Cockroach Janta Party | ಇಂಟರ್ನೆಟ್ ಜಗತ್ತಿನಲ್ಲಿ ಕಾಕ್ರೋಚ್ ಪಾರ್ಟಿ ಗ್ರಾಂಡ್ ಡೆಬ್ಯೂ! 
ದೇಶ

ಬಿಜೆಪಿಗೆ ಪರ್ಯಾಯವಾ ಈ ಸಿಜೆಪಿ..? ರಾಜಕೀಯ ರಂಗಕ್ಕೆ 'ಕಾಕ್ರೋಚ್ ಜನತಾ ಪಾರ್ಟಿ' ಎಂಟ್ರಿ; ಎರಡೇ ದಿನದಲ್ಲಿ ಇಬ್ಬರು ಟಿಎಂಸಿ ಹಾಲಿ ಸಂಸದರ ಸೇರ್ಪಡೆ! | Cockroach Janta Party

Cockroach Janta Party: ಸೆಕ್ಯುಲರ್, ಸೋಷಿಯಲಿಸ್ಟ್, ಡೆಮಾಕ್ರಟಿಕ್, ಲೇಜಿ (ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ, ಸೋಮಾರಿ) ಇದು ಭಾರತದ ರಾಜಕೀಯ ರಂಗಕ್ಕೆ ಹೊಸದಾಗಿ ಲಗ್ಗೆ ಇಟ್ಟಿರುವ, ಅಥವಾ ಒಂದು ತಮಾಷೆಯ ಗಿಮಿಕ್‌ನಂತೆ ಕಾಣಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಯ ಘೋಷವಾಕ್ಯ. ಈ ಪಕ್ಷವು ಸದ್ಯ ಆನ್‌ಲೈನ್‌ನಲ್ಲಿ ಭರ್ಜರಿ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ತನ್ನ ಘೋಷವಾಕ್ಯದ ಕೆಳಗೆ ಯುವಕರಿಗಾಗಿ, ಯುವಕರಿಂದಲೇ ರಚಿತವಾದ ಯುವಕರ ರಾಜಕೀಯ ರಂಗ ಎಂದು ಬರೆದುಕೊಂಡಿದೆ.
ಈ ಕಾಕ್ರೋಚ್ ಜನತಾ ಪಾರ್ಟಿ ಆರಂಭವಾಗಿ ಕೇವಲ ಎರಡೇ ದಿನಗಳಾಗಿದ್ದರೂ, ಈಗಾಗಲೇ ತನಗೆ 40,000 ಸದಸ್ಯರಿದ್ದಾರೆ ಎಂದು ಹೇಳಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಫಾಲೋವರ್ಸ್ ಪಡೆದಿರುವ ಈ ಪಕ್ಷಕ್ಕೆ ಸೇರಲು ಇಚ್ಛೆ ವ್ಯಕ್ತಪಡಿಸಿದ ಇಬ್ಬರು ತೃಣಮೂಲ ಕಾಂಗ್ರೆಸ್ (TMC) ಸಂಸದರನ್ನೂ ಇದು ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ.
ಪ್ರಸ್ತುತ ಆಡಳಿತ ವ್ಯವಸ್ಥೆಯಿಂದ ಬೇಸತ್ತವರಿಗಾಗಿ ಈ ಚಳವಳಿಯನ್ನು ರೂಪಿಸಲಾಗಿದೆ ಎಂದು ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹೇಳಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ (AAP) ಮಾಜಿ ಸೋಶಿಯಲ್ ಮೀಡಿಯಾ ಪ್ರಚಾರಕರಾಗಿದ್ದ ದಿಪ್ಕೆ ಆರಂಭಿಸಿರುವ ಈ ಪಕ್ಷದ ಪೋಸ್ಟ್‌ಗಳಿಗೆ ಸಾಮಾಜಿಕ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್, ಟಿಎಂಸಿ ಸಂಸದರಾದ ಮಹುವಾ ಮೋಯಿತ್ರಾ, ಕೀರ್ತಿ ಆಜಾದ್ ಮತ್ತು ಮಾಜಿ ಸರ್ಕಾರಿ ಅಧಿಕಾರಿ ಆಶಿಶ್ ಜೋಶಿ ಸೇರಿದಂತೆ ಹಲವು ಪ್ರಮುಖರು ಪ್ರತಿಕ್ರಿಯಿಸಿದ್ದಾರೆ.
ಟಿಎಂಸಿ ಸಂಸದ ಕೀರ್ತಿ ಆಜಾದ್ ಪಕ್ಷ ಸೇರಲು ಇರುವ ಅರ್ಹತೆಗಳೇನು ಎಂದು ಕೇಳಿದರೆ, ಕೃಷ್ಣನಗರ ಸಂಸದೆ ಮಹುವಾ ಮೋಯಿತ್ರಾ, ತಾವು ಈ ಪಕ್ಷಕ್ಕೆ ಸೇರಲು ಬಯಸುವುದಾಗಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಪಿ, ನೀವು ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಹೋರಾಟಗಾರ್ತಿ, ಪಕ್ಷಕ್ಕೆ ಸುಸ್ವಾಗತ ಎಂದು ಮಹುವಾರನ್ನು ಸ್ವಾಗತಿಸಿದೆ. ಹಾಗೆಯೇ ಕೀರ್ತಿ ಆಜಾದ್​ಗೆ 1983 ರ ವಿಶ್ವಕಪ್ ಗೆದ್ದಿರುವುದೇ ನಿಮ್ಮ ದೊಡ್ಡ ಅರ್ಹತೆ ಎಂದು ಹೇಳಿದೆ.
ಅಷ್ಟಕ್ಕೂ ಕಾಕ್ರೋಚ್ ಎಂಬ ಹೆಸರೇಕೆ..?
ಈ ವಿಲಕ್ಷಣ ಹೆಸರಿನ ಹಿಂದೆ ಒಂದು ದೊಡ್ಡ ವ್ಯಂಗ್ಯವಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಇತ್ತೀಚಿನ ಕೋರ್ಟ್ ವಿಚಾರಣೆಯೊಂದರಲ್ಲಿ, ಕೆಲಸವಿಲ್ಲದ ಯುವಕರು ಪತ್ರಿಕೋದ್ಯಮ, ಕಾನೂನು ಅಥವಾ ಆರ್‌ಟಿಐ ಹೋರಾಟಕ್ಕೆ ಇಳಿದು ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿರುವ ಜಿರಳೆಗಳು ಮತ್ತು ಪರಾವಲಂಬಿಗಳಂತಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದಾಗ, ಸಿಜೆಐ ಅವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದರ ಬೆನ್ನಲ್ಲೇ ಅಭಿಜೀತ್ ದಿಪ್ಕೆ, ಸಿಜೆಐ ಸ್ಪಷ್ಟನೆಯನ್ನು ಖಂಡಿಸಿ ಈ ಕಾಕ್ರೋಚ್ ಜನತಾ ಪಾರ್ಟಿ ಆರಂಭಿಸಿದ್ದಾರೆ. ಈಗಾಗಲೇ ಈ ಪಕ್ಷಕ್ಕೆ ಎಐ ತಂತ್ರಜ್ಞಾನ ಬಳಸಿ ಆಂಥೆಮ್ (ಪಕ್ಷದ ಗೀತೆ) ಕೂಡ ಸಿದ್ಧಪಡಿಸಲಾಗಿದೆ!

ಜೆನ್-ಜಿ ಸಮಾವೇಶಕ್ಕೆ ಸಿದ್ಧತೆ

ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಸಿಜೆಪಿ, ಶೀಘ್ರದಲ್ಲೇ ಯುವ ಪೀಳಿಗೆಗಾಗಿ ವರ್ಚುವಲ್ ಜೆನ್ ಜಿ ಸಮಾವೇಶ ಆಯೋಜಿಸಲು ಸಿದ್ಧತೆ ನಡೆಸಿದೆ. ಈ ಪಕ್ಷಕ್ಕೆ ಸೇರಲು ಇರಬೇಕಾದ ಅರ್ಹತೆಗಳೇನು ಗೊತ್ತಾ?. ನಿರುದ್ಯೋಗಿ, ಸೋಮಾರಿ, ಯಾವಾಗಲೂ ಆನ್‌ಲೈನ್‌ನಲ್ಲಿ ಇರುವವರು ಮತ್ತು ವೃತ್ತಿಪರವಾಗಿ ಆಕ್ರೋಶ ಹೊರಹಾಕುವ ಸಾಮರ್ಥ್ಯ ಇರುವವರು ಈ ಪಕ್ಷ ಸೇರಬಹುದು ಎಂದು ತಮಾಷೆಯಾಗಿ ಪೋಸ್ಟ್ ಮಾಡಲಾಗಿದೆ.
ಮೊಬೈಲ್ ಫೋನ್ ತನ್ನ ಚುನಾವಣಾ ಚಿಹ್ನೆ ಎಂದು ಘೋಷಿಸಿಕೊಂಡಿರುವ ಈ ಪಕ್ಷ, ಪ್ರತಿ ಮೊಬೈಲ್‌ನಲ್ಲೂ ಧೈರ್ಯದ ಧ್ವನಿಯಿದೆ, ಪ್ರತಿ ಪೋಸ್ಟ್ ಕೂಡ ಒಂದು ಪ್ರತಿಭಟನೆ, ಕ್ರಾಂತಿ ನಿಮ್ಮ ಸ್ಕ್ರೀನ್‌ನಿಂದಲೇ ಆರಂಭವಾಗುತ್ತದೆ ಎಂದು ಹೇಳಿದೆ.

ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಧ್ವನಿ

ಕೇವಲ ವ್ಯಂಗ್ಯ ಅಷ್ಟೇ ಅಲ್ಲದೆ, ಗಂಭೀರ ವಿಷಯಗಳ ಮೇಲೂ ಈ ಪಕ್ಷ ಧ್ವನಿ ಎತ್ತಿದೆ. ನೀಟ್ (NEET) ಮತ್ತು ಸಿಬಿಎಸ್‌ಇ (CBSE) ಪರೀಕ್ಷಾ ಅಕ್ರಮಗಳಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳ ಪರವಾಗಿ ನಿಲ್ಲುವುದಾಗಿ ಸಿಜೆಪಿ ಹೇಳಿದೆ. ಸಿಬಿಎಸ್‌ಇ ಮರುಪರಿಶೀಲನಾ ಶುಲ್ಕವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದು, ಮಂಡಳಿಯ ತಪ್ಪುಗಳಿಗೆ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುವುದು ಭ್ರಷ್ಟಾಚಾರ ಎಂದು ಕರೆದಿದೆ.
ಪಕ್ಷದ ಐದು ಮುಖ್ಯ ಬೇಡಿಕೆಗಳು
  1. ಯಾವುದೇ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ರಾಜ್ಯಸಭಾ ಸ್ಥಾನವನ್ನು ಉಡುಗೊರೆಯಾಗಿ ನೀಡಬಾರದು.
  2.  ಅರ್ಹ ಮತದಾರರ ವೋಟು ಡಿಲೀಟ್ ಆದಲ್ಲಿ, ಮುಖ್ಯ ಚುನಾವಣಾ ಆಯುಕ್ತರನ್ನು ಯುಎಪಿಎ (UAPA) ಕಾಯ್ದೆಯಡಿ ಬಂಧಿಸಬೇಕು. ಮತದಾನದ ಹಕ್ಕು ಕಡಿಯುವುದು ಭಯೋತ್ಪಾದನೆಗೆ ಸಮ. 
  3.  ಸಂಸತ್ತು ಮತ್ತು ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಬೇಕು. 
  4.  ಮಾಧ್ಯಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು. 
  5.  ಪಕ್ಷಾಂತರ ಮಾಡುವ ಯಾವುದೇ ಶಾಸಕ ಅಥವಾ ಸಂಸದರ ಮೇಲೆ 20 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು.
ಸಾಮಾಜಿಕ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಈ ಪಕ್ಷವು ಆರ್‌ಟಿಐ (RTI) ವ್ಯಾಪ್ತಿಗೆ ಬರಬೇಕು ಮತ್ತು ಯಾವುದೇ ರಹಸ್ಯ ದೇಣಿಗೆಗಳನ್ನು ಪಡೆಯಬಾರದು ಎಂದು ಸಲಹೆ ನೀಡಿದ್ದು, ಪಕ್ಷ ಆ ಎಲ್ಲಾ ಸಲಹೆಗಳನ್ನು ಒಪ್ಪಿಕೊಂಡಿದೆ.
ಈ ಕಾಕ್ರೋಚ್ ಜನತಾ ಪಾರ್ಟಿ ಅಧಿಕೃತವಾಗಿ ನೋಂದಣಿಯಾಗುತ್ತದೆಯೇ ಅಥವಾ ಇದು ಕೇವಲ ಇಂಟರ್ನೆಟ್‌ನ ಮೀಮ್ಸ್ ಆಧಾರಿತ ರಾಜಕೀಯ ಪ್ರಯೋಗವಾಗಿ ಉಳಿಯುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸದ್ಯದ ಬಿಸಿಬಿಸಿ ರಾಜಕೀಯ ವಾತಾವರಣದ ನಡುವೆ ಈ ಪಕ್ಷದ ವಿಲಕ್ಷಣ ಸದ್ದು ಮಾತ್ರ ನೆಟ್ಟಿಗರಿಗೆ ಭರ್ಜರಿ ಮನರಂಜನೆ ನೀಡುತ್ತಿದೆ(ಏಜೆನ್ಸೀಸ್​​).