ಗೆ ಅಸಮಾಧಾನ

​ತಮ್ಮ ನೆಚ್ಚಿನ ನಾಯಕರ ಪರವಾಗಿ ಬೆಂಬಲಿಗರು ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದು ಮತ್ತು ಘೋಷಣೆಗಳನ್ನು ಕೂಗುತ್ತಿರುವುದಕ್ಕೆ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವರ್ತನೆಗಳು ಪಕ್ಷದ ಇಮೇಜ್‌ಗೆ ಧಕ್ಕೆ ತರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

 ಮೇ 23 ಕೊನೆಯ ದಿನ

​ಕೆ.ಸಿ. ವೇಣುಗೋಪಾಲ್ ಅವರನ್ನು ಕೇರಳದ ಮುಖ್ಯಮಂತ್ರಿ ಮಾಡಬೇಕೇ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿಯೇ ಮುಂದುವರಿಸಬೇಕೇ ಎಂಬ ಬಗ್ಗೆ ರಾಹುಲ್ ಗಾಂಧಿ ಚಿಂತನೆಯಲ್ಲಿದ್ದಾರೆ. ಕೇರಳದಲ್ಲಿ ಹೊಸ ಸರ್ಕಾರ ರಚಿಸಲು ಮೇ 23 ಕೊನೆಯ ದಿನವಾಗಿದೆ. ಹೀಗಾಗಿ ಮುಂದಿನ 24 ರಿಂದ 48 ಗಂಟೆಗಳ ಒಳಗೆ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.

ಮೀಟಿಂಗ್​ನಲ್ಲಿ ಯಾರೆಲ್ಲ ಭಾಗಿಯಾಗಿದ್ರು?

ಕೇರಳಕ್ಕೆ ನೂತನ ಸಿಎಂ ಆಯ್ಕೆ ಸಂಬಂಧ ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಮಲ್ಲಿಕಾರ್ಜುನ್​ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪದಾಸ್ ಮುನ್ಶಿ, ಕೇರಳಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನ್ನಿ ಜೋಸೆಫ್, ಶಾಸಕರಾದ ಸತೀಸನ್, ರಮೇಶ್ ಚೆನ್ನಿತ್ತಲ ಸೇರಿದಂತೆ ಎಐಸಿಸಿ ವೀಕ್ಷಕರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕೆನ್ ಕೂಡ​ ಉಪಸ್ಥಿತರಿದ್ದರು, (ಏಜೆನ್ಸೀಸ್).