ಡಿಸಿಎಂ ಪವನ್ ಕಲ್ಯಾಣ್ ಮತ್ತು ಸಿಎಂ ರೇವಂತ್ ರೆಡ್ಡಿ 
ದೇಶ

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ v\s ಪವನ್ ಕಲ್ಯಾಣ್; ಜನಸೇನಾ ಪಕ್ಷದ ಸಭೆಗೆ ಅನುಮತಿ ನಿರಾಕರಣೆ | Telangana

ಹೈದರಾಬಾದ್: ತೆಲಂಗಾಣದಲ್ಲಿ(Telangan) ಆಡಳಿತರೂಢ ಕಾಂಗ್ರೆಸ್ ಸರ್ಕಾರ ವರ್ಸಸ್ ಪವನ್ ಕಲ್ಯಾಣ್ ಎಂಬ ರಾಜಕೀಯ ಚರ್ಚೆ ನಡೆಯುತ್ತಿದ್ದು, ನಾಳೆ(ಜೂ. 02) ಜನ ಸೇನಾ ಪಕ್ಷ ಆಯೋಜಿಸಿದ್ದ ತೆಲಂಗಾಣ ನವ ನಿರ್ಮಾಣ ಸಂಕಲ್ಪ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಜನ ಸೇನಾ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಜೂನ್ 2 ರಂದು ಹೈದರಾಬಾದ್‌ನಲ್ಲಿ ತೆಲಂಗಾಣ ರಾಜ್ಯ ರಚನೆಯ ದಿನದ ಅಂಗವಾಗಿ ಸಭೆ ನಡೆಸಲು ಉದ್ದೇಶಿಸಿದ್ದರು. ಆದರೆ, ಕಾನೂನು ಸುವ್ಯವಸ್ಥೆ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಸಭೆಗೆ ಅನುಮತಿ ನೀಡಿಲ್ಲ ಎನ್ನಲಾಗಿದೆ.
ಇನ್ನೂ ಪಕ್ಷದ ಸಭೆಗೆ ಅನುಮತಿ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಸೇನಾ ಪಕ್ಷವು ಅನುಮತಿಗಾಗಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಪವನ್ ಕಲ್ಯಾಣ್ ಸಭೆಯ ಆಯೋಜನೆ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಪೊನ್ನಂ ಪ್ರಭಾಕರ್, ತೆಲಂಗಾಣ ವಿರೋಧಿ ಭಾವನೆಗಳಿಂದ ತುಂಬಿರುವ ಪವನ್ ಕಲ್ಯಾಣ್, ಈಗ ತೆಲಂಗಾಣದ ಗುರುತು ಮತ್ತು ಸ್ವಾಭಿಮಾನಕ್ಕೆ ಹಾನಿ ಮಾಡಲು ಬಿಜೆಪಿ ಜೊತೆ ಸೇರಿ ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ತೆಲಂಗಾಣದ ಜನರಲ್ಲಿ ಕ್ಷಮೆಯಾಚಿಸಿದ ನಂತರವೇ ಸಭೆಯನ್ನು ಇಲ್ಲಿ ನಡೆಸಬೇಕೆಂದಿರುವ ಅವರು, ತೆಲಂಗಾಣ ಜನರ ಕಣ್ಣು ಬಿದ್ದರೆ ಕೋನಸೀಮಾದ ತೆಂಗಿನ ಮರಗಳು ಒಣಗುತ್ತವೆ ಎಂದು ಹೇಳಿದ್ದ ಪವನ್ ಕಲ್ಯಾಣ್ ಈಗ ಯಾವ ಮುಖ ಇಟ್ಟುಕೊಂಡು ಸಭೆ ನಡೆಸುತ್ತಿದ್ದಾರೆ. ರಾಜ್ಯ ರಚನೆಯಾದಾಗ 11 ದಿನಗಳವರೆಗೆ ಅನ್ನ ತಿನ್ನುವುದನ್ನು ನಿಲ್ಲಿಸಿದೆ ಎಂದು ಹೇಳಿದ್ದ ವ್ಯಕ್ತಿ, ಅದೇ ರಾಜ್ಯದ ರಚನೆ ದಿನ ಇಲ್ಲಿ ಬಂದು ಮೊಸಳೆ ಕಣ್ಣೀರು ಸುರಿಸಿದ್ರೆ ಜನ ನಂಬಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).