ದೇಶ

ಲಂಡನ್​ಗೆ ತೆರಳದಂತೆ ವಿಮಾನ ನಿಲ್ದಾಣದಲ್ಲೇ ಸಿಜೆಪಿ ಸಂಚಾಲಕ ಸೌರವ್ ದಾಸ್​ಗೆ ತಡೆ: ಕೇಂದ್ರದ ವಿರುದ್ಧ ಕಿಡಿ | Saurav Das

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಲಂಡನ್​ಗೆ ತೆಳುವಾಗ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಮ್ಮನ್ನು ಪ್ರಯಾಣಿಸದಂತೆ ತಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸಂಚಾಲಕ ಸೌರವ್ ದಾಸ್ ಆರೋಪಿಸಿದ್ದಾರೆ.

ನವದೆಹಲಿ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಲಂಡನ್​ಗೆ ತೆಳುವಾಗ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಮ್ಮನ್ನು ಪ್ರಯಾಣಿಸದಂತೆ ತಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸಂಚಾಲಕ ಸೌರವ್ ದಾಸ್ ಆರೋಪಿಸಿದ್ದಾರೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಲಂಡನ್‌ಗೆ ವಿಮಾನ ಹತ್ತುವ ಮೊದಲು ದೆಹಲಿ ವಿಮಾನ ನಿಲ್ದಾಣದ ವಲಸೆ ಕೌಂಟರ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ಅನ್ನು ಫ್ಲ್ಯಾಗ್ ಮಾಡಲಾಗಿದೆ ಎಂದು ದಾಸ್ ಹೇಳಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಸರಣಿ ಪೋಸ್ಟ್ ಹಾಕಿರುವ ಸೌರವ್ ದಾಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ಹಾರುತ್ತಿದ್ದ ನನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಹೇಡಿ ಮೋದಿ ಸರ್ಕಾರ ತಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಹೇಡಿ ಸರ್ಕಾರ ನನಗೆ ಲಂಡನ್‌ಗೆ ವಿಮಾನ ಹತ್ತಲು ಅವಕಾಶ ನೀಡಲಿಲ್ಲ, ಅಲ್ಲಿ ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಎಲ್‌ಎಸ್‌ಇ, ಎಡಿನ್‌ಬರ್ಗ್‌ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಸಿಜೆಪಿ ಚಳುವಳಿಯ ಕುರಿತು ಭಾಷಣ ಮಾಡಲು ನನ್ನನ್ನು ಆಹ್ವಾನಿಸಿದ್ದವು.

ಭಾರತೀಯ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ಆಯೋಜಿಸಲು ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದರು, ಆದರೆ ಈ ಬೌದ್ಧಿಕ-ವಿರೋಧಿ ಸರ್ಕಾರವು ನಾನು ಇಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಭೇಟಿ ನೀಡುವುದನ್ನು ಕಂಡು ಭಯಗೊಂಡಿತು! ಎಂದು ಮತ್ತೊಂದು ಪೋಸ್ಟ್​ನಲ್ಲಿ ಕಿಡಿಕಾರಿದ್ದಾರೆ.

ವಿಮಾನ ನಿಲ್ದಾಣದ ಆವರಣದಿಂದ ದಾಸ್ ಒಂದು ಸಣ್ಣ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿಕ್ಷಿತ ಯುವಕರು ವಿದ್ಯಾವಂತ ಜನರ ನಡುವೆ ಹೋಗಿ ಬೌದ್ಧಿಕ ಚರ್ಚೆ ನಡೆಸಲು ಸರ್ಕಾರ ಏಕೆ ಹೆದರುತ್ತಿದೆ? ನಾನು ನೀರವ್ ಮೋದಿ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ವಿಜಯ್ ಮಲ್ಯ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಲೂಟಿ ಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಪರೋಕ್ಷವಾಗಿ ಲೂಟಿ ಮಾಡಿದವರನ್ನು ದೇಶ ಬಿಟ್ಟು ಅವಕಾಶ ಮಾಡಿಕೊಡಲಾಯಿತು ಎಂದು ಟೀಕಿಸಿದ್ದಾರೆ.

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಸೌರ್​ವ್​ಗೆ ಲಂಡನ್​​ಗೆ ತೆರಳದಂತೆ ತಡೆ ಹಿಡಿದ ಘಟನೆ ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ, ಸೌರವ್‌ಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಮ್ಮೇಳನವೊಂದರಲ್ಲಿ ಮಾತನಾಡಲು ಆಹ್ವಾನ ಬಂದಿತ್ತು. ಆದರೆ ಆಕ್ಸ್‌ಫರ್ಡ್‌ನಿಂದ ದಾಸ್‌ಗೆ ಆಹ್ವಾನ ಬಂದಿರುವುದನ್ನು ನೋಡಿ ಅಧಿಕಾರದಲ್ಲಿರುವ ಯಾರೋ ಅಸೂಯೆ ಪಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).