ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಕೇವಲ ಕಚ್ಚಾತೈಲ, ಎಲ್ಪಿಜಿ ಪೂರೈಕೆಗೆ ಅಷ್ಟೇ ತೊಂದರೆ ಅಲ್ಲ, ಕಚ್ಚಾ ವಸ್ತುಗಳ ಪೂರೈಕೆಯ ಅಡಚಣೆಯಿಂದ ಭಾರತದ $860 ಡಾಲರ್ ಮಿಲಿಯನ್ ಕಾಂಡೋಮ್ ಉತ್ಪಾದನಾ ಉದ್ಯಮಕ್ಕೂ(condom industry) ಯುದ್ಧದ ಬಿಸಿ ತಟ್ಟಿದೆ ಎಂದು ವರದಿಯಾಗಿದೆ.
ಕಾಂಡೋಮ್ ತಯಾರಿಕೆಗೆ ಬೇಕಾಗುವ ಪ್ರಮುಖ ಕಚ್ಚಾ ವಸ್ತುಗಳಾದ ಪೆಟ್ರೋಕೆಮಿಕಲ್‌ಗಳು ಮತ್ತು ಲೂಬ್ರಿಕಂಟ್‌ಗಳ ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿರುವ ಪರಿಣಾಮ ಉತ್ಪಾದನಾ ವೆಚ್ಚ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾಂಡೋಮ್ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಾರ್ಷಿಕವಾಗಿ ಸುಮಾರು 221 ಕೋಟಿ ಕಾಂಡೋಮ್‌ಗಳನ್ನು ಉತ್ಪಾದಿಸುವ ಸರ್ಕಾರಿ ಸ್ವಾಮ್ಯದ HLL ಲೈಫ್‌ಕೇರ್ ಲಿಮಿಟೆಡ್, ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್ ಹಾಗೂ ಕ್ಯುಪಿಡ್ ಲಿಮಿಟೆಡ್ ಸೇರಿದಂತೆ ಪ್ರಮುಖ ಕಂಪನಿಗಳು ಪ್ರಸ್ತುತ ಕಚ್ಚಾವಸ್ತು ಪೂರೈಕೆಯ ಅಡಚಣೆಯ ಆಘಾತವನ್ನು ಎದುರಿಸುತ್ತಿವೆ ಎಂದು ವರದಿಗಳು ಉಲ್ಲೇಖಿಸಿವೆ.
ಕಾಂಡೋಮ್ ತಯಾರಿಕೆಗೆ ಬೇಕಾಗಿರುವ ಸಿಲಿಕೋನ್ ಎಣ್ಣೆ ಮತ್ತು ಅಮೋನಿಯಾ ಆಮದಿಗೆ ಭಾರತ ವಿದೇಶಗಳ ಮೇಲೆ ಅವಲಂಬಿತವಾಗಿದೆ. ವಿಶೇಷವಾಗಿ ಇರಾನ್ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಸಂಘರ್ಷದಿಂದ ಅದರ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಸಿಲಿಕೋನ್ ಎಣ್ಣೆ ಒಂದು ಪ್ರಮುಖ ಲೂಬ್ರಿಕಂಟ್ ಆಗಿದ್ದು, ಈ ವಸ್ತುವು ಪ್ರಸ್ತುತ ದೊಡ್ಡ ಕೊರತೆಯನ್ನು ಎದುರಿಸುತ್ತಿದೆ. ಕಚ್ಚಾ ಲ್ಯಾಟೆಕ್ಸ್ ಅನ್ನು ಸ್ಥಿರಗೊಳಿಸಲು ಅಮೋನಿಯಾ ಅತ್ಯಗತ್ಯ, ಮತ್ತು ಅದರ ಬೆಲೆಗಳು ಶೇಕಡಾ 40-50 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಈ ಕುರಿತು ದಿನಪತ್ರಿಕೆಯೊಂದರ ಜೊತೆ ಮಾತನಾಡಿರುವ ಕಾಂಡೋಮ್ ಉತ್ಪಾದನಾ ಸಂಸ್ಥೆ ಅಧಿಕಾರಿ ಪ್ರಕಾರ, ಕಾಂಡೋಮ್ ಉತ್ಪಾದನೆಗೆ ಅಗತ್ಯವಾದ ಅಮೋನಿಯಾದ ಬೆಲೆಯಲ್ಲಿ ಶೇ. 40-50 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಸಿಲಿಕೋನ್ ಎಣ್ಣೆಯ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ಅನಿಶ್ಚಿತತೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ವಿಶ್ವದ ಅತಿದೊಡ್ಡ ಕಾಂಡೋಮ್ ರಫ್ತು ಮಾಡುವ ದೇಶಗಳಲ್ಲಿ ಭಾರತವು ಒಂದಾಗಿದ್ದು, ಅನೇಕ ಆಫ್ರಿಕನ್ ಮತ್ತು ಯುರೋಪ್ ರಾಷ್ಟ್ರಗಳಿಗೆ ಭಾರತದಿಂದಲೇ ಕಾಂಡೋಮ್ ರಪ್ತು ಮಾಡಲಾಗುತ್ತಿದೆ. ಆದರೆ ಮಧ್ಯಪ್ರಾಚ್ಯದಲ್ಲಿನ ಅಸ್ಥಿರತೆಯಿಂದಾಗಿ ರಫ್ತು ಪ್ರಕ್ರಿಯೆ ಮಂದಗತಿಯಲ್ಲಿದ್ದು, ಭಾರತೀಯ ಕಂಪನಿಗಳ ಲಾಭದ ಮೇಲೆಯೂ ಸಂಘರ್ಷ ಪರಿಣಾಮ ಬೀರಿದೆ (ಏಜೆನ್ಸೀಸ್).