ಬಾಲಿವುಡ್​ ಹಾಸ್ಯನಟ ರಾಜ್​ಪಾಲ್​ ಯಾದವ್​ 
ದೇಶ

ಹಾಸ್ಯನಟನಿಗೆ ಜೈಲೇ ಗತಿ: ರಾಜ್​ಪಾಲ್​ ಯಾದವ್​ಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ | Rajpal Yadav

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ವಂಚನೆ ಹಿನ್ನಲೆ ಜೈಲು ಪಾಲಾಗಿರುವ ರಾಜ್​ಪಾಲ್​ ಯಾದವ್​
  • ಫೆ. 16 ಕ್ಕೆ ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್​
  • ವಿಚಾರಣೆ ವೇಳೆ ನಟವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ
ನವದೆಹಲಿ: ಆರ್ಥಿಕ ವಂಚನೆ ಆರೋಪದ ಹಿನ್ನಲೆ ತಿಹಾರ್ ಜೈಲು ಸೇರಿರುವ ಬಾಲಿವುಡ್​ ಹಾಸ್ಯನಟ ರಾಜ್​ಪಾಲ್​ ಯಾದವ್​ (Rajpal Yadav) ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಪ್ರಕರಣವನ್ನು ಸೋಮವಾರ (ಫೆ.16) ಕ್ಕೆ ಮುಂದೂಡಿದ್ದು, ಇನ್ನು ನಾಲ್ಕು ದಿನ ರಾಜಪಾಲ್​ ಜೈಲಿನಲ್ಲಿಯೇ ಇರಬೇಕಾಗಿದೆ.
2010 ರಲ್ಲಿ ಯಾದವ್ ಮೊದಲ ಬಾರಿ ನಿರ್ದೇಶಿಸಿದ್ದ ಅತಾ,ಪತಾ,ಲಾಪತಾ ಸಿನಿಮಾಗಾಗಿ ಮುರಳಿ ಪ್ರಾಜೆಕ್ಟ್ಸ್ ಕಂಪನಿ ಹತ್ತಿರ 5 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದರು. ಈ ಹಣವನ್ನು ಹಿಂದಿರುಗಿಸಿದ ಹಿನ್ನಲೆ ಈ ಕಂಪನಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ಸಾಲ ಪಡೆದ ಮೊತ್ತವನ್ನು ಮರು ಪಾವತಿಸದ ಕಾರಣ ಈಗ ರಾಜ್​ಪಾಲ್​​ 9 ಕೋಟಿ ರೂಪಾಯಿ ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲನ್ನು ಸೇರಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಯಾದವ್ ಪರ ವಕೀಲರು ನ್ಯಾಯಾಲಯದಿಂದ ಹಣ ಮರು ಪಾವತಿಗೆ ಸಮಯವಕಾಶ ಹಾಗೂ ಶಹಜಹಾನ್ಪುರದಲ್ಲಿ ನಡೆಯಲಿರುವ ತಮ್ಮ ಸೊಸೆಯ ಮದುವೆಗೆ ಯಾದವ್ ಹಾಜರಾಗಬೇಕಾಗಿದೆ ಎಂದು ವಿನಂತಿಸಿಕೊಂಡರು. 

ರಾಜ್‌ಪಾಲ್​ಗೆ ಕೋರ್ಟ್​ ತರಾಟೆ

ವಿಚಾರಣೆಯ ಸಮಯದಲ್ಲಿ, ದೆಹಲಿ ಹೈಕೋರ್ಟ್,ಯಾದವ್ ಅವರ ಜೈಲು ಶಿಕ್ಷೆ ನ್ಯಾಯಾಲಯದ ಆದೇಶದಿಂದಲ್ಲ, ಬದಲಾಗಿ ಅವರ ಸ್ವಂತ ನಡವಳಿಕೆಯಿಂದ ಉಂಟಾಗಿದೆ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಗಮನಿಸಿದರು. ನಿಮಗೆ ಹಲವಾರು ಬಾರಿ ಅವಕಾಶವನ್ನು ನೀಡಲಾಯಿತು ಆದರೆ ನೀವು ನಿಮ್ಮ ಹೊಣೆಗಾರಿಕೆಯಿಂದ ಓಡಿಹೋಗಿದ್ದಿರಿ ಎಂದು ನ್ಯಾಯಪೀಠ ತರಾಟೆ ತೆಗೆದುಕೊಂಡಿತು.
ನೀವು ಈಗಾಗಲೇ ಅಪರಾಧವನ್ನು ಒಪ್ಪಿಕೊಂಡಿರುವಾಗ, ಶಿಕ್ಷೆಯನ್ನು ಅಮಾನತುಗೊಳಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ನಿಮ್ಮ ವಾದ ಏನೆಂದು ನನಗೆ ಅರ್ಥವಾಗುತ್ತಿಲ್ಲ. ಅಪರಾಧ ನಿರ್ಣಯದಲ್ಲಿ ಹಸ್ತಕ್ಷೇಪ ಮಾಡಲು ನಿಮಗೆ ಯಾವುದೇ ಅರ್ಹತೆ ಇಲ್ಲ ಎಂದು ನ್ಯಾಯಾಧೀಶರು ಹೇಳಿದರು. 
ನಿಮಗೆ ಈಗಾಗಲೇ ಹಲವು ಅವಕಾಶಗಳನ್ನು ನೀಡಿದ್ದಾಗಿದೆ, ಆದರೆ ನೀವು ಹಣವನ್ನು ಪಾವತಿಸಲು ವಿಫಲರಾಗಿದ್ದಿರಿ, ಈಗ ಹೇಗೆ ಹಣ ಪಾವತಿಸುತ್ತಿರಿ ಎಂದು ನನಗೆ ತಿಳಿಯುತ್ತಿಲ್ಲ ಎಂದು ಅವರು ಹೇಳಿದರು. ರಾಜ್​ಪಾಲ್​ ಯಾದವ್​ ತಿಹಾರ್​ ಜೈಲು ಸೇರಿದ ಬಳಿಕ, ಬಾಲಿವುಡ್ ಮತ್ತು ರಾಜಕೀಯದ ಹಲವಾರು ಜನರು ಹಾಸ್ಯನಟನ ಬೆಂಬಲಕ್ಕೆ ಬಂದಿದ್ದು, ಧನ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ,(ಏಜನ್ಸೀಸ್​).