ನವದೆಹಲಿ: ವಿದೇಶಿ ದೇಣಿಗೆ(ನಿಯಂತ್ರಣ) ತಿದ್ದುಪಡಿ ಮಸೂದೆ-2026ಕ್ಕೆ(FCRA Amendment Bill) ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ವಿಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಮಸೂದೆಯ್ನು ಕೂಲಂಕುಷ ಪರಿಶೀಲನೆಗಾಗಿ 31 ಸದಸ್ಯರ ಜಂಟಿ ಸಂಸದೀಯ ಸಮಿತಿಗೆ(ಜೆಪಿಸಿ) ಕಳುಹಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಬಂದು ಉತ್ತರಿಸುವಂತೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗುತ್ತಿದ್ದ ನಡುವೆಯೇ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಡಿಸಿದರು. ಧ್ವನಿ ಮತದ ಮೂಲಕ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ನಿರ್ಣಯವು ಮಸೂದೆಯನ್ನು ಪರಿಶೀಲಿಸಲು ಲೋಕಸಭೆಯಿಂದ 21 ಸದಸ್ಯರು ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಒಳಗೊಂಡ ಸಮಿತಿಗೆ ಅವಕಾಶ ನೀಡುತ್ತದೆ.
ಲೋಕಸಭೆಯ ಸದಸ್ಯರನ್ನು ಸ್ಪೀಕರ್ ಓಂ ಬಿರ್ಲಾ ಅವರು ನಾಮನಿರ್ದೇಶನ ಮಾಡಿದ್ರೆ, ರಾಜ್ಯಸಭೆಯ ಸದಸ್ಯರನ್ನು ಸಭಾಪತಿ ಸಿಪಿ ರಾಧಾಕೃಷ್ಣನ್ ಅವರು ನಾಮನಿರ್ದೇಶನ ಮಾಡಲಿದ್ದಾರೆ. ಈ ಜಂಟಿ ಸದನ ಸಮಿತಿಯು 2026ರ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಲೋಕಸಭೆಗೆ ತನ್ನ ವರದಿಯನ್ನು ಸಲ್ಲಿಸಲು ತಿಳಿಸಲಾಗಿದೆ.
ಇನ್ನೂ ಈ ಪ್ರಸ್ತಾವನೆ ಅಂಗೀಕರಿಸುವ ವೇಳೆ ವಿರೋಧ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಇಡೀ ವಿರೋಧ ಪಕ್ಷವು ಎಫ್‌ಸಿಆರ್‌ಎ ಮಸೂದೆಯನ್ನು ವಿರೋಧಿಸುತ್ತಿದೆ. ಇಲ್ಲಿಯವರೆಗೆ ಕೇಂದ್ರ ತಂದಿರುವ ಯಾವುದೇ ಮಸೂದೆಯು ಅಲ್ಪಸಂಖ್ಯಾತರ ವಿರುದ್ಧವಾಗಿಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಸಹ, ಇದು ಸ್ಪಷ್ಟವಾಗಿ ಅಲ್ಪಸಂಖ್ಯಾತರು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ. ಮಸೂದೆಯನ್ನು ಹಿಂಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಸರ್ಕಾರ ಸಮರ್ಥನೆ
ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಸಮರ್ಥಿಸಿಕೊಂಡಿದ್ದು, ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯಲ್ಲಿನ ಯಾವುದೇ ನಿಬಂಧನೆಯು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಗುರಿಯಾಗಿಸಿಲ್ಲ. ಕೆಲವು ಸಮುದಾಯಗಳನ್ನು ದಾರಿತಪ್ಪಿಸುವ ಪ್ರಚಾರವನ್ನು ಮಾಡಲಾಗುತ್ತಿದೆ. ಭಾರತ ಬನಾನ ರಿಪಬ್ಲಿಕ್ ಅಲ್ಲ, ವಿದೇಶಿ ಹಣವನ್ನು ಖರ್ಚು ಮಾಡಲು ನಿಯಮಗಳು ಮತ್ತು ನಿಯಮಗಳು ಇರಬೇಕು ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು (ಏಜೆನ್ಸೀಸ್).