ಗೌರವ್ ಗೊಗೊಯ್ ಪಾಕಿಸ್ತಾನ ಮತ್ತು ಲಂಡನ್​ನಲ್ಲಿರುವ ತಮ್ಮ ಆಸ್ತಿಯ ವಿವರ ನೀಡಲಿ; ಸಿಎಂ ಹಿಮಂತ ಬಿಸ್ವಾ ಶರ್ಮಾ | CM Himanta Biswa Sharma

 ಸಿಎಂ ಹಿಮಂತ ಬಿಸ್ವಾ ಶರ್ಮಾ
ಸಿಎಂ ಹಿಮಂತ ಬಿಸ್ವಾ ಶರ್ಮಾ
Published on
ಗುವಾಹಟಿ: ಏ. 9ರಂದು ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪ, ಮಾತಿನ ಸಮರ ಮುಂದುವರೆದಿದ್ದು, ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್ ಅವರಿಗೆ ಪಾಕಿಸ್ತಾನ ಮತ್ತು ಲಂಡನ್​ನಲ್ಲಿರುವ ತಮ್ಮ ಆಸ್ತಿಯ ವಿವರ ಬಹಿರಂಗಪಡಿಸುವಂತೆ ಸಿಎಂ ಹಿಮಂತ ಬಿಸ್ವಾ ಶರ್ಮಾ(CM Himanta Biswa Sharma) ಸವಾಲು ಹಾಕಿದ್ದಾರೆ.
ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಜೋರ್ಹತ್ ಲೋಕಸಭೆ ಸದಸ್ಯರು ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಅವರಿಗೆ ದೇಶದ ಹೊರಗಿನ ಆಸ್ತಿಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಒತ್ತಾಯಿಸ್ದಾರೆ.
ಗೊಗೊಯ್ ಅವರು ತಮ್ಮ ಪತ್ನಿಯ ಪಾಕಿಸ್ತಾನದ ಆದಾಯದ ವಿವರಗಳನ್ನು ನೀಡಿಲ್ಲ. ಅಥವಾ ನೆರೆಯ ದೇಶದಲ್ಲಿರುವ ಅವರ ಬ್ಯಾಂಕ್ ಖಾತೆಯ ಬಗ್ಗೆಯೂ ಉಲ್ಲೇಖಿಸಿಲ್ಲ. ಅವರಿಗೆ ಪಾಕಿಸ್ತಾನ ಮತ್ತು ಲಂಡನ್‌ನಲ್ಲಿ ಆಸ್ತಿ ಇದೆ ಎಂದು ಆರೋಪಿಸಿದ ಅವರು, ಇದು ನನ್ನ ಆರೋಪವಲ್ಲ, ಅವರು ಅಫಿಡವಿಟ್‌ನಲ್ಲಿ ಪಾಕಿಸ್ತಾನದಲ್ಲಿನ ಅವರ ವಹಿವಾಟುಗಳ ವಿವರಗಳನ್ನು ನೀಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿಯಾಗಿ ಬಹಳ ಜವಾಬ್ದಾರಿಯಿಂದ ನಾನು ಆರೋಪಗಳನ್ನು ಮಾಡುತ್ತಿದ್ದೇನೆ. ಗೊಗೊಯ್ ಅವರು ಲಂಡನ್ ಮತ್ತು ಪಾಕಿಸ್ತಾನ ಎರಡರಲ್ಲೂ ತಮ್ಮ ಪತ್ನಿಯ ಹೆಸರಿನಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ಅವರು, ಅದನ್ನು ಚುನವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತೋರಿಸಿಲ್ಲ ಎಂದು ಹೇಳಿದ್ದಾರೆ.
ಯಾವುದೇ ಆಸ್ತಿ ಇಲ್ಲದಿದ್ದರೆ, ಪತ್ನಿಯ ಪಾಕಿಸ್ತಾನದಲ್ಲಿರುವ ಬ್ಯಾಂಕ್ ಖಾತೆಯ ವಹಿವಾಟುಗಳನ್ನು, ಅದು ಹಳೆಯ ಖಾತೆಯಾಗಿದ್ದರೂ ಸಹ, ನಾಲ್ವರು ತಟಸ್ಥ ವ್ಯಕ್ತಿಗಳ ಅಥವಾ ನಾಲ್ವರು ಪತ್ರಕರ್ತರ ಹೆಸರುಗಳನ್ನು ಉಲ್ಲೇಖಿಸಿ ಅವರ ಮುಂದೆ ಸಲ್ಲಿಸಬೇಕು. ಆ ನಾಲ್ವರು ಬ್ಯಾಂಕ್ ಖಾತೆಯನ್ನು ಪರೀಕ್ಷಿಸಿ ಅದು ಸರಿಯೋ ಅಥವಆ ನಾನು ಸುಳ್ಳು ಹೇಳುತ್ತಿದ್ದೇನೋ ಎಂಬುದನ್ನು ಜನರಿಗೆ ತಿಳಿಸಲಿ ಎಂದಿದ್ದಾರೆ.
ಗೊಗೊಯ್ ವಿರುದ್ಧ ಹಲವು ಗಂಭೀರ ಆರೋಪಗಳಿದ್ದು, ಅವುಗಳನ್ನು ಬಹಿರಂಗಪಡಿಸಿ ನಾನು ಚುನಾವಣಾ ವಾತಾವರಣವನ್ನು ಹಾಳುಗೆಡವಲು ಬಯಸುವುದಿಲ್ಲ. ಆದರೆ ಚುನಾವಣೆ ಮುಗಿದ ಬಳಿಕ ಈ ವಿಷಯದ ಕುರಿತು ಹೆಚ್ಚು ಗಂಭೀರವಾದ ಮಾಹಿತಿಯನ್ನು ನಿಮ್ಮ ಮುಂದಿಡುತ್ತೇನೆ ಎಂದು ಶರ್ಮಾ ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net