ಕೇರಳ ಸಿಎಂ ವಿ.ಡಿ.ಸತೀಶನ್ ಬೆಂಗಾವಲು ವಾಹನ ತಡೆದ ‘ಕೈ’ ನಾಯಕ
- ಕೇರಳ ಸಿಎಂ ವಿ.ಡಿ.ಸತೀಶನ್ ಬೆಂಗಾವಲು ವಾಹನ ತಡೆದ ‘ಕೈ’ ನಾಯಕ
- ಕಾಂಗ್ರೆಸ್ ನಾಯಕ ಅನಿಲ್ ಕುಮಾರ್ ಅವರನ್ನು ವಶಕ್ಕೆ ಪಡೆದ ಪೊಲೀಸರು
- ನಡುವೆ ರಸ್ತೆಯಲ್ಲೇ ಸತೀಶನ್ ಜತೆ ಕಾಂಗ್ರೆಸ್ ನಾಯಕ ಅನಿಲ್ ವಾಗ್ವಾದ
Kerala CM convoy blocked: ಕೇರಳ ಕಾಂಗ್ರೆಸ್‌ನಲ್ಲಿ ಒಳಜಗಳ ಮತ್ತೊಮ್ಮೆ ಬೀದಿಗೆ ಬಂದಂತಾಗಿದೆ. ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಬೆಂಗಾವಲು ವಾಹನವನ್ನು ಕಾಂಗ್ರೆಸ್ ನಾಯಕನೊಬ್ಬ ತಡೆದಿದ್ದು, ಬಳಿಕ ಸಿಎಂ ಮತ್ತು ನಾಯಕನ ನಡುವೆ ರಸ್ತೆಯಲ್ಲೇ ವಾಗ್ವಾದ ನಡೆದಿದೆ. ಘಟನೆ ಸಂಬಂಧ ಕಾಂಗ್ರೆಸ್‌ನ ತಿರುವನಂತಪುರ ಜಿಲ್ಲಾ ಕಾಂಗ್ರೆಸ್ ಸಮಿತಿ (DCC) ನಾಯಕ ಅನಿಲ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು, ತಿರುವನಂತಪುರದ ಚೆಂಪಳಂತಿ ಪ್ರದೇಶದಲ್ಲಿ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಸತೀಶನ್ ತೆರಳುತ್ತಿದ್ದರು. ಈ ವೇಳೆ ಚೇಂತಿ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಸಿಎಂ ಅವರ ವಾಹನವನ್ನು ನಿಲ್ಲಿಸಿತು ಎನ್ನಲಾಗಿದೆ.
ಕಾರಿನಿಂದ ಕೆಳಗಿಳಿದ ಸಿಎಂ
ವಾಹನ ನಿಂತ ಬಳಿಕ ಸಿಎಂ ಸತೀಶನ್ ಕಾರಿನಿಂದ ಕೆಳಗಿಳಿದು ತಿರುವನಂತಪುರ ಡಿಸಿಸಿ ನಾಯಕ ಅನಿಲ್ ಕುಮಾರ್ ಜೊತೆ ಮಾತನಾಡಿದ್ದಾರೆ. ಆದರೆ, ಈ ಮಾತುಕತೆ ಬಿಸಿ-ಬಿಸಿ ವಾಗ್ವಾದ ತಿರುಗಿದೆ. ಕೆಲ ನಿಮಿಷಗಳ ಬಳಿಕ ಸತೀಶನ್ ಮತ್ತೆ ಕಾರು ಹತ್ತಿ ಅಲ್ಲಿಂದ ತೆರಳಿದ್ದಾರೆ. ಚೇಂತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಿಎಂ ಸತೀಶನ್ ಬರಬೇಕಿತ್ತು ಎಂದು ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ.
ಅನಿಲ್ ಕುಮಾರ್ ವಿರುದ್ಧ ಕೇಸ್
ಸಿಎಂ ಅವರ ವಾಹನ ತಡೆದು ಕರ್ತವ್ಯ ನಿರ್ವಹಿಸುತ್ತಿದ್ದ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಪೊಲೀಸರು ಅನಿಲ್ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಎಂ ಅವರನ್ನು ಆಕ್ರಮಣಕಾರಿ ರೀತಿಯಲ್ಲಿ ಪ್ರಶ್ನಿಸಿದ್ದಲ್ಲದೆ, ಅವರ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರು ತಡೆದಿಲ್ಲ, ಗುಂಪುಗಾರಿಕೆಯೇ ಸಮಸ್ಯೆ
ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅನಿಲ್ ಕುಮಾರ್ ತಳ್ಳಿ ಹಾಕಿದ್ದಾರೆ. ತಾವು ಸಿಎಂ ಕಾರನ್ನು ತಡೆದಿಲ್ಲ, ಬದಲಿಗೆ ಸಿಎಂ ಅವರನ್ನು ಸ್ವಾಗತಿಸಲು ಅಲ್ಲಿಗೆ ಬಂದಿದ್ದೆ ಎಂದಿದ್ದಾರೆ. ಇದೇ ವೇಳೆ ಸತೀಶನ್ ಅವರ ವರ್ತನೆಯನ್ನು ಟೀಕಿಸಿದ್ದು, ‘ಇದು ಗುಂಪು ರಾಜಕೀಯದ ಭಾಗ. ಗುಂಪುಗಾರಿಕೆಯೇ ಸಮಸ್ಯೆ’ ಎಂದು ಅನಿಲ್ ಕುಮಾರ್ ಆರೋಪಿದ್ದಾರೆ.
ಅನಿಲ್ ಬಂಧನಕ್ಕೆ ಡಿಸಿಸಿ ಸದಸ್ಯನ ಖಂಡನೆ
ಕಾಂಗ್ರೆಸ್ ಡಿಸಿಸಿ ಸದಸ್ಯ ಸುಹೈಲ್ ಶಹಜಹಾನ್ ಕೂಡ ಅನಿಲ್ ಕುಮಾರ್ ಬಂಧನವನ್ನು ಖಂಡಿಸಿದ್ದಾರೆ. ಪಕ್ಷಕ್ಕಾಗಿ ಹಲವು ವರ್ಷ ದುಡಿದ ಕಾರ್ಯಕರ್ತನನ್ನು ಬಂಧಿಸಿದ್ದು ಬೇಸರ ತಂದಿದೆ. ಅನಿಲ್ ಕುಮಾರ್ ಸಿಎಂಗೆ ಅಗೌರವ ತೋರಿದ್ದನ್ನು ತಾವು ನೋಡಿಲ್ಲ ಎಂದು ಹೇಳಿದ್ದಾರೆ. ಸಧ್ಯ ಈ ಘಟನೆ ಕೇರಳ ಕಾಂಗ್ರೆಸ್‌ನ ಗುಂಪುಗಾರಿಕೆ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ,(ಏಜೆನ್ಸೀಸ್).