ನವದೆಹಲಿ: ಎಸ್‌ಐಆರ್ ವಿವಾದ ಮತ್ತು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸೇರಿ ವಿಪಕ್ಷಗಳು ಮತ್ತು ಸಿಜೆಪಿ ದೇಶಾದ್ಯಂತ ಪ್ರತಿಭಟನೆ ಜೋರು ಮಾಡುತ್ತಿರುವ ಹಿನ್ನೆಲೆ ಗುರುವಾರ(ಅ. 08) ಕೇಂದ್ರ ಸರ್ಕಾರ ಸಿಇಸಿ ಜ್ಞಾನೇಶ್ ಕುಮಾರ್ ಅವರ ಭದ್ರತೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಚುನಾವಣಾ ಆಯುಕ್ತರಿಗೆ ವಿಐಪಿ ಭದ್ರತೆ ನೀಡಲಾಗಿದ್ದು, ಅದರ ಜೊತೆ ಹೆಚ್ಚುವರಿಯಾಗಿ ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಿದೆ. ಇತ್ತೀಚೆಗೆ ದೆಹಲಿ ಮತ್ತು ಆಗ್ರಾದಲ್ಲಿರುವ ಅವರ ನಿವಾಸದಲ್ಲಿ ಮುಂದೆ ಕೆಲವು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ ಹಿನ್ನೆಲೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ದೆಹಲಿ, ಆಗ್ರಾದಲ್ಲಿರುವ ಅವರ ನಿವಾಸಗಳು ಮತ್ತು ಚುನಾವಣಾ ಆಯೋಗದ ಪ್ರಧಾನ ಕಚೇರಿಯಲ್ಲಿನ ಭದ್ರತಾ ಸಿಬ್ಬಂದಿಯಲ್ಲೂ ಹೆಚ್ಚುವರಿಯಾಗಿ ಸಿಐಎಸ್‌ಎಫ್, ಸಿಆರ್‌ಪಿಎಫ್, ಆರ್‌ಪಿಎಫ್ ಹಾಗೂ ದೆಹಲಿ ಪೊಲೀಸರನ್ನು ನೇಮಿಸಲಾಗಿದೆ.
ಮತ್ತೊಂದೆಡೆ, ಭದ್ರತಾ ಕಾರಣಗಳಿಂದಾಗಿ ಸಿಇಸಿ ಜ್ಞಾನೇಶ್ ಕುಮಾರ್ ಅವರು ಛತ್ತೀಸ್‌ಗಢ ಭೇಟಿಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಕಾಲ ಅವರು ಛತ್ತೀಸ್ಗಢಕ್ಕೆ ಭೇಟಿ ನೀಡಬೇಕಿತ್ತು. ಆದರೆ ಚುನಾವಣಾ ಆಯೋಗ ಅವರ ಭೇಟಿಯನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿ ಮುಂದೂಡಿದೆ ಎನ್ನಲಾಗಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಮತ್ತು ಆದೇಶಗಳನ್ನು ತಮ್ಮ ಗಮನಕ್ಕೆ ತರದೇ ಮತ್ತು ಒಪ್ಪಿಗೆ ಪಡೆಯದೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಇತರೆ ಇಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಮತ್ತು ಈ ಕುರಿತಂತೆ ಕಳೆದ 10 ತಿಂಗಳಲ್ಲಿ 14 ಬಾರಿ ಅಧಿಕೃತ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ತನಿಖಾ ವರದಿ ಬಿತ್ತರವಾದ ಬಳಿಕ ವಿಪಕ್ಷಗಳು ಸಿಇಸಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ (ಏಜೆನ್ಸೀಸ್).