ದೇಶ

ಹ್ಯಾಟ್ರಿಕ್ ಗೆಲುವಿಗಾಗಿ ಸಿಎಂ ಯೋಗಿ ಭರ್ಜರಿ ಸಿದ್ಧತೆ: ಉನ್ನತ ಮಟ್ಟದ ಸಭೆಯಲ್ಲಿ ಬಿಜೆಪಿ ನಾಯಕರಿಗೆ ನೀಡಿದ ಗುರಿ ಹೀಗಿದೆ! | BJP High Level Meeting

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ಗುರಿ ಇಟ್ಟುಕೊಂಡಿರುವ ಆಡಳಿತರೂಢ ಬಿಜೆಪಿ, ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭಿಸಿದೆ. ಶುಕ್ರವಾರ ರಾಜ್ಯ ರಾಜಧಾನಿ ಲಖನೌದಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಉನ್ನತ ಮಟ್ಟದ ಸಭೆ (BJP High Level Meeting) ನಡೆಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಚುನಾವಣೆಯಲ್ಲಿ ಮಹಿಳಾ ಮತ್ತು ಯುವ ಮತದಾರರ ಮೇಲೆ ವಿಶೇಷ ಗಮನ ಹರಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಪಂಕಜ್ ಚೌಧರಿ ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಕಾರ್ಯಕರ್ತರು ಒಗ್ಗಟ್ಟಿನಿಂದ ಮತ್ತು ಪರಸ್ಪರ ಸಮನ್ವಯದಿಂದ ಮತದಾರರನ್ನು ತಲುಪಬೇಕು ಎಂದು ಯೋಗಿ ಆದಿತ್ಯನಾಥ್ ಒತ್ತಿ ಹೇಳಿದರು. ಇದೇ ವೇಳೆ, ಉದ್ಯೋಗ ಅಥವಾ ಇತರ ಕಾರಣಗಳಿಗಾಗಿ ಉತ್ತರ ಪ್ರದೇಶದಿಂದ ಹೊರಗೆ ನೆಲೆಸಿರುವ ರಾಜ್ಯದ ಮೂಲ ನಿವಾಸಿಗಳು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಪ್ಪದೇ ರಾಜ್ಯಕ್ಕೆ ಮರಳಿ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಕಾರ್ಯಕರ್ತರಿಗೆ ನಿರ್ದೇಶನ ನೀಡಿದರು.

ಅಲ್ಲದೆ, ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಹಿಂದೂ ಮತದಾರರು ಮಿಸ್​: ಯೋಗಿ ಆರೋಪ

ಮತದಾರರ ಪಟ್ಟಿ ಪರಿಷ್ಕರಣೆ (ಎಸ್​ಐಆರ್​) ಅಭಿಯಾನದ ನಂತರ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂದು ಯೋಗಿ ಆದಿತ್ಯನಾಥ್ ಇತ್ತೀಚೆಗೆ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಈ ಉನ್ನತ ಮಟ್ಟದ ಸಭೆ ನಡೆದಿದೆ. ರಾಜ್ಯದಲ್ಲಿ ಮುಸ್ಲಿಂ ಮತದಾರರ ಜನಸಂಖ್ಯೆ ಶೇಕಡಾ 1.63ರಷ್ಟು ಹೆಚ್ಚಾಗಿದೆ ಎಂದು ಪ್ರತಿಪಾದಿಸಿದ್ದ ಮುಖ್ಯಮಂತ್ರಿಗಳು, ಈ ಗಂಭೀರ ವಿಷಯವನ್ನು ಕೇಂದ್ರ ಚುನಾವಣಾ ಆಯೋಗದ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

ಆದರೆ, ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಯು ಉತ್ತರ ಪ್ರದೇಶದ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಅಖಿಲೇಶ್ ಯಾದವ್ ವಾಗ್ದಾಳಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಮತದಾರರ ಪಟ್ಟಿಯಿಂದ 1.27 ಕೋಟಿ ಮತದಾರರನ್ನು ಕೈಬಿಡಲಾಗಿದೆ ಎಂಬ ಮಾಹಿತಿ ಮುಖ್ಯಮಂತ್ರಿಗಳಿಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗವು ಪರಸ್ಪರ ಶಾಮೀಲಾಗಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಲಖನೌದಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಯೋಗಿ ಆದಿತ್ಯನಾಥ್ ಹೇಳಿಕೆಯು ಜನರಲ್ಲಿ ಭಯ ಹುಟ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಟೀಕಿಸಿದರು. ಮತದಾನದ ದಿನದಂದು ಮತದಾನದ ಪ್ರಮಾಣ ಮತ್ತು ಪ್ರಕ್ರಿಯೆಯನ್ನು ತಿರುಚಲು ರೂಪಿಸಿರುವ ಅತ್ಯಂತ ವ್ಯವಸ್ಥಿತ ಪಿತೂರಿ ಇದಾಗಿದೆ ಎಂದು ಅವರು ದೂರಿದರು. ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಇತರ ರಾಜ್ಯಗಳಿಂದ ಜನರನ್ನು ಕರೆತಂದು ಉತ್ತರ ಪ್ರದೇಶದಲ್ಲಿ ಮತದಾರರನ್ನಾಗಿ ನೋಂದಾಯಿಸಲು ಬಿಜೆಪಿ ಈಗ ಯೋಜನೆ ರೂಪಿಸುತ್ತಿದೆ ಎಂದು ಎಸ್​ಪಿ ನಾಯಕ ಆರೋಪಿಸಿದರು.

ಮತದಾನದ ದಿನದಂದು ನಡೆಯಬಹುದಾದ ಅಕ್ರಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಮತಗಟ್ಟೆಯ ಹೊರಗೆ ಇರುವ ಮತದಾರರ ಪಟ್ಟಿಗಿಂತ ಮತಗಟ್ಟೆಯ ಒಳಗೆ ಲಭ್ಯವಿರುವ ಅಂತಿಮ ಪಟ್ಟಿ ಭಿನ್ನವಾಗಿರುವಂತೆ ನೋಡಿಕೊಳ್ಳಲು ಅವರು ಸಂಚು ರೂಪಿಸಿದ್ದಾರೆ. ಮತದಾರರು ತಮ್ಮ ಹಕ್ಕು ಚಲಾಯಿಸಲು ಬಂದಾಗ, ಪಟ್ಟಿಯಲ್ಲಿ ಅವರ ಹೆಸರು ಇಲ್ಲ ಎಂಬ ನೆಪವೊಡ್ಡಿ ಅವರನ್ನು ವಾಪಸ್ ಕಳುಹಿಸುವ ಹುನ್ನಾರ ನಡೆದಿದೆ ಎಂದು ಹೇಳಿದರು. ಯಾವುದೇ ಒಬ್ಬ ಅರ್ಹ ಮತದಾರನೂ ತನ್ನ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ನೋಡಿಕೊಳ್ಳಲು ಪ್ರತಿ ಮತಗಟ್ಟೆಯಲ್ಲೂ ಬಿಗಿಯಾದ ವ್ಯವಸ್ಥೆಗಳನ್ನು ಮಾಡಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದರು.

ಒಟ್ಟಿನಲ್ಲಿ, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಸಮಾಜವಾದಿ ಪಕ್ಷದ ನಡುವೆ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ರಾಜಕೀಯ ಸಮರ ತಾರಕಕ್ಕೇರಿದೆ(ಏಜೆನ್ಸೀಸ್​).