ನವದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR Report) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ಬಿಡುಗಡೆ ಮಾಡಿದ ವರದಿಯೊಂದು ದೇಶದ ಮುಖ್ಯಮಂತ್ರಿಗಳಲ್ಲಿ ಅರ್ಧದಷ್ಟು ಜನರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ವರದಿಯ ಸಂಶೋಧನೆಗಳ ಪ್ರಕಾರ, 31 ಮುಖ್ಯಮಂತ್ರಿಗಳಲ್ಲಿ 14 (ಶೇ. 45) ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.
ತೆಲಂಗಾಣದ ರೇವಂತ್ ರೆಡ್ಡಿ 89 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಬಹಿರಂಗಪಡಿಸಿದೆ. ಪಶ್ಚಿಮ ಬಂಗಾಳದ ಸುವೇಂಧು ಅಧಿಕಾರಿ 29 ಪ್ರಕರಣಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ನಮ್ಮ ರಾಜ್ಯದ ಸಿಎಂ ಡಿ ಕೆ ಶಿವಕುಮಾರ್ 19 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಕ್ರಿಮಿನಲ್ ಪ್ರಕರಣ ಹೊಂದಿರುವ 14 ಮುಖ್ಯಮಂತ್ರಿಗಳ ಪೈಕಿ 11 ಸಿಎಂಗಳ ಮೇಲೆ ಲಂಚ ಸ್ವೀಕಾರ, ಬೆದರಿಕೆ ಹಾಗೂ ಕೊಲೆಯತ್ನದಂತಹ ಗಂಭೀರ ಆರೋಪಗಳಿವೆ. ಸುವೇಂಧು ಅಧಿಕಾರಿ ಮತ್ತು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರ ವಿರುದ್ಧ ಕೊಲೆಯತ್ನ ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ ಪಂಜಾಬ್‌ನ ಭಗವಂತ್ ಮಾನ್, ಸಿಕ್ಕಿಂನ ಪಿ.ಎಸ್. ತಮಾಂಗ್, ಒಡಿಶಾದ ಮೋಹನ್ ಚರಣ್ ಮಾಝಿ ಹಾಗೂ ರಾಜಸ್ಥಾನದ ಭಜನ್ ಲಾಲ್ ಶರ್ಮಾ ವಿರುದ್ಧ ತಲಾ ಒಂದೊಂದು ಪ್ರಕರಣವಿದೆ.
ತಮಿಳುನಾಡಿನ ಸಿ. ಜೋಸೆಫ್ ವಿಜಯ್, ಮೋಹನ್ ಚರಣ್ ಮಾಝಿ ಮತ್ತು ಭಜನ್ ಲಾಲ್ ಶರ್ಮಾ ಅವರ ಮೇಲೆ ಯಾವುದೇ ಗಂಭೀರ ಆರೋಪಗಳಿಲ್ಲ. ಪ್ರಸ್ತುತ ದೇಶದ 22 ರಾಜ್ಯಗಳಲ್ಲಿ ಎನ್‌ಡಿಎ ಆಡಳಿತದಲ್ಲಿದ್ದರೂ, ಅತ್ಯಂತ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಮೊದಲ ಐದು ಸಿಎಂಗಳ ಪಟ್ಟಿಯಲ್ಲಿ ಸುವೇಂಧು ಅಧಿಕಾರಿ ಮಾತ್ರ ಬಿಜೆಪಿಯವರಾಗಿದ್ದು, ಉಳಿದವರು ಕಾಂಗ್ರೆಸ್ ಹಾಗೂ ಅದರ ಮೈತ್ರಿಕೂಟದ ನಾಯಕರಾಗಿದ್ದಾರೆ. ಈ ಎಲ್ಲಾ ಪ್ರಕರಣಗಳು ಸದ್ಯ ನ್ಯಾಯಾಲಯದ ವಿಚಾರಣಾ ಹಂತದಲ್ಲಿವೆ.
ಆಸ್ತಿ ರೇಸ್ನಲ್ಲಿ ನಮ್ಮ ಸಿಎಂ ಮುಂದು!..
ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 118.07 ಕೋಟಿ ರೂಪಾಯಿಗಳಷ್ಟಿದೆ. ವಿಶ್ಲೇಷಿಸಲಾದ 31 ಮುಖ್ಯಮಂತ್ರಿಗಳಲ್ಲಿ, ನಾಲ್ವರು (ಶೇ. 13) 100 ಕೋಟಿ ರೂಪಾಯಿಗಳನ್ನು ಮೀರಿದ ಘೋಷಿತ ಆಸ್ತಿಯನ್ನು ಹೊಂದಿರುವ ಶತಕೋಟ್ಯಾಧಿಪತಿಗಳಾಗಿದ್ದಾರೆ. ಸಿಎಂ ಡಿ ಕೆ ಶಿವಕುಮಾರ್ 1,413 ಕೋಟಿ ರೂಪಾಯಿಗಿಂತ ಹೆಚ್ಚಿನ ಒಟ್ಟು ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ನಾಯಕರಾಗಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಅವರ ನಂತರ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (931 ಕೋಟಿ+ ರೂ.), ತಮಿಳುನಾಡಿನ ಸಿ ಜೋಸೆಫ್ ವಿಜಯ್ (648 ಕೋಟಿ+ ರೂ.) ಮತ್ತು ಅರುಣಾಚಲ ಪ್ರದೇಶದ ಪೆಮಾ ಖಂಡು (332 ಕೋಟಿ+ ರೂ.) ನಂತರದ ಸ್ಥಾನದಲ್ಲಿದ್ದಾರೆ.
ಪ್ರತಿ ಮುಖ್ಯಮಂತ್ರಿಯ ಸರಾಸರಿ ಆಸ್ತಿ 118.07 ಕೋಟಿ ರೂಪಾಯಿಗಳಷ್ಟಿದೆ. 31 ಮುಖ್ಯಮಂತ್ರಿಗಳಲ್ಲಿ, ನಾಲ್ವರು (ಶೇ. 13) 100 ಕೋಟಿ ರೂಪಾಯಿಗಳನ್ನು ಮೀರಿದ ಘೋಷಿತ ಆಸ್ತಿಯನ್ನು ಹೊಂದಿರುವ ಶತಕೋಟ್ಯಾಧಿಪತಿಗಳಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ 55.24 ಲಕ್ಷ ರೂಪಾಯಿಗಳ ಅತ್ಯಂತ ಕಡಿಮೆ ಆಸ್ತಿಯನ್ನು ಘೋಷಿಸಿದ್ದಾರೆ, ಅವರ ನಂತರ ಪಶ್ಚಿಮ ಬಂಗಾಳದ ಸುವೇಂಧು ಅಧಿಕಾರಿ (85.87 ಲಕ್ಷ ರೂ.) ಇದ್ದಾರೆ. ಮೌಲ್ಯಮಾಪನ ಮಾಡಲಾದ 31 ಮುಖ್ಯಮಂತ್ರಿಗಳಲ್ಲಿ, ರೇಖಾ ಗುಪ್ತಾ (ದೆಹಲಿ) ಏಕೈಕ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ
ಹೆಚ್ಚಿನ ಮುಖ್ಯಮಂತ್ರಿಗಳು ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ. ಸ್ನಾತಕೋತ್ತರ ಪದವೀಧರರು ಶೇ. 29 (ಒಂಬತ್ತು) ರಷ್ಟಿದ್ದು, ಅತಿದೊಡ್ಡ ವಿಭಾಗವಾಗಿದ್ದಾರೆ, ಅವರ ನಂತರ ಪದವೀಧರರು ಶೇ. 23 (ಏಳು), ವೃತ್ತಿಪರ ಪದವೀಧರರು ಶೇ. 19 (ಆರು), ಡಾಕ್ಟರೇಟ್ ಪಡೆದವರು ಶೇ. 10 (ಮೂರು) ಮತ್ತು 10 ಅಥವಾ 12ನೇ ತರಗತಿ ಉತ್ತೀರ್ಣರಾದವರು ಉಳಿದ ಭಾಗವಾಗಿದ್ದಾರೆ. ಪ್ರಸ್ತುತ ಅಧಿಕಾರದಲ್ಲಿರುವ ಎಲ್ಲಾ 31 ಮುಖ್ಯಮಂತ್ರಿಗಳು ತಮ್ಮ ತಮ್ಮ ಕೊನೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಸ್ವಯಂ-ಪ್ರಮಾಣಿಕರಿಸಿದ ಅಫಿಡವಿಟ್‌ಗಳನ್ನ ಆಧರಿಸಿದ ಈ ವಿಶ್ಲೇಷಣೆಯು ಭಾರತದ 28 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅವರ ಕ್ರಿಮಿನಲ್ ಹಿನ್ನೆಲೆ, ಹಣಕಾಸಿನ ಸ್ಥಿತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಗಮನಾರ್ಹ ವಿವರಗಳನ್ನು ಬೆಳಕಿಗೆ ತಂದಿದೆ. ಎಡಿಆರ್ ವರದಿಯು ಪಾರದರ್ಶಕ, ಪರಿಶೀಲಿಸಿದ ಸ್ವಯಂ-ಬಹಿರಂಗಪಡಿಸುವಿಕೆಗಳನ್ನು ನೇರವಾಗಿ ಮತದಾರರಿಗೆ ತಲುಪಿಸುವ ಗುರಿಯನ್ನು ಹೊಂದಿದೆ(ಏಜೆನ್ಸೀಸ್).