ಕೋಲ್ಕತ್ತಾ: ಬಿಜೆಪಿ ಫಾರ್ಮ್ 6 ಅರ್ಜಿ ಉಪಯೋಗಿಸಿ ಪಶ್ಚಿಮ ಬಂಗಾಳದ ಮತಪಟ್ಟಿಯಲ್ಲಿ ಇತರೆ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಮಂಗಳವಾರ(ಮಾ. 31) ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದು, ತನಿಖೆ ನಡೆಸುವುದಾಗಿ ಚುನಾವಣಾ ಆಯೋಗ(EC) ಹೇಳಿದೆ.
ಪಶ್ಚಿಮ ಮೇದಿನಿಪುರದ ಚಂದ್ರಕೋಣದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಅಕ್ರಮ ಮತದಾರರನ್ನು ಬಂಗಾಳದ ಮತದಾರರ ಪಟ್ಟಿಯಲ್ಲಿ ಸೇರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಹಾರದಲ್ಲಿ ಮಾಡಿದಂತೆ ರೈಲ್ವೆ ಮೂಲಕ ಹೊರರಾಜ್ಯಗಳ ಮತದಾರರನ್ನು ಸಾಗಿಸಲು ಮತ್ತು ಅಸನ್ಸೋಲ್, ಖರಗ್‌ಪುರ ಕ್ಷೇತ್ರಗಳಲ್ಲಿ ಮತದಾನ ಮಾಡುವಂತೆ ಒತ್ತಾಯಿಸಲಾಗ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದೊಂದಿಗೆ ಯಾವುದೇ ಕಾನೂನುಬದ್ಧ ಸಂಪರ್ಕವನ್ನು ಹೊಂದಿರದ ಬಂಗಾಳದ ನಿಜವಾದ ನಿವಾಸಿಗಳಲ್ಲದ ಬಿಹಾರ, ರಾಜಸ್ಥಾನ, ಹರಿಯಾಣ ಹಾಗೂ ಉತ್ತರ ಪ್ರದೇಶದ ಜನರಿಗೆ ಫಾರ್ಮ್ 6 ಅರ್ಜಿಗಳು ನೀಡುವುದು ಕಾನೂನುಬಾಹಿರ, ಅಸಂವಿಧಾನಿಕ ಹಾಗೂ ಮೂಲಭೂತವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ.
ಹೊಸ ಮತದಾರರನ್ನು ಸೇರಿಸಲು ಒಂದೇ ದಿನದಲ್ಲಿ ಸುಮಾರು 30,000 ಫಾರ್ಮ್‌ಗಳನ್ನು ಸಲ್ಲಿಸಲಾಗಿದೆ ಎಂಬ ಮಾಹಿತಿ ಬಂದ ನಂತರ, ಅಭಿಷೇಕ್ ಅವರು ನಿನ್ನೆ ತಮ್ಮ ಪ್ರಚಾರದ ವೇಳಾಪಟ್ಟಿಯ ಮಧ್ಯದಿಂದ ಕೋಲ್ಕತ್ತಾದ ಚುನಾವಣಾ ಆಯೋಗದ ಕಚೇರಿಗೆ ಧಾವಿಸಬೇಕಾಯಿತು ನನಗೆ ತಿಳಿಸಿದರು ಎಂದು ಹೇಳಿದ್ದಾರೆ.
ಬಂಗಾಳದ ಮತದಾರರ ಪಟ್ಟಿಯಲ್ಲಿ ಬಿಜೆಪಿ ಹೊರಗಿನಿಂದ ಅಕ್ರಮ ಮತದಾರರನ್ನು ಸೇರಿಸಲು ಪ್ರಯತ್ನಿಸಿದರೆ, ಜನರು ವಿರೋಧಿಸುತ್ತಾರೆ. ಅವರಿಗೆ ಒಂದೇ ಒಂದು ಮತವೂ ಸಿಗುವುದಿಲ್ಲ. ಯಾಕಂದರೆ ಬಿಹಾರ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಈ ತಂತ್ರವನ್ನು ಜಾರಿಗೆ ತಂದಿದೆ. ಮತ್ತು ಅಲ್ಲಿನ ವಿರೋಧ ಪಕ್ಷಗಳು ಈ ತಂತ್ರವನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಕಾರಣ ಅಲ್ಲಿ ಪಾರಾಯಿತು. ಇಲ್ಲಿ ಆಗಲ್ಲ, ಬಂಗಾಳಿಗಳಿಗೆ ಎಲ್ಲಾ ತಿಳಿದಿದೆ ಎಂದಿದ್ದಾರೆ.
ತನಿಖೆ ನಡೆಸುವುದಾಗಿ ಸಿಇಒ ಹೇಳಿಕೆ
ಅನ್ಯ ರಾಜ್ಯಗಳ ಮತದಾರರನ್ನು ಪಶ್ಚಿಮ ಬಂಗಾಳದ ಮತಪಟ್ಟಿಯಲ್ಲಿ ಸೇರಿಸಲು ಬಿಜೆಪಿ ನಾಯಕನ ಪ್ರತಿನಿಧಿಯೊಬ್ಬರು ಒಂದು ಚೀಲ ಫಾರ್ಮ್ 6 ತಂದಿದ್ದಾರೆ ಎಂಬ ಟಿಎಂಸಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುವ ಮೂಲಕ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿ ಮೊದಲ ಬಾರಿಗೆ ಮತದಾರರನ್ನು ಸೇರಿಸಲು ಅಥವಾ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಮತದಾರರನ್ನು ಸ್ಥಳಾಂತರಿಸಲು ನಮೂನೆ 6 ಅನ್ನು ಭರ್ತಿ ಮಾಡಲಾಗುತ್ತದೆ. ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).