Sonam Wangchuk | ಸಿವಿಲಿಯನ್ ಡ್ರೆಸ್, ಬಿಳಿ ಪರದೆಯ ಮರೆ!...ಜಂತರ್ ಮಂತರ್‌ನಲ್ಲಿ ನಡೆದ ವಾಂಗ್ಚುಕ್ ಸೈಲೆಂಟ್ ಆಪರೇಷನ್‌ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ! 
ದೇಶ

ಸಿವಿಲಿಯನ್ ಡ್ರೆಸ್, ಬಿಳಿ ಪರದೆಯ ಮರೆ!...ಜಂತರ್ ಮಂತರ್‌ನಲ್ಲಿ ನಡೆದ ವಾಂಗ್ಚುಕ್ ಸೈಲೆಂಟ್ ಆಪರೇಷನ್‌ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ! | Sonam Wangchuk

ನವದೆಹಲಿ: ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ಅವರನ್ನು ದೆಹಲಿ ಪೊಲೀಸರು ಶನಿವಾರ ಮುಂಜಾನೆ ವೈದ್ಯಕೀಯ ಕಾರಣಗಳ ಮೇರೆಗೆ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದ್ದಾರೆ.
ಶನಿವಾರ ಮುಂಜಾನೆ ಸೋನಮ್ ವಾಂಗ್ಚುಕ್ ಜಂತರ್ ಮಂತರ್‌ನಲ್ಲಿ ಇತರ ಪ್ರತಿಭಟನಾಕಾರರೊಂದಿಗೆ ಕುಳಿತಿದ್ದಾಗ, ದೆಹಲಿ ಪೊಲೀಸರು ಯಾವುದೇ ಮುನ್ಸೂಚನೆ ನೀಡದೆ ದಿಢೀರನೆ ಸ್ಥಳಕ್ಕೆ ಆಗಮಿಸಿದರು. ವಿಶೇಷವೆಂದರೆ, ಪೊಲೀಸರು ಯೂನಿಫಾರ್ಮ್ ಧರಿಸದೆ, ಸಿವಿಲಿಯನ್ ಡ್ರೆಸ್‌ನಲ್ಲಿ ಬಂದಿದ್ದರು. ಅವರಲ್ಲಿ ಹೆಚ್ಚಿನವರು ನೀಲಿ ಅಥವಾ ಬಿಳಿ ಬಣ್ಣದ ಶರ್ಟ್‌ಗಳನ್ನು ಧರಿಸಿದ್ದರೆ, ಇನ್ನು ಕೆಲವರು ಹಳದಿ, ಕಿತ್ತಳೆ ಅಥವಾ ಕಪ್ಪು ಬಣ್ಣದ ಟಿ-ಶರ್ಟ್‌ಗಳನ್ನು ಧರಿಸಿದ್ದರು.
ಯಾರೂ ಊಹಿಸದ ರೀತಿಯಲ್ಲಿ ಪ್ರತಿಭಟನಾ ಸ್ಥಳದ ಸುತ್ತಲೂ ಬಿಗಿ ಭದ್ರತೆಯನ್ನು ನಿಯೋಜಿಸಿದ ಪೊಲೀಸರು, ಬಿಳಿ ಬಣ್ಣದ ದೊಡ್ಡ ಶೀಟ್‌ಗಳನ್ನು ಅಡ್ಡಲಾಗಿ ಹಿಡಿದು, ಪರಿಸ್ಥಿತಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯದಂತೆ ಮಾಡುವ ಮೂಲಕ ಅತ್ಯಂತ ವೇಗವಾಗಿ ವಾಂಗ್ಚುಕ್​​​ರನ್ನು ಅಲ್ಲಿಂದ ಕರೆದೊಯ್ದರು.
ಈ ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ಪೊಲೀಸರ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗುತ್ತಾ ಪೊಲೀಸರ ವಾಹನವನ್ನು ತಡೆಯಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಣ್ಣ ಮಟ್ಟದ ಗದ್ದಲ ಮತ್ತು ತಳ್ಳಾಟ-ನೂಕಾಟ ನಡೆಯಿತು. ಈ ಅಡೆತಡೆಗಳ ನಡುವೆಯೂ ವಾಂಗ್ಚುಕ್​​ರನ್ನು ಪೊಲೀಸರು ಅತ್ಯಂತ ಸುರಕ್ಷಿತವಾಗಿ ಮತ್ತು ಶಾಂತಿಯುತವಾಗಿ ಆಸ್ಪತ್ರೆಗೆ ರವಾನಿಸಿದರು. ಪೊಲೀಸರು ಈ ಇಡೀ ಕಾರ್ಯಾಚರಣೆಯ ಸಮಯದಲ್ಲಿ ಗರಿಷ್ಠ ಮಟ್ಟದ ಸಂಯಮವನ್ನು ಪ್ರದರ್ಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋನಮ್ ವಾಂಗ್ಚುಕ್​​ರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಸದ್ಯಕ್ಕೆ ವಾಂಗ್ಚುಕ್ ಪ್ರಜ್ಞಾವಸ್ಥೆಯಲ್ಲಿದ್ದಾರೆ ಮತ್ತು ಅವರ ದೇಹದ ಪ್ರಮುಖ ಆರೋಗ್ಯದ ಲಕ್ಷಣಗಳು ಸ್ಥಿರವಾಗಿವೆ ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ದೆಹಲಿ ಪೊಲೀಸರ ಅಧಿಕೃತ ಹೇಳಿಕೆಯಲ್ಲೇನಿದೆ..?

ಈ ಕಾರ್ಯಾಚರಣೆಯ ಕುರಿತು ಅಧಿಕೃತ ಎಕ್ಸ್​ ಖಾತೆಯ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ದೆಹಲಿ ಪೊಲೀಸರು, ಸೋನಮ್ ವಾಂಗ್ಚುಕ್ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ, ಮಾನ್ಯ ಹೈಕೋರ್ಟ್‌ನ ಆದೇಶಗಳು ಮತ್ತು ವೈದ್ಯಕೀಯ ತಜ್ಞರ ಸಲಹೆಗೆ ಅನುಗುಣವಾಗಿ ಅವರನ್ನು ಅಗತ್ಯ ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೈಕೋರ್ಟ್ ಆದೇಶವನ್ನು ಪಾಲಿಸುವಾಗ ಪ್ರತಿಭಟನಾಕಾರರು ಅಡ್ಡಿಪಡಿಸಲು ಯತ್ನಿಸಿದ್ದರಿಂದ ಸಣ್ಣ ಮಟ್ಟದ ಗದ್ದಲ ಉಂಟಾಯಿತು. ಆದಾಗ್ಯೂ, ಪೊಲೀಸರು ಗರಿಷ್ಠ ಸಂಯಮವನ್ನು ಕಾಯ್ದುಕೊಂಡು ಈ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ, ಜಂತರ್ ಮಂತರ್‌ನಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರು ಆದಷ್ಟು ಬೇಗ ಶಾಂತಿಯುತವಾಗಿ ಜಾಗವನ್ನು ಖಾಲಿ ಮಾಡಬೇಕೆಂದು ಪೊಲೀಸರು ಆದೇಶಿಸಿದ್ದಾರೆ.

ಅಂಗಾಂಗ ವೈಫಲ್ಯದ ಭೀತಿ!...

ಕಳೆದ 20 ದಿನಗಳಿಂದ ಆಹಾರ ತ್ಯಜಿಸಿರುವ ಸೋನಮ್ ವಾಂಗ್ಚುಕ್ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರ ಹಂತ ತಲುಪಿದೆ. ಕೇವಲ ಎರಡು ದಿನಗಳ ಹಿಂದಿನ ವೈದ್ಯಕೀಯ ವರದಿಯ ಪ್ರಕಾರ ಅವರು ಈಗಾಗಲೇ 8 ಕೆಜಿಗಿಂತ ಹೆಚ್ಚು ತೂಕ ಕಳೆದುಕೊಂಡಿದ್ದರು. ಶುಕ್ರವಾರ ವಾಂಗ್ಚುಕ್ ಆರೋಗ್ಯವನ್ನು ಪರೀಕ್ಷಿಸಿದ್ದ ವೈದ್ಯರು, ಇದು ಅತ್ಯಂತ ತುರ್ತು ಪರಿಸ್ಥಿತಿಯಾಗಿದ್ದು ಅವರ ದೇಹದ ಪ್ರಮುಖ ಅಂಗಾಂಗಗಳು ವೈಫಲ್ಯ ಕಾಣುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ದೆವ್ವವಾಗಿ ಬರುತ್ತೇನೆ ಎಂದಿದ್ದ ವಾಂಗ್ಚುಕ್!...

ತಮ್ಮ ಆರೋಗ್ಯ ದಿನೇದಿನೇ ಹದಗೆಡುತ್ತಿದ್ದರೂ ಹೋರಾಟದ ಹಾದಿಯಿಂದ ಹಿಂದೆ ಸರಿಯದ ವಾಂಗ್ಚುಕ್, ಆಸ್ಪತ್ರೆಗೆ ದಾಖಲಾಗುವ ಮುನ್ನ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ನಾನು ಹೊರಗಿನಿಂದ ದಣಿದಿರಬಹುದು, ಆದರೆ ಒಳಗಿನಿಂದ ತುಂಬಾ ಗಟ್ಟಿಯಾಗಿದ್ದೇನೆ. ನೀವು ಕೂಡ ಒಳಗೂ ಹೊರಗೂ ಅಷ್ಟೇ ಗಟ್ಟಿಯಾಗಿದ್ದೀರಿ ಎಂದು ನಂಬಿದ್ದೇನೆ ಎಂದಿದ್ದರು.
ಮುಂದುವರೆದು ಮಾತನಾಡಿದ್ದ ವಾಂಗ್ಚುಕ್​, ಜುಲೈ 20 ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಂದು ನಾವು ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸಲಿದ್ದೇವೆ. ನಮ್ಮೆಲ್ಲರ ಶಕ್ತಿ ಅಂದು ಪ್ರದರ್ಶನವಾಗಬೇಕಿದೆ. ಎಲ್ಲರೂ ಒಟ್ಟಾಗಿ ಹೋಗಿ ಪ್ರಜಾಪ್ರಭುತ್ವದ ದೇಗುಲದ ಮುಂದೆ ನಮ್ಮ ಅಹವಾಲನ್ನು ಇಡಲಿದ್ದೇವೆ. ಯಾವುದೇ ಪರಿಸ್ಥಿತಿಯಲ್ಲೂ ನಾನು ಜುಲೈ 20 ರವರೆಗೆ ಬದುಕಿರುತ್ತೇನೆ. ಒಂದು ವೇಳೆ ಜಾಥಾ ಯಶಸ್ವಿಯಾಗದಿದ್ದರೆ, ನಾನು ದೆವ್ವವಾಗಿ ಹಿಂತಿರುಗಿ ಬರುತ್ತೇನೆ ಎಂದಿದ್ದರು.
ಸದ್ಯ ಜಂತರ್ ಮಂತರ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು, ಜುಲೈ 20 ರ ಸಂಸತ್ ಚಲೋ ಪ್ರತಿಭಟನೆಯ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ(ಏಜೆನ್ಸೀಸ್​).