ನವದೆಹಲಿ: ನಾಳೆಯಿಂದ (ಸೋಮವಾರ) ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನವೇ, ಪರಿಷ್ಕೃತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂವಿಧಾನದ ತಿದ್ದುಪಡಿ ಅಡೆತಡೆಯನ್ನು ಸುಲಭವಾಗಿ ದಾಟುವ ಸಂಪೂರ್ಣ ವಿಶ್ವಾಸದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವಿದ್ದು, ಲೋಕಸಭೆಯಲ್ಲಿ ಕನಿಷ್ಠ 371 ಸಂಸದರು ಈ ಮಸೂದೆಯ ಪರವಾಗಿ ಮತ ಚಲಾಯಿಸುವ ನಿರೀಕ್ಷೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಕೆಳಮನೆಯಲ್ಲಿ ಮೂರನೇ ಎರಡರಷ್ಟು (2/3) ಬಹುಮತ ಪಡೆಯಲು ಅಗತ್ಯವಿರುವ 356 ಮತಗಳಿಗಿಂತ ಸರ್ಕಾರದ ಪರವಾಗಿರುವ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಸಂವಿಧಾನ (132ನೇ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲು ಸರ್ಕಾರಕ್ಕೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ.
ಈ ಹಿಂದೆ ಕಳೆದ ಏಪ್ರಿಲ್ ಮಂಡಿಸಲಾಗಿದ್ದ ಇದರ ಹಳೆಯ ಆವೃತ್ತಿಯಾದ ಸಂವಿಧಾನ (131ನೇ ತಿದ್ದುಪಡಿ) ಮಸೂದೆಯು ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ವಿಫಲವಾಗಿ ಲೋಕಸಭೆಯಲ್ಲಿ ಸೋಲು ಕಂಡಿತ್ತು. ಆದರೆ, ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಸಮಾನವಾಗಿ ಶೇ. 50 ರಷ್ಟು ಹೆಚ್ಚಿಸುವ ಅಂಶವನ್ನು ಪ್ರಸ್ತಾವಿತ ತಿದ್ದುಪಡಿಯಲ್ಲಿ ಲಿಖಿತವಾಗಿ ಸೇರಿಸಲಾಗುವುದು ಎಂದು ಸರ್ಕಾರವು ಡಿಎಂಕೆ ಸೇರಿದಂತೆ ಇತರ ವಿರೋಧ ಪಕ್ಷದ ಸಂಸದರಿಗೆ ಭರವಸೆ ನೀಡಿದ ಬಳಿಕ, ಏಪ್ರಿಲ್ನಲ್ಲಿದ್ದ ಆಕ್ಷೇಪಣೆಗಳು ನಿವಾರಣೆಯಾಗಿ ಸಂಸದರು ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟದಿಂದ ಹೊರಬಂದು ಡಿಎಂಕೆ ಮತ್ತು ಶರದ್ ಪವಾರ್ ಎನ್ಸಿಪಿ (ಎಸ್ಪಿ) ಪಕ್ಷಗಳು ಪರಿಷ್ಕೃತ ಪ್ರಸ್ತಾವನೆಗೆ ಬೆಂಬಲ ಸೂಚಿಸಿರುವುದು ಸರ್ಕಾರದ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಒಟ್ಟು 543 ಸದಸ್ಯ ಬಲದ ಲೋಕಸಭೆಯಲ್ಲಿ ಸದ್ಯ ಮೂರು ಸ್ಥಾನಗಳು ಖಾಲಿ ಇವೆ. ಇದಲ್ಲದೆ, ಹಲವು ಸದಸ್ಯರು ಈ ನಿರ್ಣಾಯಕ ಮತದಾನಕ್ಕೆ ಗೈರಾಗುವ ಸಾಧ್ಯತೆಯಿದೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅಮಾನತುಗೊಂಡಿದ್ದರೆ, ಅಮೃತ್ಪಾಲ್ ಸಿಂಗ್ ಜೈಲಿನಲ್ಲಿದ್ದಾರೆ. ಇನ್ನು ಕಾಂಗ್ರೆಸ್ನ ಕಣ್ಣೂರು ಸಂಸದ ಕೆ. ಸುಧಾಕರನ್ ದುಬೈನ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ, ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಛತ್ತೀಸ್ಗಢದ ಬಿಜೆಪಿ ಸಂಸದೆ ಲಕ್ಷ್ಮಿ ವರ್ಮಾ ಅವರ ಹಾಜರಾತಿ ಬಗೆಗಿನ ಅನುಮಾನಗಳು ಹಾಗೆಯೇ ಮುಂದುವರಿದಿದೆ. ಸಮಬಲವಾದಾಗ ಮಾತ್ರ ಸ್ಪೀಕರ್ ಮತ ಚಲಾಯಿಸುವುದರಿಂದ, ಸರ್ಕಾರದ 371 ಮತಗಳ ಬಲವು ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಬಹುದು ಎನ್ನಲಾಗಿದೆ.
ನಾಳೆಯಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಲೋಕಸಭೆಯ ಕಲಾಪವು ನವೆಂಬರ್ 30ರಂದು ಆರಂಭವಾಗಿ ಡಿಸೆಂಬರ್ 3ರವರೆಗೆ ನಡೆದರೆ, ರಾಜ್ಯಸಭೆಯು ಡಿಸೆಂಬರ್ 2ರ ಬುಧವಾರದಿಂದ ಎರಡು ದಿನಗಳ ಕಾಲ ಕಲಾಪ ನಡೆಸಲಿದೆ. ಕಳೆದ ಆಗಸ್ಟ್ 13ರಂದು ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತೇ ವಿನಃ ರಾಷ್ಟ್ರಪತಿಗಳು ಅಧಿವೇಶನವನ್ನು ಮುಕ್ತಾಯಗೊಳಿಸಿರಲಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ಸರ್ಕಾರಕ್ಕೆ ಅಲ್ಪಾವಧಿಯ ನೋಟಿಸ್ನಲ್ಲಿ ಉಭಯ ಸದನಗಳನ್ನು ಮತ್ತೆ ಕರೆಯಲು ಸಾಧ್ಯವಾಗಿದೆ.
ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026
ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಾನಗಳನ್ನು ಸಮಾನವಾಗಿ ಶೇ. 50 ರಷ್ಟು ಹೆಚ್ಚಿಸಿ, ಲೋಕಸಭೆಯ ಗರಿಷ್ಠ ಸಾಂವಿಧಾನಿಕ ಮಿತಿಯನ್ನು 850ಕ್ಕೆ (ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35) ಏರಿಸುತ್ತದೆ. ಪ್ರಾತಿನಿಧ್ಯ ಕಳೆದುಕೊಳ್ಳುವ ದಕ್ಷಿಣ ರಾಜ್ಯಗಳ ಆತಂಕವನ್ನು ನಿವಾರಿಸಲು 2051ರ ನಂತರದ ಮೊದಲ ಜನಗಣತಿಯವರೆಗೆ ಅಂತರ್-ರಾಜ್ಯ ಸ್ಥಾನಗಳ ಅನುಪಾತವನ್ನು ಸ್ಥಿರವಾಗಿರಿಸುತ್ತದೆ. ಅಲ್ಲದೆ, 2026ರ ನಂತರದ ಜನಗಣತಿಗೆ ಕಾಯದೆ 2029ರ ಸಾರ್ವತ್ರಿಕ ಚುನಾವಣೆಗೂ ಮುನ್ನವೇ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ (SC/ST ಮಹಿಳೆಯರು ಸೇರಿದಂತೆ) ಶೇ. 33 ರಷ್ಟು ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸಲು ಸಂವಿಧಾನದ 334A ವಿಧಿಯನ್ನು ಬದಲಾಯಿಸುತ್ತದೆ.
ಕ್ಷೇತ್ರ ಪುನರ್ವಿಂಗಡಣೆ (ಎರಡನೇ) ಮಸೂದೆ, 2026: ಶೇ. 50 ರಷ್ಟು ಸ್ಥಾನಗಳ ವಿಸ್ತರಣೆಯ ಆಧಾರದ ಮೇಲೆ ಕ್ಷೇತ್ರಗಳ ಗಡಿಗಳನ್ನು ಮರುರಚಿಸಲು ಶಾಸನಬದ್ಧ ಚೌಕಟ್ಟು ಮತ್ತು ಕ್ಷೇತ್ರ ಪುನರ್ವಿಂಗಡಣೆ ಆಯೋಗದ ಕಾರ್ಯವಿಧಾನವನ್ನು ಇದು ಸ್ಥಾಪಿಸುತ್ತದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಎರಡನೇ ಮಸೂದೆ, 2026: ವಿಸ್ತೃತ ಸ್ಥಾನಗಳ ರಚನೆ ಮತ್ತು ಮಹಿಳಾ ಮೀಸಲಾತಿ ನಿಬಂಧನೆಗಳಿಗೆ ಅನುಗುಣವಾಗಿ ದೆಹಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳನ್ನು ಹೊಂದಿಸಲು ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತರುತ್ತದೆ(ಏಜೆನ್ಸೀಸ್).