ಹಾವಿನ ವಿಷ 
ದೇಶ

ಬರೋಬ್ಬರಿ 5.2 ಕೋಟಿ ರೂ. ಮೌಲ್ಯದ ಹಾವಿನ ವಿಷ ವಶಕ್ಕೆ: ಏನಿದು ಸೈಕೋಟ್ರೋಪಿಕ್ ದಂಧೆ? ನಿಜಕ್ಕೂ ಶಾಕಿಂಗ್​! Cobra venom

ಪುಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಕೋಟಿ ಕೋಟಿ ಮೌಲ್ಯದ ಅಪರೂಪದ ಹಾವಿನ ವಿಷದ ( Cobra venom ) ಅಕ್ರಮ ಸಾಗಾಟ ಮತ್ತು ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ಭಾರಿ ಪ್ರಮಾಣದ ವಿಷವನ್ನು ವಶಪಡಿಸಿಕೊಂಡಿದ್ದಾರೆ.

ಸುಮಾರು 5.2 ಕೋಟಿ ರೂಪಾಯಿ ಮೌಲ್ಯದ 500 ಮಿಲಿಗ್ರಾಂಗಳಿಗಿಂತಲೂ ಹೆಚ್ಚು ನಾಗರಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರ ತೀವ್ರ ಕಾರ್ಯಾಚರಣೆಯಿಂದಾಗಿ ಬೃಹತ್ ಸೈಕೋಟ್ರೋಪಿಕ್ ದಂಧೆಯೊಂದರ ಸುಳಿವು ಲಭ್ಯವಾಗಿದೆ.

ಥಾಣೆ ಜಿಲ್ಲೆಯ ಕಾಶಿಗಾಂವ್ ಪ್ರದೇಶದ ಡೋಡಿಯಾ ಪೆಟ್ರೋಲ್ ಪಂಪ್ ಬಳಿ ಈ ಬಂಧನ ಕಾರ್ಯಾಚರಣೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೊಹಮ್ಮದ್ ಡ್ಯಾನಿಶ್ ಫಯ್ಯೀಮ್ ಖಾನ್ (23), ಅಬ್ದುಲ್ ಕರೀಮ್ ರಶೀದ್ ಅಹಮದ್ ಶೇಖ್ (51), ಫೈಸಲ್ ಅಬ್ದುಲ್ ಅಜೀಜ್ (30), ಫಾರೂಕ್ ಅಲಿ ಅಬ್ದುಲ್ ಅಲಿ (37) ಹಾಗೂ ನೂರ್ ಮೊಹಮ್ಮದ್ ವಲಿ ಮೊಹಮ್ಮದ್ ಶೇಖ್ (47) ಎಂಬ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಬಳಿ ಇದ್ದ ತಪಾಸಣೆ ನಡೆಸಿದಾಗ 250 ಮಿಲಿಗ್ರಾಂ ಮತ್ತು 260 ಮಿಲಿಗ್ರಾಂ ಕೊಬ್ರಾ ವಿಷವಿದ್ದ ಎರಡು ಸಣ್ಣ ಬಾಟಲಿಗಳು ಪತ್ತೆಯಾಗಿವೆ.

ರಕ್ಷಿಸಲಾದ ಹಾವಿನ ವಿಷದ ಅಂತಾರಾಷ್ಟ್ರೀಯ ಮೌಲ್ಯ 5.2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಾಶಿಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಈ ವಿಷವನ್ನು ಎಲ್ಲಿಂದ ತಂದಿದ್ದರು ಮತ್ತು ಇದನ್ನು ಯಾರಿಗೆ ತಲುಪಿಸಲು ಯೋಜಿಸಿದ್ದರು ಎಂಬ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ಮಾದಕ ದ್ರವ್ಯಗಳ ತಯಾರಿಕೆ ಹಾಗೂ ಪಾರ್ಟಿಗಳಿಗೆ ಈ ವಿಷವನ್ನು ದುರ್ಬಳಕೆ ಮಾಡಿಕೊಳ್ಳುವ ಜಾಲದ ಲಿಂಕ್ ಇದೆಯೇ ಎಂಬ ಕೋನದಲ್ಲೂ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.

ಏನಿದು ಸೈಕೋಟ್ರೋಪಿಕ್ ದಂಧೆ?

ಸೈಕೋಟ್ರೋಪಿಕ್ ದಂಧೆ (Psychotropic Racket) ಎಂದರೆ ಮನುಷ್ಯನ ನರಮಂಡಲ ಮತ್ತು ಮೆದುಳಿನ ಕಾರ್ಯಚಟುವಟಿಕೆಯ ಮೇಲೆ ತೀವ್ರ ಪರಿಣಾಮ ಬೀರುವ, ಮನಃಸ್ಥಿತಿ ಹಾಗೂ ಆಲೋಚನೆಗಳನ್ನು ಬದಲಾಯಿಸುವ ಮಾದಕ ವಸ್ತುಗಳು, ಪ್ರಬಲ ರಾಸಾಯನಿಕ ಮದ್ದುಗಳು ಅಥವಾ ವಿಷಕಾರಿ ದ್ರವ್ಯಗಳನ್ನು (ಉದಾಹರಣೆಗೆ ಹಾವಿನ ವಿಷ) ಅಕ್ರಮವಾಗಿ ಉತ್ಪಾದಿಸುವುದು, ಸಾಗಿಸುವುದು, ಸರಬರಾಜು ಮಾಡುವುದು ಮತ್ತು ಮಾರಾಟ ಮಾಡುವ ಜಾಲವಾಗಿದೆ. ಶಮನಕಾರಿ ಔಷಧಿಗಳಾಗಿ ಬಳಕೆಯಾಗಬೇಕಾದ ಕೆಲವು ವಸ್ತುಗಳನ್ನು ರೆವ್ ಪಾರ್ಟಿಗಳಲ್ಲಿ ಹಾಗೂ ಮಾದಕ ವ್ಯಸನಿಗಳಿಗೆ ದುಬಾರಿ ಬೆಲೆಗೆ ಕದ್ದು ಮುಚ್ಚಿ ಮಾರಾಟ ಮಾಡುವ ಕಪ್ಪು ಮಾರುಕಟ್ಟೆ ಜಾಲವೇ ಈ ಸೈಕೋಟ್ರೋಪಿಕ್ ದಂಧೆಯಾಗಿದೆ, (ಏಜೆನ್ಸೀಸ್​).