ಆರ್‌ಎಲ್‌ಡಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಯಂತ್ ಚೌಧರಿ ಮತ್ತು ಕೆ.ಸಿ.ತ್ಯಾಗಿ
ನವದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ದೀರ್ಘಕಾಲದ ಆಪ್ತರಾಗಿದ್ದ ಮತ್ತು ಮಾಜಿ ರಾಜ್ಯಸಭೆ ಸದಸ್ಯ ಕೆ.ಸಿ.ತ್ಯಾಗಿ(K C Tyagi) ಇಂದು(ಮಾ. 22) ಜೆಡಿಯು ಬಿಟ್ಟು ಕೇಂದ್ರ ಸಚಿವ ಜಯಂತ್ ಚೌಧರಿ ನೇತೃತ್ವದ ಆರ್‌ಎಲ್‌ಡಿ ಸೇರ್ಪಡೆಯಾಗಿದ್ದಾರೆ.
2003ರಲ್ಲಿ ಸಮತಾ ಪಕ್ಷ ಮತ್ತು ಜನತಾ ದಳ ವಿಲೀನಗೊಂಡ ಬಳಿಕ ಜೆಡಿಯುನಲ್ಲಿ ಪ್ರಮುಖ ನಾಯಕರಾಗಿದ್ದ ಕೆ.ಸಿ.ತ್ಯಾಗಿ, ಮಾ. 17ರಂದು ಯಾವುದೇ ಕಾರಣ ನೀಡದೇ ಜೆಡಿಯುಗೆ ರಾಜೀನಾಮೆ ನೀಡಿದ್ದರು. ಇಂದು ಆರ್‌ಎಲ್‌ಡಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜಯಂತ್ ಚೌಧರಿ ಅವರ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ.
ಗಾಜಿಯಾಬಾದ್ ಮೂಲದ ಕಿಶನ್ ಚಂದ್ ತ್ಯಾಗಿ 1970ರಿಂದ ಸಕ್ರಿಯ ರಾಜಕೀಯದಲ್ಲಿದ್ದಾರೆ. 1989ರಲ್ಲಿ ಉತ್ತರ ಪ್ರದೇಶದ ಹಾಪುರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅಂದಿನಿಂದ, ಅವರು ವಿವಿಧ ಪಕ್ಷಗಳಲ್ಲಿ ಮತ್ತು ದೀರ್ಘಕಾಲದಿಂದ ಜೆಡಿಯುನಲ್ಲಿ ಪಕ್ಷದ ವಕ್ತಾರ ಮತ್ತು ರಾಜಕೀಯ ಸಲಹೆಗಾರ ಸೇರಿದಂತೆ ಪ್ರಮುಖ ಸಂಘಟನಾ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿರುವ ಕೆ.ಸಿ.ತ್ಯಾಗಿ, ಆರ್‌ಎಲ್‌ಡಿ ಮತ್ತು ಜೆಡಿ(ಯು) ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಪಕ್ಷಗಳಿಗೆ ಮಾರ್ಗದರ್ಶಕ ವ್ಯಕ್ತಿಗಳಾಗಿರುವವರು ಒಂದೇ. ಚೌಧರಿ ಚರಣ್ ಸಿಂಗ್, ಡಾ. ಲೋಹಿಯಾ ಮತ್ತು ಕರ್ಪೂರಿ ಠಾಕೂರ್. ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ ರಚನೆಯಾಗುವಂತೆ ಲೋಕದಳವನ್ನು ಬಲಪಡಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).