15 ವರ್ಷಗಳ ಬಳಿಕ ತ್ರಿಪುರ ಶಿಕ್ಷಕನ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು
- 2011ರಲ್ಲಿ ನಾಪತ್ತೆಯಾಗಿದ್ದ ಶಿಕ್ಷಕನ ಅಸ್ತಿ ಪತ್ತೆ
- 15 ವರ್ಷಗಳ ಬಳಿಕ ಪ್ರಕರಣಕ್ಕೆ ಹೊಸ ತಿರುವು
- ಶಿಕ್ಷಕನ ಮೂಳೆಗಳು ಡಿಎನ್ಎ ಪರೀಕ್ಷೆಗೆ ರವಾನೆ
Tripura teacher missing case: 15 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತ್ರಿಪುರದ ಶಿಕ್ಷಕನ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಶಿಕ್ಷಕನ ಸುಳಿವಿಗಾಗಿ ಅಸ್ಸಾಂನ ಶ್ರೀಭೂಮಿಯಲ್ಲಿ 15 ವರ್ಷಗಳ ಹಿಂದೆ ಹೂಳಲಾಗಿದ್ದ ಮೂರು ಅಪರಿಚಿತ ಸಮಾಧಿಗಳನ್ನು ಅಗೆದು ಅವಶೇಷಗಳನ್ನು ಹೊರತೆಗೆಯಲಾಗಿದೆ.
ಜಿಲ್ಲಾ ನ್ಯಾಯಾಲಯದ ಆದೇಶದಂತೆ ಬುಧವಾರ ಈ ಕಾರ್ಯಾಚರಣೆ ನಡೆದಿದೆ. ಶ್ರೀಭೂಮಿಯ ಸರ್ಕಾರಿ ಸ್ಮಶಾನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತ್ರಿಪುರ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಶಿಕ್ಷಕನ ಕುಟುಂಬಸ್ಥರು ಉಪಸ್ಥಿತರಿದ್ದರು.
ಡಿಎನ್ಎ ಪರೀಕ್ಷೆಗೆ ಮೂಳೆ ಮಾದರಿ ಸಂಗ್ರಹ
ಹೊರತೆಗೆದ ಅವಶೇಷಗಳಿಂದ ಮೂಳೆ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಕುಟುಂಬಸ್ಥರ ಡಿಎನ್ಎ ಮಾದರಿಗಳೊಂದಿಗೆ ಹೋಲಿಕೆ ಮಾಡಿ ಗುರುತು ಪತ್ತೆಹಚ್ಚಲಾಗುತ್ತದೆ.
2011ರಲ್ಲಿ ಏನಾಗಿತ್ತು?
ನಾಪತ್ತೆಯಾಗಿರುವ ಶಿಕ್ಷಕನನ್ನು ಅಗರ್ತಲಾ ನಿವಾಸಿ ಆಶಿಶ್ ಸೋಮ್ ಎಂದು ಗುರುತಿಸಲಾಗಿದೆ. 2011ರ ಮೇ ತಿಂಗಳಲ್ಲಿ, ಸುಮಾರು 40 ವರ್ಷದವರಾಗಿದ್ದ ಅವರು ಕೆಲಸಕ್ಕೆಂದು ಮನೆಯಿಂದ ಹೊರಟು ವಾಪಸ್ ಬಂದಿರಲಿಲ್ಲ. ಬಳಿಕ, ಕೆಲವರು ಅವರನ್ನು ಅಪಹರಿಸಿರುವುದಾಗಿ ಹೇಳಿ ಕುಟುಂಬಸ್ಥರಿಗೆ ಕರೆ ಮಾಡಿದ್ದರು ಎನ್ನಲಾಗಿದೆ.‘
ಅವಶೇಷಗಳಿಂದ ಮೂಳೆ ಮಾದರಿಗಳ ಸಂಗ್ರಹ 25 ಲಕ್ಷ ರೂ. ಹಣಕ್ಕೆ ಬೇಡಿಕೆ?
ಅಪಹರಣಕಾರರು ಹಣಕ್ಕೆ ಬೇಡಿಕೆ ಇಟ್ಟಿದ್ದು, ಕುಟುಂಬಸ್ಥರು ವಿವಿಧ ಹಂತಗಳಲ್ಲಿ ಸುಮಾರು 25 ಲಕ್ಷ ರೂ. ಪಾವತಿಸಿದ್ದರು ಎನ್ನಲಾಗಿದೆ. ಆದರೂ ಆಶಿಶ್ ಸೋಮ್ ವಾಪಸ್ ಬಂದಿರಲಿಲ್ಲ. ಹಲವು ವರ್ಷಗಳ ಬಳಿಕ ಕುಟುಂಬಸ್ಥರು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ಅಸ್ಸಾಂನ 3 ಸಮಾಧಿಗಳಿಗೂ ನಂಟು
ಆಶಿಶ್ ಸೋಮ್ ಹತ್ಯೆಯಾಗಿರಬಹುದು ಎಂಬ ಶಂಕೆ ತನಿಖಾಧಿಕಾರಿಗಳಲ್ಲಿದೆ. ಅವರ ನಾಪತ್ತೆಯ ಸಮಯದ ಆಸುಪಾಸಿನಲ್ಲಿ ಶ್ರೀಭೂಮಿಯ ಸೋನ್ ಬೀಲ್ ಪ್ರದೇಶದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಕಾನೂನು ಪ್ರಕ್ರಿಯೆ ಬಳಿಕ ಅದನ್ನು ಹೂಳಲಾಗಿತ್ತು ಎನ್ನಲಾಗಿದೆ.‘
ದಾಖಲೆಗಳ ಪರಿಶೀಲನೆ ವೇಳೆ ಅದೇ ಅವಧಿಯಲ್ಲಿ ಮೂರು ಅಪರಿಚಿತ ಶವಗಳನ್ನು ಹೂಳಲಾಗಿತ್ತು ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಯಾವ ಸಮಾಧಿಯಲ್ಲಿ ಆಶಿಶ್ ಸೋಮ್ ಅವಶೇಷಗಳಿರಬಹುದು ಎಂಬುದು ಖಚಿತವಾಗಿಲ್ಲ.
ಡಿಎನ್ಎ ವರದಿಯತ್ತ ಎಲ್ಲರ ಚಿತ್ತ
ಸಮಾಧಿಗಳಿಂದ ಸಂಗ್ರಹಿಸಿರುವ ಡಿಎನ್ಎ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ವರದಿ ಬಂದ ಬಳಿಕವಷ್ಟೇ ಈ ಅವಶೇಷಗಳು 2011ರಲ್ಲಿ ನಾಪತ್ತೆಯಾಗಿದ್ದ ಶಿಕ್ಷಕ ಆಶಿಶ್ ಸೋಮ್ ಅವರದ್ದೇ ಎಂಬುದು ಸ್ಪಷ್ಟವಾಗಲಿದೆ. (ಏಜೆನ್ಸೀಸ್)