ಚುನಾವಣಾ ಆಯೋಗದ ವಿರುದ್ಧದ ಅರ್ಜಿ: 14 ದೋಷಗಳನ್ನು ಸರಿಪಡಿಸುವಂತೆ ಸಿಜೆಐ ಸೂರ್ಯಕಾಂತ್ ಸೂಚನೆ | INDIA Bloc 
ದೇಶ

ಚುನಾವಣಾ ಆಯೋಗದ ವಿರುದ್ಧದ ಅರ್ಜಿ: 14 ದೋಷಗಳನ್ನು ಸರಿಪಡಿಸುವಂತೆ ಸಿಜೆಐ ಸೂರ್ಯಕಾಂತ್ ಸೂಚನೆ | INDIA Bloc

ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿದ ಸೂರ್ಯಕಾಂತ್​, ಅರ್ಜಿಯಲ್ಲಿರುವ ದೋಷಗಳನ್ನು ಈ ಕೂಡಲೇ ಸರಿಪಡಿಸುವಂತೆ ತಿಳಿಸಿದ್ದು, ತಿದ್ದುಪಡಿ ಮಾಡಿದ ಬಳಿಕವೇ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯ ವಿರುದ್ಧ ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆದ ಬೃಹತ್​ ಪ್ರತಿಭಟನೆ ಹಾಗೂ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಇಂಡಿಯಾ (INDIA) ಒಕ್ಕೂಟ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ಮಂಗಳವಾರ ಮಹತ್ವದ ಸೂಚನೆಯನ್ನೇ ನೀಡಿದ್ದಾರೆ.

ಎಸ್​ಐಆರ್​ ಪ್ರಕ್ರಿಯೆ ಹಾಗೂ ಅಧಿಕಾರಿಗಳ ವಿರುದ್ಧ ವೋಟ್​ ಚೋರಿ ಆರೋಪ ಹೊರಿಸಿರುವ ಇಂಡಿಯಾ ಮೈತ್ರಿಕೂಟ, ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿದ ಸೂರ್ಯಕಾಂತ್​, ಅರ್ಜಿಯಲ್ಲಿರುವ ದೋಷಗಳನ್ನು ಈ ಕೂಡಲೇ ಸರಿಪಡಿಸುವಂತೆ ತಿಳಿಸಿದ್ದು, ತಿದ್ದುಪಡಿ ಮಾಡಿದ ಬಳಿಕವೇ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ರಿಜಿಸ್ಟ್ರಿ ಪತ್ತೆಹಚಿದ ದೋಷಗಳೇನು?

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಮತದಾರರ ಹೆಸರು ಅಳಿಸಿ ಹಾಕುವುದು ಹಾಗೂ ಚುನಾವಣಾ ಅಕ್ರಮಗಳ ಆರೋಪ ಹೊರಿಸಿ ಇಂಡಿಯಾ ಒಕ್ಕೂಟವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ಹಿಂದಿನ ದಿನವೇ ನ್ಯಾಯಾಲಯದ ರಿಜಿಸ್ಟ್ರಿಯು ಈ ಅರ್ಜಿಯಲ್ಲಿ 14 ತಾಂತ್ರಿಕ ದೋಷಗಳನ್ನು ಪತ್ತೆಹಚಿತ್ತು.

ಪಿಟಿಐ ವರದಿ ಪ್ರಕಾರ, ಸಹ-ಅರ್ಜಿದಾರರಾಗಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸ್ಪಷ್ಟವಾದ ಗುರುತಿನ ಚೀಟಿಯ ಪ್ರತಿ ಸಲ್ಲಿಸುವಂತೆ ವಕೀಲರಿಗೆ ಸೂಚಿಸಲಾಗಿತ್ತು. ಇದರೊಂದಿಗೆ, ಓದಲು ಅಸಾಧ್ಯವಾದ ಅಥವಾ ಕಾಣೆಯಾದ ಪುಟಗಳು ಹಾಗೂ ನ್ಯಾಯಾಲಯದ ಶುಲ್ಕದಲ್ಲಿ 220 ರೂ. ಕೊರತೆ ಇರುವುದನ್ನು ರಿಜಿಸ್ಟ್ರಿ ಎತ್ತಿ ತೋರಿಸಿತ್ತು.

ಸಂಜಯ್ ರಾವತ್ ಪ್ರತಿಕ್ರಿಯೆ

ರಿಜಿಸ್ಟ್ರಿಯ ಈ ಅಂಶಗಳ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಈ ತಾಂತ್ರಿಕ ತಪ್ಪುಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಅದರಲ್ಲಿ ಕೆಲವು ದೋಷಗಳಿರಬಹುದು. ಅದನ್ನು ನಾವು ಈಗ ಸರಿಪಡಿಸುತ್ತೇವೆ ಎಂದ ಅವರು, ನಿನ್ನೆಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಪಕ್ಷಗಳೂ ಈ ಅರ್ಜಿಯ ಅರ್ಜಿದಾರರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರಮುಖ ಅಂಶಗಳೇನು?

ಸೋಮವಾರ ರಾಹುಲ್ ಗಾಂಧಿ ಸೇರಿದಂತೆ ಇತರೆ ವಿಪಕ್ಷ ನಾಯಕರು ಸುಪ್ರೀಂ ಕೋರ್ಟ್‌ ವರೆಗೆ ರ್ಯಾಲಿಯಲ್ಲಿ ಭಾಗಿಯಾಗಿ ಈ ಅರ್ಜಿಯನ್ನು ಸಲ್ಲಿಸಿದರು. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಪಕ್ಷಗಳು ಕೋರಿವೆ.

ಎಸ್​ಐಆರ್ ​ಪ್ರಕ್ರಿಯೆ ರದ್ದತಿಗೆ ಕೋರಿಕೆ

ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಪ್ರಶ್ನಿಸದೆಯೇ, ಅದನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಮತ್ತು ಪಂಜಾಬ್ ಸೇರಿದಂತೆ ಮುಂಬರುವ ಚುನಾವಣೆ ನಡೆಯಲಿರುವ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರನ್ನು ಸೇರಿಸಲು ಕ್ರಮ ಕೈಗೊಳ್ಳುವಂತೆ ನಾಯಕರು ಮನವಿ ಮಾಡಿದ್ದಾರೆ.

ಯಾರೆಲ್ಲ ಪ್ರಮುಖ ಅರ್ಜಿದಾರರು?

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿಯ ಸೌಗತ ರಾಯ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆರ್‌ಜೆಡಿಯ ತೇಜಸ್ವಿ ಯಾದವ್, ಶಿವಸೇನೆಯ (ಯುಬಿಟಿ) ಸಂಜಯ್ ರಾವತ್, ಸಿಪಿಎಂನ ಎಂ.ಎ. ಬೇಬಿ, ಸಿಪಿಐನ ಡಿ. ರಾಜಾ, ಜೆಎಂಎಂನ ಮಹುವಾ ಮಾಝಿ, ಎನ್‌ಸಿಪಿ (ಎಸ್‌ಪಿ)ಯ ಸುಪ್ರಿಯಾ ಸುಳೆ ಹಾಗೂ ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್ ಸೇರಿದಂತೆ ಪ್ರಮುಖ ನಾಯಕರು ಈ ಅರ್ಜಿದಾರರ ಪಟ್ಟಿಯಲ್ಲಿದ್ದಾರೆ,(ಏಜೆನ್ಸೀಸ್).