ಸಿಎಂ ಎಂ.ಕೆ.ಸ್ಟಾಲಿನ್ ಪೊಂಗಲ್ ಆಚರಣೆ
ಚೆನ್ನೈ: ತಮಿಳುನಾಡಿನಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ನಡುವೆ ಪೊಂಗಲ್ ಹಬ್ಬವನ್ನು ಸಿಎಂ ಎಂ.ಕೆ.ಸ್ಟಾಲಿನ್ ದ್ರಾವಿಡ ಪೊಂಗಲ್ ಎಂದು ಸೈದ್ದಾಂತಿಕ ಟಚ್ ಕೊಟ್ಟಿರುವುದು ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿ ಇದನ್ನು ಹಿಂದೂ ಗುರುತನ್ನು ಅಳಿಸುವ ಯತ್ನ ಎಂದು ವಾಗ್ದಾಳಿ ನಡೆಸಿದೆ.
ಹಬ್ಬಕ್ಕೂ ಮುನ್ನ ತಮ್ಮ ಡಿಎಂಕೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಸಿಎಂ ಎಂ.ಕೆ.ಸ್ಟಾಲಿನ್, ಪೊಂಗಲ್ ತಮಿಳು ಸುಗ್ಗಿಯ ಹಬ್ಬವಾಗಿದ್ದು, ಇದು ಧರ್ಮ ಮತ್ತು ಜಾತಿಯನ್ನು ಮೀರಿದ್ದು, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಮುದಾಯ ಬಾಂಧವ್ಯದ ಸಂಕೇತವಾಗಿ ಆಚರಿಸಬೇಕು. ಕಾರ್ಯಕರ್ತರು ಸಮುದಾಯ ಪೊಂಗಲ್ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಧಾರ್ಮಿಕ ಗುರುತಿಗಿಂತ ತಮಿಳು ಸಂಸ್ಕೃತಿಯನ್ನು ಹೆಚ್ಚಾಗಿ ಬಿಂಬಿಸುವಂತೆ ಕರೆ ನೀಡಿದ್ದಾರೆ.
ದ್ರಾವಿಡ ಪೊಂಗಲ್ಗೆ ಬಿಜೆಪಿ ಮತ್ತು ಎಐಎಡಿಎಂಕೆ ಕಿಡಿ
ಪೊಂಗಲ್ ಹಬ್ಬವನ್ನು ದ್ರಾವಿಡ ಪೊಂಗಲ್ ಎಂದು ಬಿಂಬಿಸುವ ಸ್ಟಾಲಿನ್ ಅವರ ಹೇಳಿಕೆಯನ್ನು ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಎಐಎಡಿಎಂಕೆ ಆಡಳಿತ ಪಕ್ಷವು, ಇದು ಹಿಂದೂ ಧಾರ್ಮಿಕ ಅಂಶಗಳನ್ನೊಳಗೊಂದ ಸುಗ್ಗಿಯ ಹಬ್ಬವನ್ನು ತಿರುಚುವ ಯತ್ನ ಎಂದು ಕಿಡಿಕಾರಿವೆ.
ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ವನತಿ ಶ್ರೀನಿವಾಸನ್, ಆಡಳಿತರೂಢ ಡಿಎಂಕೆ ಪೊಂಗಲ್‌ನಿಂದ ಪೂಜೆ ಮತ್ತು ಹಿಂದೂ ಅಂಶಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದೆ. ಅದನ್ನು ಜಾತ್ಯಾತೀತ ಹಬ್ಬವೆಂದು ಮರು ಬ್ರಾಂಡ್ ಮಾಡಲು ಯತ್ನಿಸುತ್ತಿದೆ. ಪೊಂಗಲ್ ಒಂದು ಸನಾತನ ಧರ್ಮದ ಹಬ್ಬ. ಅದರಲ್ಲಿ ಸೂರ್ಯ ಪೂಜೆಯೂ ಇದೆ. ಮರು ವ್ಯಾಖ್ಯಾನಿಸುವ ಮೂಲಕ, ಡಿಎಂಕೆ ಅದನ್ನು ಹಿಂದೂ ಕ್ಯಾಲೆಂಡರ್‌ನಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಸಹ, ಡಿಎಂಕೆಯ ಈ ಕ್ರಮ ನಾಟಕ ಎಂದಿದ್ದು, ಹಬ್ಬಗಳನ್ನು ತಿರುಚುವ ಯತ್ನ ಎಂದು ಕಿಡಿಕಾರಿದ್ದಾರೆ.
ಸಮರ್ಥಿಸಿಕೊಂಡ ಡಿಎಂಕೆ
ಇನ್ನು ಸಿಎಂ ಸ್ಟಾಲಿನ್ ಅವರ ದ್ರಾವಿಡ ಪೊಂಗಲ್ ಹೇಳಿಕೆಯನ್ನು ಸಮರ್ಥಿಸಕೊಂಡಿರುವ ಡಿಎಂಕೆ ಪಕ್ಷ, ದ್ರಾವಿಡ ಪೊಂಗಲ್" ಹಬ್ಬಕ್ಕೆ ಕರೆ ನೀಡಿರುವುದು ಪಕ್ಷದ ಕಾರ್ಯಕರ್ತರಿಗೆ ಮಾತ್ರವೇ ಹೊರತು ಸಾರ್ವಜನಿಕರಿಗೆ ಅಲ್ಲ. ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದೆ.
ಈ ಕುರಿತು ಮಾತನಾಡಿರುವ ಡಿಎಂಕೆ ವಕ್ತಾರ ಟಿಕೆಎಸ್ ಎಳಂಗೋವನ್, ಪೊಂಗಲ್ ಹಿಂದೂ ಹಬ್ಬವಲ್ಲ. ಇತರ ರಾಜ್ಯಗಳಲ್ಲಿ ಇದನ್ನು ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ, ಇದು ವ್ಯತ್ಯಾಸವನ್ನು ತೋರಿಸುತ್ತದೆ. ಪೊಂಗಲ್ ಮೂಲತಃ ಪ್ರಕೃತಿ ಮತ್ತು ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಒಂದು ಮಾರ್ಗವಾಗಿ ರೈತರು ಆಚರಿಸುವ ತಮಿಳು ಹಬ್ಬ ಎಂದು ಹೇಳಿದ್ದಾರೆ (ಏಜೆನ್ಸೀಸ್).