ದೇಶ

ಮನವೊಲಿಕೆಗೆ ಬಂದಿದ್ದ ಕೈ ನಾಯಕರಿಗೆ ಮುಖಭಂಗ: ನಮ್ಮ ಬೇಡಿಕೆಗಳಿಗೆ ಒಪ್ಪಿದ ಕೇಂದ್ರ ಸರ್ಕಾರಕ್ಕೆ ಬೆಂಬಲ ಎಂದ ಸ್ಟಾಲಿನ್! | MK Stalin

ಚೆನ್ನೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡದಂತೆ ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರ ಮನವೊಲಿಸಲು ಇಂಡಿಯಾ ಒಕ್ಕೂಟ ನಡೆಸಿದ ಕೊನೆಯ ಕ್ಷಣದ ಪ್ರಯತ್ನ ವಿಫಲವಾಗಿದ್ದು, ಪ್ರಸ್ತಾವಿತ ಮಸೂದೆಗೆ ತಮ್ಮ ಪಕ್ಷದ ಬೆಂಬಲ ಮುಂದುವರಿಯಲಿದೆ ಎನ್ನುವುದನ್ನು ಸ್ಟಾಲಿನ್ ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ ಸ್ಟಾಲಿನ್, ಡಿಎಂಕೆ ಮೊದಲಿನಿಂದಲೂ ನ್ಯಾಯಸಮ್ಮತ ಕ್ಷೇತ್ರ ಪುನರ್ವಿಂಗಡಣೆಯನ್ನು ಬೆಂಬಲಿಸುತ್ತಾ ಬಂದಿದೆ ಮತ್ತು ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡಲು ನಿರಂತರವಾಗಿ ಶ್ರಮಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕ್ಷೇತ್ರ ಪುನರ್ವಿಂಗಡಣೆ ಕುರಿತು ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ದೊರೆತ ನಂತರವೇ ತಮ್ಮ ಪಕ್ಷವು ಈ ಮಸೂದೆಯನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಅವರು ಸೋನಿಯಾ ಗಾಂಧಿ ಅವರಿಗೆ ತಿಳಿಸಿದ್ದಾರೆ.

ಸ್ಟಾಲಿನ್ ಅವರ ಈ ಸ್ಪಷ್ಟ ನಿಲುವಿನೊಂದಿಗೆ, ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಡಿಎಂಕೆ ಮಸೂದೆಯ ಪರವಾಗಿ ಮತ ಚಲಾಯಿಸುವುದು ಬಹುತೇಕ ಖಚಿತವಾಗಿದೆ. ತಮಿಳುನಾಡು ಮೂಲದ ಈ ಪಕ್ಷವು ಲೋಕಸಭೆಯಲ್ಲಿ 22 ಸದಸ್ಯರನ್ನು ಮತ್ತು ರಾಜ್ಯಸಭೆಯಲ್ಲಿ 8 ಸ್ಥಾನಗಳನ್ನು ಹೊಂದಿದೆ. ಮಸೂದೆಯನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತದ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಡಿಎಂಕೆಯ ಈ ಬೆಂಬಲವು ಸಂಖ್ಯಾಬಲದ ದೃಷ್ಟಿಯಿಂದ ದೊಡ್ಡ ಶಕ್ತಿ ನೀಡಲಿದೆ.

ನ್ಯಾಯಸಮ್ಮತ ಪುನರ್ವಿಂಗಡಣೆ ಪರ ಡಿಎಂಕೆ!

ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ, ಡಿಎಂಕೆಯ ಎರಡೂ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಲಿಖಿತವಾಗಿ ಒಪ್ಪಿಕೊಂಡಿದೆ ಎಂದು ಸ್ಟಾಲಿನ್ ಒಕ್ಕೂಟದ ನಾಯಕರಿಗೆ ವಿವರಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಇತರ ಹಿರಿಯ ನಾಯಕರು ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಸ್ಟಾಲಿನ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ, ಡಿಎಂಕೆ ಅಧ್ಯಕ್ಷರು ತಮ್ಮ ನಿರ್ಧಾರಕ್ಕೆ ಅಚಲವಾಗಿ ಅಂಟಿಕೊಂಡಿದ್ದರು ಎಂದು ಮೂಲಗಳು ಹೇಳಿವೆ. ಈ ನಡುವೆ ಸೋನಿಯಾ ಗಾಂಧಿ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಎನ್ನುವುದನ್ನು ಸ್ಟಾಲಿನ್ ಒತ್ತಿ ಹೇಳಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ರಾಜಕೀಯ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಸ್ಟಾಲಿನ್ ಅವರನ್ನು ಒಪ್ಪಿಸಲು ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದ ಉದಾಹರಣೆಗಳನ್ನು ಉಲ್ಲೇಖಿಸಿದರು. ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಕೂಡ ವಾದ ಮಂಡಿಸಿ, ಬಿಜೆಪಿಯು ತನ್ನ ರಾಜಕೀಯ ಹಿತಾಸಕ್ತಿಗೆ ತಕ್ಕಂತೆ ನಡೆಸುವ ಯಾವುದೇ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಾಗದಂತಹ ಅಂಶವನ್ನು ಈ ಮಸೂದೆ ಒಳಗೊಂಡಿದೆ ಎಂದು ಎಚ್ಚರಿಕೆ ನೀಡಿದರು.

ಆದರೆ, ಈ ಎಲ್ಲಾ ವಾದಗಳ ನಡುವೆಯೂ ಸ್ಟಾಲಿನ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಈಗ ನಾವು ಈ ಮಸೂದೆಯನ್ನು ಬೆಂಬಲಿಸದಿದ್ದರೆ, ಮುಂದಿನ ವರ್ಷ ನಡೆಯಲಿರುವ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು 2011ರ ಜನಗಣತಿಯನ್ನು ಆಧರಿಸಿ ನಡೆಯಬಹುದು. ಇದರಿಂದ ಸಂಸದೀಯ ಪ್ರಾತಿನಿಧ್ಯದ ವಿಷಯದಲ್ಲಿ ತಮಿಳುನಾಡಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿರುವುದಾಗಿ ಮೂಲಗಳು ತಿಳಿಸಿವೆ.

ನವೆಂಬರ್ 30ರ ಸೋಮವಾರದಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಹೊಸದಾಗಿ ಸಾಂವಿಧಾನಿಕ (132ನೇ ತಿದ್ದುಪಡಿ) ಮಸೂದೆ, 2026 ಅನ್ನು ಮಂಡಿಸಲಿದೆ. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಲೋಕಸಭೆ ಹಾಗೂ ವಿಧಾನಸಭಾ ಸ್ಥಾನಗಳನ್ನು ಶೇ. 50 ರಷ್ಟು ಹೆಚ್ಚಿಸುವ ಮೂಲಕ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ಜಾರಿಗೊಳಿಸುವುದು ಮತ್ತು ಪರಿಷ್ಕೃತ ಸ್ಥಾನ ಹಂಚಿಕೆ ಹಾಗೂ ಕ್ಷೇತ್ರಗಳ ಗಡಿಗಳನ್ನು 2051 ರವರೆಗೆ ಸ್ಥಿರವಾಗಿರಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಇದರ ಅನ್ವಯ ಲೋಕಸಭೆಯ ಗರಿಷ್ಠ ಸದಸ್ಯ ಬಲವನ್ನು 850ಕ್ಕೆ (ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35) ಹಾಗೂ ರಾಜ್ಯ ವಿಧಾನಸಭೆಗಳ ಗರಿಷ್ಠ ಮಿತಿಯನ್ನು 500 ರಿಂದ 650ಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ(ಏಜೆನ್ಸೀಸ್​).