ಸಿಎಂ ಯೋಗಿ ಮತ್ತು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ 
ದೇಶ

ಸಿಎಂ ಯೋಗಿ v/s ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ ವಾಗ್ವಾದ; ಇಬ್ಬರು ಅಧಿಕಾರಿಗಳು ರಾಜೀನಾಮೆ | officials resign

ಲಖನೌ: ಉತ್ತರ ಪ್ರದೇಶದ ಯಾಗ್‌ರಾಜ್‌ನಲ್ಲಿ ಮಾಘ ಮೇಳದಲ್ಲಿ ನಡೆದ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ v/s ಸಿಎಂ ಯೋಗಿ ಆದಿತ್ಯನಾಥ್ ಅವರ ನಡುವಿನ ವಾಗ್ವಾದ ಮುಂದುವರೆದಿದ್ದು, ಯುಪಿ ಸರ್ಕಾರದ ಇಬ್ಬರು ಅಧಿಕಾರಿಗಳು ರಾಜೀನಾಮೆ ನೀಡುವ ಮಟ್ಟಕ್ಕೆ ಬಂದು ನಿಂತಿದೆ. 
ಜ. 18ರಂದು ಪ್ರಯಾಗ್‌ರಾಜ್ ಆಡಳಿತವು ಶ್ರೀಗಳಿಗೆ ಅಗೌರವ ತೋರಿದ ವರ್ತನೆಯನ್ನು ವಿರೋಧಿಸಿ ಬರೇಲಿ ನಗರ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ ಸೋಮವಾರ ರಾಜೀನಾಮೆ ನೀಡಿದ್ದು, ಇಂದು(ಜ. 27) ಸಿಎಂ ಯೋಗಿ ಆದಿತ್ಯನಾಥ್ ಬೆಂಬಲಿಸಿ,  ಅಯೋಧ್ಯೆಯ ಜಿಎಸ್‌ಟಿ ಉಪ ಆಯುಕ್ತ ಪ್ರಶಾಂತ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ, ಜಿಎಸ್​ಟಿ ಆಯುಕ್ತ ಪ್ರಶಾಂತ್ ಸಿಂಗ್, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮಾಡಿರುವ ಆರೋಪಗಳನ್ನು ವಿರೋಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬೆಂಬಲಿಸಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದೇನೆ. ಕಳದೆ ಮೂರು ದಿನಗಳಿಂದ ನಡೆದ ಬೆಳವಣಿಗೆಯಿಂದ ತಮಗೆ ನೋವಾಗಿದೆ ಎಂದು ಹೇಳಿದ್ದಾರೆ.
ಸಿಎಂಗೆ ಆದ ಅವಮಾನವನ್ನು ನಾನು ಇನ್ಮುಂದೆ ಸಹಿಸಲಾರೆ, ರಾಜ್ಯ ಸರ್ಕಾರದ ನಿಷ್ಠಾವಂತ ಉದ್ಯೋಗಿ ನಾನು. ನನ್ನ ಕುಟುಂಬವು ರಾಜ್ಯದ ಸಂಬಳದ ಮೇಲೆ ನಡೆಯುತ್ತದೆ. ರಾಜ್ಯದ ಮುಖ್ಯಸ್ಥರ ವಿರುದ್ಧ ಅಸಂಸದೀಯ ಪದಗಳನ್ನು ಬಳಸಿದರೆ, ನನಗೆ ನೋವಾಗುತ್ತದೆ. ನನಗೂ ಹೃದಯ ಮತ್ತು ಸೂಕ್ಷ್ಮತೆ ಇದೆ. ಕಳೆದ ಎರಡು ರಾತ್ರಿಗಳಿಂದ ನಾನು ನಿದ್ದೆ ಮಾಡಿಲ್ಲ. ಈ ನೋವನ್ನು ಇನ್ನು ಸಹಿಸಲು ಸಾಧ್ಯವಾಗದ ಕಾರಣ, ನಾನು ನನ್ನ ರಾಜೀನಾಮೆಯನ್ನು ಯುಪಿ ಉದ್ಯೋಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಾಜ್ಯಪಾಲರಿಗೆ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನೂ ಸೋಮವಾರ ರಾಜೀನಾಮೆ ನೀಡಿರುವ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ, ಕೇಂದ್ರ ಜಾರಿಗೆ ತಂದಿರುವ ಯುಜಿಸಿಯ ಹೊಸ ಕಾನೂನು ನಿಯಮಗಳು ಮತ್ತು ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮತ್ತು ಶಿಷ್ಯರನ್ನು ಮಾಘ ಮೇಳದಲ್ಲಿ ನಡೆಸಿಕೊಂಡ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ. ಇನ್ನೂ ಬಹಿರಂಗವಾಗಿ ಸರ್ಕಾರದ ನೀತಿಗಳನ್ನು ಟೀಕಿಸಿದ ಹಿನ್ನೆಲೆ ಯುಪಿ ಸರ್ಕಾರ ಅವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶ ನೀಡಿದೆ.
ಅಯೋಧ್ಯೆಯ ಜಿಎಸ್​ಟಿ ಆಯುಕ್ತರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ, ಇದು ಉನ್ನತ ಅಧಿಕಾರಿಗಳು ನಿರ್ವಹಿಸುವ ನಾಟಕ ವೇದಿಕೆ. ಇತ್ತೀಚಿನ ದಿನಗಳಲ್ಲಿ ಅಯೋಧ್ಯೆ ಯುಪಿ ಸರ್ಕಾರದ ನೆಚ್ಚಿನ ಸ್ಥಳವಾಗಿದೆ. ಭಕ್ತರ ಭಾವನೆಯನ್ನು ವಿರೋಧಿಸಿ ಸಿಎಂ ಮೇಲಿನ ನಿಷ್ಠೆಗೆ ಆ ಅಧಿಕಾರಿಗೆ ಅಯೋಧ್ಯೆಯಲ್ಲಿ ಹುದ್ದೆ ಸಿಕ್ಕಿರಬಹುದು ಎಂದಿದ್ದಾರೆ. 
ಜ. 18ರಂದು ಮಾಘ ಮೇಳದಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಪ್ರಯಾಗ್​ರಾಜ್ ಜಿಲ್ಲಾಡಳಿತ ಮತ್ತು ಪೊಲೀಸರು ಅವಿಮುಕ್ತೇಶ್ವರಾನಂದ ಅವರ ಪಲ್ಲಕ್ಕಿಯನ್ನು ತಡೆದರು. ಇದು ಪ್ರತಿಭಟನೆಗೆ ಕಾರಣವಾಗಿ ಈ ವೇಳೆ ಪೊಲೀಸರು ಮತ್ತು ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅವರ ಶಿಷ್ಯರ ನಡುವೆ ನಡೆದು ವಾಗ್ವಾದ ನಡೆದು ಲಾಠಿ ಚಾರ್ಜ್​ ನಡೆಯಿತು. ಆ ದೌರ್ಜ್ಯನ್ಯವನ್ನು ಖಂಡಿಸಿ ಸ್ವಾಮೀಜಿಗಳು ಪ್ರತಿಭಟನೆ ನಡೆಸಿದ್ದರು (ಏಜೆನ್ಸೀಸ್).