Omar Abdullah | ಪ್ರಧಾನಿ ಮೋದಿ-ಷಾ ಅವರಿಂದ ಮಾತ್ರವೇ ಇದು ಸಾಧ್ಯ: ಜಮ್ಮು-ಕಾಶ್ಮೀರ ರಾಜ್ಯದ ಸ್ಥಾನಮಾನದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸಿಎಂ ಅಬ್ದುಲ್ಲಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು (Statehood) ಮರುಸ್ಥಾಪಿಸುವ ನಿರ್ಧಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಮಾತ್ರ ತೆಗೆದುಕೊಳ್ಳಲು ಸಾಧ್ಯ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಚ್ಚರಿಯ ಹೇಳಿಕೆ ನೀಡಿದ್ದು, ಈ ವಿಷಯವಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಅರ್ಹತೆಯಾಗಲಿ ಅಥವಾ 370 ವಿಧಿ ಆಗಲಿ ಮರಳಿ ಸಿಗುವುದಿಲ್ಲ ಎಂದು ಅಲ್ಲಿನ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ನೀಡಿದ್ದರೆನ್ನಲಾದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಸಿಎಂ ಅಬ್ದುಲ್ಲಾ ಈ ಹೇಳಿಕೆಯನ್ನು ನೀಡಿದ್ದಾರೆ.
ಶರ್ಮಾ ಅವರ ಹೇಳಿಕೆಯನ್ನು ತಳ್ಳಿಹಾಕಿದ ಅಬ್ದುಲ್ಲಾ, ಅವರು ಪ್ರತಿದಿನ 10 ಹೇಳಿಕೆಗಳನ್ನು ನೀಡುತ್ತಾರೆ. ನನ್ನ ಬಳಿ ಅಷ್ಟೊಂದು ಸಮಯವಿಲ್ಲ. ರಾಜ್ಯದ ಸ್ಥಾನಮಾನದ ವಿಷಯದ ಕುರಿತು ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಶರ್ಮಾ ಸಲಹೆ ಕೇಳುತ್ತಾರೆ ಎಂದು ನನಗನ್ನಿಸುವುದಿಲ್ಲ ಎಂದು ವ್ಯಂಗ್ಯವಾಡಿದರು. ಅಷ್ಟೇ ಅಲ್ಲದೆ, ಒಂದಲ್ಲ ಒಂದು ದಿನ ಶರ್ಮಾ ಬೆಳಿಗ್ಗೆ ಎದ್ದು ದಿನಪತ್ರಿಕೆಯಲ್ಲಿ ರಾಜ್ಯದ ಸ್ಥಾನಮಾನ ಮರುಸ್ಥಾಪನೆಯಾಗಿರುವ ಸುದ್ದಿಯನ್ನು ಓದುತ್ತಾರೆ ಎಂದು ಹೇಳಿದರು.
ಕೆಲವರು ಮನೆಯಲ್ಲಿದ್ದು ಟ್ವೀಟ್ ಮಾಡ್ತಿದ್ದಾರೆ ಎಂದಿದ್ದ ಸಿಎಂ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದರಲ್ಲಿ ಅಬ್ದುಲ್ಲಾ ತಂದೆ ,ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮುಂಚೂಣಿಯಲ್ಲಿ ನಿಂತು ನಾಯಕತ್ವ ವಹಿಸಿದ್ದರು. ಈ ವಿಷಯವಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಒಮರ್ ಅಬ್ದುಲ್ಲಾ, ರಾಜ್ಯದ ಹಕ್ಕುಗಳು ಮತ್ತು ಗೌರವಕ್ಕಾಗಿ 90 ವರ್ಷದ ವೃದ್ಧರೊಬ್ಬರು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದರೆ, ಇನ್ನು ಕೆಲವರು ಮನೆಯಲ್ಲಿ ಕುಳಿತು ಟ್ವೀಟ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದರು.
ಆಟೋ ಏರಿದ್ದ ಒಮರ್ ಅಬ್ದುಲ್ಲಾ
ಜಂತರ್ ಮಂತರ್‌ನಿಂದ ತಾವು ಕೈಗೊಂಡ ಸರಳ ಪಾದಯಾತ್ರೆಯು ದೊಡ್ಡ ಮೆರವಣಿಗೆಯಾಗಿ ಬದಲಾಗುವ ಲಕ್ಷಣಗಳು ಕಂಡುಬಂದವು ಎಂದು ಸಿಎಂ ಅಬ್ದುಲ್ಲಾ ಹೇಳಿದ್ದರು. ಕಾಕ್ರೋಚ್ ಜನತಾ ಪಾರ್ಟಿ ಮತ್ತು ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಯುವ ಕಾರ್ಯಕರ್ತರು ತಮ್ಮೊಂದಿಗೆ ಸೇರಿಕೊಂಡಿದ್ದರಿಂದ ಇದು ಮತ್ತೊಂದು ದೊಡ್ಡ ಮೆರವಣಿಗೆಯಾಗಿ ಮಾರ್ಪಡುವ ಭೀತಿ ಇತ್ತು. ಸಿಕ್ಕ ಆಟೋರಿಕ್ಷಾವನ್ನು ಏರಿ ತೆರಳಿದ್ದಾಗಿ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಹಾಗೂ ಸಾಂವಿಧಾನಿಕ ಹಕ್ಕುಗಳ ಮರುಸ್ಥಾಪನೆಗಾಗಿ ಈ ಚಳವಳಿ ಈಗಷ್ಟೇ ಪ್ರಾರಂಭವಾಗಿದೆ ಎಂದಿದ್ದ ಅಬ್ದುಲ್ಲಾ, ಪ್ರತಿಭಟನೆಯ ವೇಳೆ ಎದುರಾದ ಅಡೆತಡೆಗಳ ಕುರಿತು ಉಲ್ಲೇಖಿಸುತ್ತಾ, ಪಕ್ಷದ ನಾಯಕರನ್ನು ಪ್ರತಿಭಟನಾ ಸ್ಥಳ ತಲುಪದಂತೆ ತಡೆಯಲಾಗಿತ್ತು ಎಂದು ದೂರಿದ್ದರು. ನಮ್ಮ ಹಕ್ಕಿಗಾಗಿ ಶಾಂತಿಯುತವಾಗಿ ಪ್ರತಿಭಟಿಸಲು ಜಂತರ್ ಮಂತರ್‌ಗೆ ತೆರಳದಂತೆ ನಮ್ಮನ್ನು ತಡೆಯಲಾಯಿತು. ಆದರೆ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಾಗಿಲ್ಲ. ರಾಜ್ಯದ ದರ್ಜೆ, ನಮ್ಮ ಹಕ್ಕುಗಳು, ನಮ್ಮ ಗೌರವ ಮತ್ತು ನಮ್ಮಿಂದ ಕಸಿದುಕೊಳ್ಳಲಾದ ಪ್ರತಿಯೊಂದನ್ನೂ ಮರಳಿ ಪಡೆಯಲು ನಡೆಯುತ್ತಿರುವ ಈ ಹೋರಾಟಕ್ಕೆ ಇದು ಆರಂಭವಷ್ಟೇ ಎಂದು ಅವರು ತಿಳಿಸಿದ್ದರು(ಏಜೆನ್ಸೀಸ್).