ಎನ್​ಸಿಪಿ ಹಿರಿಯ ನಾಯಕ ಶರದ್ ಪವಾರ್ 
ದೇಶ

ಎನ್​ಸಿಪಿ ಬಣಗಳ ವಿಲೀನದ ಬಗ್ಗೆ ಮಾತನಾಡಲು ಸಿಎಂ ಫಡ್ನವೀಸ್​ಗೆ ಯಾವುದೇ ಹಕ್ಕಿಲ್ಲ: ಶರದ್ ಪವಾರ್ | Sharad Pawar

ಮುಂಬೈ: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಎರಡೂ ಬಣಗಳ ವಿಲೀನದ ಬಗ್ಗೆ ದಿವಂಗತ ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ನಡುವೆ ಚರ್ಚೆಗಳು ನಡೆದಿವೆ. ಮತ್ತು ಅದರ ಬಗ್ಗೆ ಸಿಎಂ ದೇವೇಂದ್ರ ಫಡ್ನವೀಸ್​ಗೆ ಮಾತನಾಡಲು ಯಾವುದೇ ಹಕ್ಕಿಲ್ಲ ಎಂದು ಎನ್​ಸಿಪಿ ಹಿರಿಯ ನಾಯಕ ಶರದ್ ಪವಾರ್ ಹೇಳಿದ್ದಾರೆ.
ಈ ಕುರಿತು ಬಾರಾಮತಿಯಲ್ಲಿ ಮಾತನಾಡಿರುವ ಅವರು, ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ಎನ್​ಸಿಪಿ ವಿಲೀನದ ಬಗ್ಗೆ ಅಜಿತ್ ಪವಾರ್ & ಜಯಂತ್ ಪಾಟೀಲ್ ಚರ್ಚಿಸಿದ್ದರು. ಅದರಲ್ಲಿ ಸಿಎಂ ಫಡ್ನವೀಸ್ ಭಾಗಿಯಾಗಿರಲಿಲ್ಲ. ಹಾಗಾಗಿ ಅದರ ಬಗ್ಗೆ ಅವರಿಗೆ ಮಾತನಾಡಲು ಹಕ್ಕಿಲ್ಲ ಎಂದಿದ್ದಾರೆ.
ಪ್ರಸ್ತುತ ಈಗ ನಮ್ಮ ಸಂಪೂರ್ಣ ಗಮನ ಎಲ್ಲರನ್ನೂ ನೋಡಿಕೊಳ್ಳುವುದು. ಮತ್ತು ದುಃಖಿಸುತ್ತಿರುವವರೊಂದಿಗೆ ಒಟ್ಟಾಗಿ ಮುಂದುವರೆಯುವುದಾಗಿದೆ. ಸದ್ಯಕ್ಕೆ ಯಾವುದೇ ರಾಜಕೀಯ ನಿರ್ಧಾರಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಸಿಎಂ ಫಡ್ನವೀಸ್ ಹೇಳಿದ್ದೇನು?

ಸೋಮವಾರ ಈ ಕುರಿತು ಮಾತನಾಡಿದ್ದ ಸಿಎಂ ಫಡ್ನವೀಸ್, ದಿವಂಗತ ಅಜಿತ್ ಪವಾರ್ ಅವರು, ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಬಗ್ಗೆ ನನಗೆ ತಿಳಿದಿಲ್ಲ. ನಮಗೆ ತಿಳಿಸದೇ ವಿಲೀನ ಮಾತುಕತೆಗಳನ್ನು ಅಂತಿಮಗೊಳಿಸಬಹುದೇ?, ಎನ್‌ಸಿಪಿ ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವತಂತ್ರ ಪಕ್ಷವಾಗಿದೆ. ಆದರೆ ಬಿಜೆಪಿಯ ಮಿತ್ರಪಕ್ಷವಾಗಿ, ಮುಂದುವರಿಯುವ ಮೊದಲು ಪಕ್ಷದೊಂದಿಗೆ ಸಮಾಲೋಚಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಒಂದು ವೇಳೆ ವಿಲೀನದ ಕೆಲಸ ಮಾಡುತ್ತಿದ್ದರೆ, ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾಡುತ್ತಿದ್ದರೇ?, ಸ್ಥಿರವಾಗಿರುವ ಎನ್​ಡಿಎ ತೊರೆಯಲು ತಯಾರಿ ನಡೆಸುತ್ತಿದ್ದರೇ? ಅವರು ಎಲ್ಲಾ ವಿಚಾರವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದರು (ಏಜೆನ್ಸೀಸ್).