ನವದೆಹಲಿ: ನೀಟ್ ಪರೀಕ್ಷೆ ಅಕ್ರಮ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ನಾಳೆ(ಜು. 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಯೋಜಿಸಿರುವ 'ಚಲೋ ಸಂಸದ್'(Chalo Sansad) ಯಾತ್ರೆಗೆ ಅನುಮತಿ ನೀಡಲಾಗಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ದೆಹಲಿ ಪೊಲೀಸರು, ಸಿಜೆಪಿ ಪ್ರಸ್ತಾಪಿಸಿರುವ 'ಚಲೋ ಸಂಸದ್' ಯಾತ್ರೆಗೆ ಪಕ್ಷ ಅನುಮತಿ ಕೋರಿಲ್ಲ. ನವದೆಹಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಬಿಎನ್‌ಎಸ್‌ಎಸ್ ಸೆಕ್ಷನ್ 163 ಜಾರಿಯಲ್ಲಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಿನಲ್ಲಿ ಇರಬಾರದು ಮತ್ತು ರ್ಯಾಲಿಗಳು, ಪ್ರತಿಭಟನೆಗಳು ಮತ್ತು ಮೆರವಣಿಗೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ, ಪೂರ್ವಾನುಮತಿಯೊಂದಿಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಬಹುದು. ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 20 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ನಿಷೇಧಾಜ್ಞೆಗಳನ್ನು ಉಲ್ಲಂಘಿಸುವವರ ವಿರುದ್ಧ ಬಿಎನ್ಎಸ್ ಸೆಕ್ಷನ್ 223 ಮತ್ತು ಇತರ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜನರು ಕಾನೂನನ್ನು ಗೌರವಿಸಬೇಕು ಮತ್ತು ಅನಧಿಕೃತ ರ್ಯಾಲಿಗಳು ಅಥವಾ ಕೂಟಗಳನ್ನು ನಡೆಸಬಾರದು. ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಸಹಕರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಇನ್ನೂ ದೆಹಲಿ ನಗರದಾದ್ಯಂತ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಬ್ಯಾರಿಕೇಡ್‌ಗಳು, ವಾಹನ ತಪಾಸಣೆ ಮತ್ತು ಪಿಕೆಟ್‌ಗಳನ್ನು ಸ್ಥಾಪಿಸಲಾಗಿದೆ. ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.
ಯಾತ್ರೆ ನಡೆಯಲಿದೆ ಎಂದ ದೀಪ್ಕೆ
ಇನ್ನೂ ಯಾತ್ರೆ ಎಂದಿನಂತೆ ನಡೆಯಲಿದೆ ಎಂದು ಜಿರಳೆ ಜನತಾ ಪಕ್ಷದ ನಾಯಕ ಅಭಿಜಿತ್ ದೀಪ್ಕೆ ಹೇಳಿದ್ದು, ಜಂತರ್ ಮಂತರ್ ನಿಂದ ಸಂಸತ್ತಿನವರೆಗೆ ಈ ಚಲೋ ಸಂಸದ್ ನಡೆಯಲಿದೆ ಎಂದಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆಯನ್ನು ತೆಗೆದುಕೊಂಡಿದ್ದಾರೆ (ಏಜೆನ್ಸೀಸ್).