100 ರೂ.ಗೂ ಕಡಿಮೆ ಬೆಲೆಯ ಈ ತೆಂಗಿನಕಾಯಿ ಹರಾಜಾಗಿದ್ದು ಬರೋಬ್ಬರಿ 2.55 ಲಕ್ಷ ರೂ.ಗೆ! 
ದೇಶ

100 ರೂ.ಗೂ ಕಡಿಮೆ ಬೆಲೆಯ ಈ ತೆಂಗಿನಕಾಯಿ ಹರಾಜಾಗಿದ್ದು ಬರೋಬ್ಬರಿ 2.55 ಲಕ್ಷ ರೂ.ಗೆ! ಏಕಿಷ್ಟು ಡಿಮ್ಯಾಂಡ್​? ಇಲ್ಲಿದೆ ಅಚ್ಚರಿ ಕಾರಣ...Coconut Auction

ರೋಚಕ ಹಾಗೂ ತೀವ್ರ ಪೈಪೋಟಿಯ ಹರಾಜು ಪ್ರಕ್ರಿಯೆಯು ಸೋಮವಾರ ತಮಿಳುನಾಡಿನ ಬೋಡಿನಾಯಕನೂರಿನ (Bodinayakanur) ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಚೆನ್ನೈ: ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ತೆಂಗಿನಕಾಯಿಯ ಬೆಲೆ ಎಷ್ಟಿರಬಹುದು? ಹೆಚ್ಚೆಂದರೆ 50 ರೂಪಾಯಿ ಇರಬಹುದು. ಬೇಡಿಕೆ ತೀರಾ ಹೆಚ್ಚಾಗಿದ್ದರೆ 100 ರೂಪಾಯಿಯವರೆಗೆ ಇರಬಹುದು. ಆದರೆ, ತಮಿಳುನಾಡಿನ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ನಡೆದ ವಿಶೇಷ ಹರಾಜಿನಲ್ಲಿ ಕೇವಲ 55 ರೂಪಾಯಿ ಬೆಲೆಬಾಳುವ ಸಾಮಾನ್ಯ ತೆಂಗಿನಕಾಯಿಯೊಂದು ( Coconut Auction ) ಬರೋಬ್ಬರಿ 2.55 ಲಕ್ಷ ರೂಪಾಯಿಗೆ ಮಾರಾಟವಾಗಿ ಇಡೀ ದೇಶವನ್ನೇ ನಿಬ್ಬೆರಗಾಗಿಸಿದೆ.

ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸ್ವೀಕರಿಸಿದ ಈ ಪವಿತ್ರ ತೆಂಗಿನಕಾಯಿಯನ್ನು ತಮ್ಮದಾಗಿಸಿಕೊಳ್ಳಲು ಭಕ್ತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಹರಾಜಿನ ಮೊತ್ತ ಲಕ್ಷಗಳ ಗಡಿ ದಾಟಿ ಭಾರಿ ಸಂಚಲನ ಮೂಡಿಸಿದೆ. ಈ ರೋಚಕ ಹಾಗೂ ತೀವ್ರ ಪೈಪೋಟಿಯ ಹರಾಜು ಪ್ರಕ್ರಿಯೆಯು ಸೋಮವಾರ ತಮಿಳುನಾಡಿನ ಬೋಡಿನಾಯಕನೂರಿನ (Bodinayakanur) ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಕೇವಲ 11,000 ರೂಪಾಯಿ ಮೂಲ ಬೆಲೆಯೊಂದಿಗೆ ಆರಂಭವಾದ ಈ ಹರಾಜು ಬರೋಬ್ಬರಿ 30 ನಿಮಿಷಗಳಿಗೂ ಹೆಚ್ಚು ಕಾಲ ಅತ್ಯಂತ ಉತ್ಸಾಹದಿಂದ ಮುಂದುವರಿಯಿತು. ಸ್ಥಳೀಯ ಭಕ್ತರಾದ ಗುಣಶೇಖರನ್ ಎಂಬುವವರು 2.45 ಲಕ್ಷ ರೂಪಾಯಿಯವರೆಗೆ ಬಿಡ್ ಕೂಗಿದರೆ, ಅಂತಿಮವಾಗಿ ಮಧುರೈ ಸಮೀಪದ ಚೆಲ್ಲಂಪಟ್ಟಿಯ ರೇಣುಕಾ ಎಂಬುವವರು 2.55 ಲಕ್ಷ ರೂಪಾಯಿಗೆ ಹರಾಜನ್ನು ಗೆದ್ದುಕೊಂಡರು. ಹರಾಜು ಮುಗಿದ ತಕ್ಷಣ ದೇವಸ್ಥಾನದ ಆಡಳಿತ ಮಂಡಳಿಯು ರೇಣುಕಾ ಅವರ ಕುಟುಂಬ ಸದಸ್ಯರಿಗೆ ಹಾರ ಹಾಕಿ ಸನ್ಮಾನಿಸಿ, ಪವಿತ್ರ ತೆಂಗಿನಕಾಯಿಯನ್ನು ಹಸ್ತಾಂತರಿಸಿತು.

ಧಾರ್ಮಿಕ ಕಾರಣವಿದೆ!

ಇಷ್ಟೊಂದು ದುಬಾರಿ ಬೆಲೆಗೆ ಈ ತೆಂಗಿನಕಾಯಿ ಮಾರಾಟವಾಗಲು ಬಲವಾದ ಧಾರ್ಮಿಕ ಕಾರಣವಿದೆ. ಇದು ಸಾಮಾನ್ಯ ತೆಂಗಿನಕಾಯಿಯಲ್ಲ, ಬದಲಾಗಿ ಕಂದ ಷಷ್ಠಿ ಉತ್ಸವದ ಭಾಗವಾಗಿ ನಡೆಯುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ (ಮುರುಗನ್), ವಲ್ಲಿ ಮತ್ತು ದೇವಸೇನೆಯರ ದಿವ್ಯ ವಿವಾಹ ಮಹೋತ್ಸವದಲ್ಲಿ (ತಿರುಕಲ್ಯಾಣಂ) ಬಳಸಲಾಗುವ ಅತ್ಯಂತ ಪವಿತ್ರ ತೆಂಗಿನಕಾಯಿಯಾಗಿದೆ. ಅಷ್ಟೇ ಅಲ್ಲದೆ, ವಿವಾಹದ ವೇಳೆ ಪವಿತ್ರ 'ತಿರುಮಾಂಗಲ್ಯ'ವನ್ನು (ಮಂಗಳಸೂತ್ರ) ಈ ತೆಂಗಿನಕಾಯಿಯ ಮೇಲಿಟ್ಟು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಕಾರಣಕ್ಕಾಗಿ ಭಕ್ತರು ಈ ತೆಂಗಿನಕಾಯಿಯನ್ನು ಸಾಕ್ಷಾತ್ ದೇವರ ಸ್ವರೂಪವೆಂದೇ ಭಕ್ತಿಯಿಂದ ಪರಿಗಣಿಸುತ್ತಾರೆ.

ಈ ಪವಿತ್ರ ತೆಂಗಿನಕಾಯಿಯನ್ನು ಮನೆಗೆ ಕೊಂಡೊಯ್ದು ದೇವರ ಕೋಣೆಯಲ್ಲಿಟ್ಟು ಪೂಜಿಸಿದರೆ ಸಕಲ ಶುಭಫಲಗಳು ಲಭಿಸುತ್ತವೆ ಎಂಬುದು ಭಕ್ತರ ಅಚಲ ನಂಬಿಕೆಯಾಗಿದೆ. ಇದರಿಂದ ಮನೆಯಲ್ಲಿ ಐಶ್ವರ್ಯ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ, ಅವಿವಾಹಿತರಿಗೆ ಸೂಕ್ತ ಜೀವನಸಂಗಾತಿ ದೊರೆಯುತ್ತಾರೆ ಹಾಗೂ ಸಂತಾನಹೀನ ದಂಪತಿಗಳಿಗೆ ಮಕ್ಕಳ ಭಾಗ್ಯ ಲಭಿಸುತ್ತದೆ ಎಂದು ಭಕ್ತರು ಬಲವಾಗಿ ನಂಬುತ್ತಾರೆ. ಇದೇ ಕಾರಣಕ್ಕೆ ಪ್ರತಿ ವರ್ಷವೂ ಈ ಒಂದೇ ಒಂದು ತೆಂಗಿನಕಾಯಿಯ ಹರಾಜು ಪ್ರಮುಖ ಆಕರ್ಷಣೆಯಾಗಿರುತ್ತದೆ. ಕಳೆದ ವರ್ಷ ಈ ತೆಂಗಿನಕಾಯಿ 2 ಲಕ್ಷ ರೂಪಾಯಿಗೆ ಮಾರಾಟವಾಗಿದ್ದರೆ, ಅದಕ್ಕೂ ಹಿಂದಿನ ವರ್ಷ ಬರೋಬ್ಬರಿ 3.03 ಲಕ್ಷ ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿತ್ತು.

ಇನ್ನು ಕಂದ ಷಷ್ಠಿ ಉತ್ಸವದ ವಿಶೇಷತೆಗೆ ಬರುವುದಾದರೆ, ರಾಕ್ಷಸ ರಾಜ ಸೂರಪದ್ಮನ (ಸೂರಪಮುನಿ) ವಿರುದ್ಧ ಭಗವಾನ್ ಮುರುಗನ್ ಸಾಧಿಸಿದ ವಿಜಯದ ಸ್ಮರಣಾರ್ಥವಾಗಿ ತಮಿಳುನಾಡಿನಾದ್ಯಂತ ಆರು ದಿನಗಳ ಕಾಲ 'ಕಂದ ಷಷ್ಠಿ' ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವೆಂಬರ್ 10ರಂದು ಆರಂಭವಾದ ಈ ಉತ್ಸವದ ಕೊನೆಯ ದಿನವಾದ ಸ್ಕಂದ ಷಷ್ಠಿಯಂದು, ಲಕ್ಷಾಂತರ ಭಕ್ತರು ಕಠಿಣ ಉಪವಾಸ ವ್ರತಗಳನ್ನು ಆಚರಿಸಿ, ಭಕ್ತಿಗೀತೆಗಳನ್ನು ಪಠಿಸುತ್ತಾ ದೇವರ ಶುಭ ದರ್ಶನವನ್ನು ಪಡೆಯುತ್ತಾರೆ.

ವಿಶೇಷವಾಗಿ ಸೂರಪದ್ಮನ ಸಂಹಾರ ನಡೆದ ಸ್ಥಳವಾದ ಸಮುದ್ರ ತೀರದ ತಿರುಚೆಂದೂರು ದೇವಸ್ಥಾನಕ್ಕೆ ಈ ಸಂದರ್ಭದಲ್ಲಿ ಭಕ್ತಸಾಗರವೇ ಹರಿದುಬರುತ್ತದೆ. ಆ ಪವಿತ್ರ ಕ್ಷಣದಲ್ಲಿ ಮುರುಗನ್ ಸ್ವಾಮಿಯ ದರ್ಶನ ಪಡೆದರೆ ಭಕ್ತಿಭಾವದಿಂದ ಕಣ್ಣುಗಳಲ್ಲಿ ಆನಂದಭಾಷ್ಪ ತಾನಾಗಿಯೇ ಹರಿಯುತ್ತದೆ ಎಂದು ಭಕ್ತರು ತಮ್ಮ ದೈವಿಕ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಭಕ್ತಿ ಮತ್ತು ನಂಬಿಕೆಯ ಮುಂದೆ ಬೆಲೆಗೆ ಯಾವುದೇ ಮಿತಿಯಿಲ್ಲ ಎಂಬುದಕ್ಕೆ ಈ 2.55 ಲಕ್ಷ ರೂಪಾಯಿಯ ತೆಂಗಿನಕಾಯಿ ಹರಾಜು ಸಾಕ್ಷಿಯಾಗಿದೆ, (ಏಜೆನ್ಸೀಸ್​).