- ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ವಿರುದ್ಧ ಅರ್ಜಿ
- ಇಂದು ಸುಪ್ರೀಂಕೋರ್ಟ್ನಲ್ಲಿ ಸ್ವತಃ ವಾದ ಮಂಡಿಸಲಿರುವ ಸಿಎಂ ಮಮತಾ
- ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಿಎಂ ಒಬ್ಬರು ಖುದ್ದು ವಾದ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆ ಆಯೋಗದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ಪ್ರಕ್ರಿಯೆ ವಿರುದ್ಧ ಖುದ್ದು ಫೀಲ್ಡಿಗಿಳಿದಿರುವ ಸಿಎಂ ಮಮತಾ ಬ್ಯಾನರ್ಜಿ(CM Mamata Banerjee), ಇಂದು(ಫೆ. 04) ಸುಪ್ರೀಂಕೋರ್ಟ್ನಲ್ಲಿ ಸಿಜೆಐ ಮುಂದೆ ಸ್ವತಃ ತಾವೇ ವಾದ ಮಂಡಿಸಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ಎಸ್ಐಆರ್ ಪ್ರಕ್ರಿಯೆಯಲ್ಲಿ ನಿಜ ಮತದಾರರ ಹೆಸರು ಅಳಿಸಿ ಹಾಕುವುದರ ವಿರುದ್ಧ ಮತ್ತು ನಡೆಯುತ್ತಿರುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸುವಂತೆ ಸುಪ್ರೀಂಕೋರ್ಟ್ಗೆ ಸಿಎಂ ಮಮತಾ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದಾರೆ. ಮತ್ತು ಖುದ್ದಾಗಿ ಸ್ವತಃ ತಾವೇ ವಾದಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಸಿಎಂ ಮಮತಾ ಬ್ಯಾನರ್ಜಿ ಸಲ್ಲಿಸಿದ ಅರ್ಜಿ, ಇಂದು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ನ್ಯಾಯಾಲಯದ ಕೊಠಡಿ 1ರಲ್ಲಿ ವಿಚಾರಣೆ ನಡೆಯಲಿದೆ. ಸಿಎಂ ಖುದ್ದಾಗಿ ತಮ್ಮ ಅರ್ಜಿಯ ಬಗ್ಗೆ ವಾದ ಮಂಡಿಸಲಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಪ್ರಕರಣವೊಂದರ ವಿಚಾರಣೆಗೆ ಹಾಲಿ ಸಿಎಂ ಒಬ್ಬರು ಖುದ್ದಾಗಿ ಹಾಜರಾಗಿ ವಾದ ಮಂಡಿಸುತ್ತಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. ಸಿಎಂ ಮಮತಾ ಅವರು ಕೋಲ್ಕತ್ತಾದ ಜೋಗೇಶ್ ಚಂದ್ರ ಚೌಧರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ್ದಾರೆ (ಏಜೆನ್ಸೀಸ್).