ಜಂತರ್​​ ಮಂತರ್​​ ಗೇಟ್ ಹಾರಿ ಪ್ರತಿಭಟನೆಗೆ ಯತ್ನ; ಜಿರಳೆ ಪಕ್ಷದ ಸೌರವ್​, ಅಶುತೋಷ್ ರಂಕಾ ಪೊಲೀಸರ ವಶಕ್ಕೆ..Jantar Mantar

ಜಂತರ್​​ ಮಂತರ್​​ ಗೇಟ್ ಹಾರಿ ಪ್ರತಿಭಟನೆಗೆ ಯತ್ನ; ಜಿರಳೆ ಪಕ್ಷದ ಸೌರವ್​, ಅಶುತೋಷ್ ರಂಕಾ ಪೊಲೀಸರ ವಶಕ್ಕೆ..Jantar Mantar
Published on: 
  • ಜಂತರ್ ಮಂತರ್​ನಲ್ಲಿ ಪ್ರತಿಭಟನೆ, ಮೆರವಣಿಗೆ ಧರಣಿಗೆ ಬ್ರೇಕ್​ ಹಾಕಿದ ದೆಹಲಿ ಪೊಲೀಸರು

  • ಪೊಲೀಸರು ನಿಷೇಧ ಹೇರಿದ ಮರುದಿನವೇ ಜಂತರ್​ ಮಂತರ್​ಗೆ ನುಗ್ಗಲು ಯತ್ನ

  • ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ಅಜಿಂಕ್ಯಾ ಶಿಂಡೆ ಸೇರಿದಂತೆ ಹಲವರು ಪೊಲೀಸರ ವಶಕ್ಕೆ

ನವದೆಹಲಿ: ಜಂತರ್​ ಮಂತರ್ ಪ್ರತಿಭಟನಾ ಕೇಂದ್ರಬಿಂದುವಲ್ಲ..ಇನ್ಮುಂದೆ ಇಲ್ಲಿ ಯಾವುದೇ ಧರಣಿ, ಮೆರವಣಿಗೆ, ಪ್ರತಿಭಟನೆ ನಡೆಸುವಂತಿಲ್ಲ ಎಂದು ದೆಹಲಿ ಪೊಲೀಸರು ಆದೇಶ ಹೊರಡಿಸಿದ ಮಾರನೇ ದಿನವೇ ಜಿರಳೆ ಪಕ್ಷದ ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಸೇರಿಂದತೆ ಕೆಲವು ಯುವಕರು ಜಂತರ್ ಮಂತರ್‌ನ ಗೇಟ್ ಹಾರಿ ಒಳನುಗ್ಗಲು ಯತ್ನಿಸಿದ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳ ಪ್ರಕಾರ, ಕಾಕ್ರೋಚ್​ ಜನತಾ ಪಾರ್ಟಿಯ ಅಶುತೋಷ್​ ರಂಕಾ, ಸೌರವ್​ ದಾಸ್ ಸೇರಿದಂತೆ ಸಿಜೆಪಿ ನಾಯಕರು ​ಜೆಡಿಯು ಕಚೇರಿಯ ಆವರಣದ ಕಡೆಯಿಂದ ಜಂತರ್ ಮಂತರ್ ಪ್ರದೇಶಕ್ಕೆ ನುಗ್ಗಿದ್ದಾರೆ. ತ್ರಿರಂಗ ದ್ವಜ ಹಿಡಿದು, ಪ್ರತಿಭಟನೆಗೆ ಯತ್ನಿಸಿದರು. ಇಂಕ್ವಿಲಾಬ್ ಜಿಂದಾಬಾದ್ ಮತ್ತು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಈ ವೇಳೆ ದೆಹಲಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿರುವುದು ವಿಡಿಯೋದಲ್ಲಿ ಇದೆ.

ಅಭಿಜಿತ್ ದೀಪ್ಕೆ ಕಿಡಿ

'ತಿರಂಗ ಧ್ವಜದೊಂದಿಗೆ ನಮ್ಮ ಕಾಕ್ರೋಚ್​ ಜನತಾ ಪಾರ್ಟಿ ಜಂತರ್ ಮಂತರ್‌ಗೆ ನುಗ್ಗಲು ಯತ್ನಿಸಿತು. ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೌರವ್​ ದಾಸ್​, ಆಶುತೋಷ್ ರಂಕಾ ಹಾಗೂ ಅಜಿಂಕ್ಯಾ ಹಾಗೂ ಇತರ ತಂಡದ ಸದಸ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನೀವು 'ಪ್ರತಿರೋಧದ ವಿರುದ್ಧದ ಹೋರಾಟವನ್ನು ರದ್ದು ಮಾಡಲು ಸಾಧ್ಯವಿಲ್ಲ' ಎಂದು ಅಭಿಜಿತ್​ ದೀಪ್ಕೆ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಮುನ್ನ ಅಶುತೋಷ್ ರಂಕಾ ಅವರು ತಾವು ಮತ್ತು ಸೌರಭ್ ದಾಸ್ ಗೇಟ್ ಹಾರುತ್ತಿರುವ ವೀಡಿಯೊವನ್ನು 'ಎಕ್ಸ್' ತಾಣದಲ್ಲಿ ಹಂಚಿಕೊಂಡು "Hands Off Jantar Mantar!"ಎಂದು ಬರೆದುಕೊಂಡಿದ್ದಾರೆ. ಜಂತರ್ ಮಂತರ್ ಮರುಪಡೆದುಕೊಂಡಿದ್ದೇವೆ! ಇದು ಯುವ ಪೀಳಿಗೆಗೆ ಸಂದೇಶ" ಎಂದು ಸೌರಭ್ ದಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಜಂತರ್ ಮಂತರ್ ನಿಷೇಧದ ಹಿನ್ನೆಲೆ ಏನು?

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ SIR ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಹೊರೆಸಿ ಪಕ್ಷವು ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿತ್ತು. ಆದರೆ, ಈ ಪ್ರತಿಭಟನೆಗೆ ಮೊದಲು ದೆಹಲಿ ಪೊಲೀಸರು ಅನುಮತಿ ಕೊಟ್ಟಿಲ್ಲ. ಆನಂತರ ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ಕೈಬಿಟ್ಟು ಆದೇಶ ಹೊರಡಿಸಿದರು. ಪ್ರತಿಭಟನೆಗೆ ಪರ್ಯಾಯ ಸ್ಥಳವನ್ನು ಸೂಚಿಸಿದರು, ರಾಮಲೀಲಾ, ಬುರಾರಿ ಮೈದಾನ, ಸಿಬಿಡಿ ಮೈದಾನದಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಆದೇಶ ಹೊರಡಿಸಿದೆ.

ಎಫ್​ಐಆರ್ ಸಾಧ್ಯತೆ

ನಿಷೇಧಿತ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ ಕಾರಣ ಸೌರಭ್ ದಾಸ್, ಅಶುತೋಷ್ ರಂಕಾ ಮತ್ತು ಸಿಜೆಪಿ ಕಾರ್ಯಕರ್ತ ಅಜಿಂಕ್ಯ ಶಿಂಡೆ ಅವರನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net