ಸಿಜೆಪಿ ನಾಯಕರಾದ ಸೌರವ್ ದಾಸ್, ಅಶುತೋಷ್ ರಂಕಾ ಅವರಿಗೆ 5 ದಿನಗಳ ನ್ಯಾಯಾಂಗ ಬಂಧನ, ಅಜಿಂಕ್ಯ ಶಿಂಧೆ ಬಿಡುಗಡೆ!
ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ನಿಷೇಧ ಹೇರಿದರೂ ಅತಿಕ್ರಮ ಪ್ರವೇಶ
ಸೌರವ್ ದಾಸ್, ಅಶುತೋಷ್ ರಂಕಾ, ಅಜಿಂಕ್ಯ ಶಿಂಧೆ ಬಂಧಿಸಿದ ಪೊಲೀಸರು
ಕಾಕ್ರೋಚ್ಗಳ ಮನೋಬಲವನ್ನು ಯಾವುದೇ ಶಕ್ತಿಯೂ ಕುಗ್ಗಿಸಲು ಸಾಧ್ಯವಿಲ್ಲ
ಜಂತರ್ ಮಂತರ್ನಲ್ಲಿ ಪ್ರತಿಭಟನೆ, ಧರಣಿ ನಡೆಸುವುದು ನಿಷೇಧ ಎಂದು ಘೋಷಿಸಿದ್ದರೂ ಸಹ ಗೇಟ್ ಹಾರಿ ಪ್ರತಿಭಟನೆಗೆ ಯತ್ನಿಸಿದ ಆರೋಪದ ಮೇಲೆ ಮುನ್ನೆಚ್ಚರಿಕಾ ಕ್ರಮವಾಗಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರ(ಅ.14) ಬೆಳಿಗ್ಗೆ ಎಂಟು ಗಂಟೆಗೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಈ ಮೂವರು ನಾಯಕರನ್ನು ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು 5 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಅಜಿಂಕ್ಯಾ ಶಿಂಧೆ ಸಂಬಂಧಿಸಿದ ಜಾಮೀನು ಬಾಂಡ್ ಪ್ರಕ್ರಿಯೆಗಳು ನಡೆಯುತ್ತಿದೆ ಎನ್ನಲಾಗಿದೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಅತಿಕ್ರಮಣ ಪ್ರವೇಶ, ಪ್ರಶಾಂತಿ ಒಪ್ಪಂದ ಬಾಂಡ್ ಉಲ್ಲಂಘನೆ ಹಾಗೂ ಸಾರ್ವಜನಿಕ ಸಿಬ್ಬಂದಿಯ ಕರ್ತವ್ಯ ನಿರ್ಹಣೆಗೆ ಅಡ್ಡಿ ಮುಂತಾದ ಪ್ರಕರಣಗಳನ್ನು ಸಿಜೆಪಿ ನಾಯಕ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಮೇಲೆ ಪೊಲೀಸರು ಹೊರಿಸಿದ್ದರು.
ಏನಾಗಿತ್ತು?
ಜಂತರ್ ಮಂತರ್ನಲ್ಲಿ ಪ್ರತಿಭಟನೆ, ಧರಣಿ ನಡೆಸುವುದು ನಿಷೇಧ ಎಂದು ಘೋಷಿಸಿದ್ದರೂ ಸಹ ಗೇಟ್ ಹಾರಿ ಪ್ರತಿಭಟನೆಗೆ ಯತ್ನಿಸಿದ ಹಿನ್ನಲೆ ಕಾಕ್ರೋಚ್ ಜನತಾ ಪಾರ್ಟಿಯ ಸೌರವ್ ದಾಸ್, ಅಶುತೋಷ್ ರಂಕಾ, ಅಜಿಂಕ್ಯ ಶಿಂಧೆ ಅವರನ್ನು ಮಂಗಳವಾರ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ರಾತ್ರಿ ತಡವಾದರೂ ಕಾಕ್ರೋಚ್ ನಾಯಕರಿಗೆ ತಮ್ಮ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಲಾಗಿಲ್ಲ. ರಾತ್ರಿ 3:00 ಗಂಟೆಯ ಸುಮಾರಿಗೆ ಅವರನ್ನು ಖಾಸಗಿ ವಾಹನದಲ್ಲಿ ಸಂಸತ್ ರಸ್ತೆ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಪೊಲೀಸರ ಈ ಎಲ್ಲಾ ಕಾನೂನುಬಾಹಿರ ಕ್ರಮಗಳ ನಡುವೆಯೂ ನಾಯಕರ ಧೈರ್ಯ ಮತ್ತು ಮನೋಬಲವು ಗಟ್ಟಿಯಾಗಿದೆ ಎಂದು ವಕೀಲೆ ರತ್ನ ಸಿಂಗ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಜಂತರ್ ಮಂತರ್ ಗೇಟ್ ಹಾರಿ ಪ್ರತಿಭಟನೆಗೆ ಯತ್ನ; ಜಿರಳೆ ಪಕ್ಷದ ಸೌರವ್, ಅಶುತೋಷ್ ರಂಕಾ ಪೊಲೀಸರ ವಶಕ್ಕೆ..Jantar Mantar
ಸಂಸತ್ ರಸ್ತೆ ಪೊಲೀಸ್ ಠಾಣೆಯ ಒಳಗಿರುವ ಕಾಕ್ರೋಚ್ಗಳಾದ ಸೌರವ್ ದಾಸ್, ಅಶುತೋಷ್ ರಂಕಾ, ಅಜಿಂಕ್ಯ ಶಿಂಧೆ ಇವರ ಮನೋಬಲವನ್ನು ಯಾವುದೇ ಶಕ್ತಿಯೂ ಕುಗ್ಗಿಸಲು ಸಾಧ್ಯವಿಲ್ಲ ರತ್ನ ಸಿಂಗ್ ಅವರೇ ಎಷ್ಟು ಚಂದದ ಚಿತ್ರವಿದು ಎಂದು ಅಭಿಜಿತ್ ದೀಪ್ಕೆ ಅವರು ಬರೆದುಕೊಂಡಿದ್ದಾರೆ.
ಚುನಾವಣಾ ಆಯುಕ್ತರ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ CJP ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಅಕ್ಟೋಬರ್ 11 ರಂದು ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರು ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ಅಧಿಕೃತ ಪ್ರತಿಭಟನಾ ಸ್ಥಳಗಳೆಂದು ಆದೇಶ ಹೊರಡಿಸಿದ್ದು, ಇದರೊಂದಿಗೆ ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದೆ. ಈ ಆದೇಶ ವಿರೋಧಿಸಿ ಮಂಗಳವಾರ ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖ ಸದಸ್ಯರು ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ, (ಏಜೆನ್ಸೀಸ್).