ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ಸಿಂಗ್
ಬೆಂಗಳೂರು: ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ( Confident Group Chairman ) ಸಿ.ಜೆ. ರಾಯ್ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ಬಳಿಕ ಕಮಿಷನರ್ ಸೀಮಂತ್ ಕುಮಾರ್ ಮಾತನಾಡಿದ್ದು, ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಒಂದು ಪ್ರಕರಣ ದಾಖಲಾಗಿದೆ. ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದೆ. ಸಿ.ಜೆ.ರಾಯ್ ಕುಟುಂಬಸ್ಥರು ಯಾರು ಬೆಂಗಳೂರಿನಲ್ಲಿ ಇಲ್ಲ, ಹೊರ ದೇಶದಲ್ಲಿದ್ದಾರೆ. ಅವರಿಗೆ ಮಾಹಿತಿ ನೀಡಲಾಗಿದೆ. ಕುಟುಂಬಸ್ಥರು ಬರುತ್ತಿದ್ದಾರೆ. ಕಂಪನಿಯ ಡೈರಕ್ಟರ್ ಒಬ್ಬರು ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಸದ್ಯಕ್ಕೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದೇವೆ. ತನಿಖೆ ಮಾಡಿ ಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಯುಡಿಆರ್ ದಾಖಲಿಸಬೇಕಾ? ಇಲ್ಲ ಆತ್ಮಹತ್ಯೆಗೆ ಪ್ರಚೋದನೆ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕಾ? ಎಂಬುದನ್ನು ದೂರಿನ ಆಧಾರದ ಮೇಲೆ ನಿರ್ಧರಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದೆ. ಕಳೆದ ಮೂರು ದಿನಗಳಿಂದ ಕೇರಳದ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ನಮ್ಮ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಐಟಿ ಆಧಿಕಾರಿಗಳ ಜೊತೆ ಸಂಪರ್ಕ ಮಾಡಿ ಮಾಹಿತಿ ಪಡೆಯಲಿದ್ದಾರೆ ಎಂದಿದ್ದಾರೆ.
ಘಟನೆ ನಡೆದಿದ್ದೇನು?
ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಇಂದು (ಜ.30) ನಡೆದಿದೆ. ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಶೋಧ ನಡೆಸುತ್ತಿರುವ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನ 3.45ರ ಸುಮಾರಿಗೆ ಆನೇಪಾಳ್ಯ ಬಳಿಯ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಶೋಕನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಐಟಿ ದಾಳಿ ವೇಳೆ ಸಿ.ಜೆ.ರಾಯ್ ಕಚೇರಿಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಅವರು ಕುಟುಂವಸ್ಥರು ಹೊರದೇಶದಲ್ಲಿದ್ದರು ಮಾಹಿತಿ ನೀಡಲಾಗಿದೆ. ಇನ್ನೂ ಕಾನ್ಫಿಡೆಂಟ್ ಗ್ರೂಪ್ ಮೇಲೆ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಹಲವು ಬಾರಿ ಐಟಿ ದಾಳಿ ನಡೆದಿತ್ತು. ಇಂದು ಕೂಡ ದಾಳಿ ನಡೆದಿತ್ತು. ಒಂದೆಡೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುವಾಗ ಇನ್ನೊಂದೆಡೆ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಿ.ಜೆ. ರಾಯ್ ಸಾವಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಐಟಿ ಅಧಿಕಾರಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಯಾರು ಈ ಸಿ.ಜೆ.ರಾಯ್?
ಡಾ. ಸಿ.ಜೆ. ರಾಯ್, ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಚೇರ್ಮನ್. ಬೆಂಗಳೂರಿನಲ್ಲಿ ಜನಿಸಿ ಬೆಳೆದ ಕೇರಳ ಮೂಲದ ಉದ್ಯಮಿ. ಫ್ರಾನ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶಿಕ್ಷಣ ಪಡೆದು, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಹೆವ್ಲೆಟ್-ಪ್ಯಾಕರ್ಡ್‌ನಂತಹ 500 ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ, ಭಾರತದಲ್ಲಿ ತಮ್ಮದೇ ಆದ ವ್ಯಾಪಾರವನ್ನು ಆರಂಭಿಸಿ, ಕಾನ್ಫಿಡೆಂಟ್ ಗ್ರೂಪ್ ಅನ್ನು ಸ್ಥಾಪಿಸಿದರು.
ಕಾನ್ಫಿಡೆಂಡ್ ಗ್ರೂಪ್, ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿದೆ. ಬೆಂಗಳೂರು, ಕೇರಳ ಮತ್ತು ಯುಎಇಯಲ್ಲಿ ವ್ಯಾಪಕವಾದ ಯೋಜನೆಗಳನ್ನು ಅಭಿವೃದ್ಧಿಪಡಿಸಿ, ಶೂನ್ಯ ಸಾಲದ ಮಾದರಿ, ನಾವೀನ್ಯತೆಯ ಗೃಹ ವಿನ್ಯಾಸಗಳು ಮತ್ತು ಗುಣಮಟ್ಟದ ಮೇಲೆ ನೀಡುವ ಪ್ರಾಮುಖ್ಯತೆಯಿಂದಾಗಿ ಈ ಕಂಪನಿ ಪ್ರಸಿದ್ಧಿ ಪಡೆದಿದೆ.
ರಿಯಲ್ ಎಸ್ಟೇಟ್ ಹೊರತುಪಡಿಸಿ, ಹಾಸ್ಪಿಟಾಲಿಟಿ, ಮನರಂಜನೆ, ಶಿಕ್ಷಣ, ಏವಿಯೇಷನ್ ಮತ್ತು ಇತರ ಕ್ಷೇತ್ರಗಳಲ್ಲಿಯೂ ಸಿ.ಜೆ. ರಾಯ್ ಅವರು ಉದ್ಯಮವನ್ನು ವಿಸ್ತರಿಸಿದ್ದರು. ಸಿನಿಮಾ ನಿರ್ಮಾಣದಲ್ಲೂ ಭಾಗಿಯಾಗಿದ್ದರು. ಅಂತರರಾಷ್ಟ್ರೀಯ ಕ್ರೀಡಾ ಪ್ರಾಯೋಜಕತ್ವಗಳ ಮೂಲಕವೂ ಗುರುತಿಸಿಕೊಂಡಿದ್ದರು.