ಅಲಹಾಬಾದ್​ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ಯಶವಂತ್ ವರ್ಮಾ ರಾಜೀನಾಮೆ 
ದೇಶ

ಕೋಟಿ ಕೋಟಿ ನಗದು ಪತ್ತೆಯಾಗಿದ್ದ ಪ್ರಕರಣ: ನ್ಯಾಯಮೂರ್ತಿ ಸ್ಥಾನಕ್ಕೆ ಯಶವಂತ್ ವರ್ಮಾ ರಾಜೀನಾಮೆ! Justice Yashwant Varma

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶರ ಮನೆಯಲ್ಲಿ ಕೋಟಿ-ಕೋಟಿ ಹಣ ಪತ್ತೆಯಾಗಿದ್ದ ಪ್ರಕರಣ
  • ಅಲಹಾಬಾದ್​ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ಯಶವಂತ್ ವರ್ಮಾ ರಾಜೀನಾಮೆ
  • ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿರುವ ವರ್ಮಾ
ನವದೆಹಲಿ: ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ರೋಚಕ ಎನ್ನಬಹುದಾದ ಬೆಳವಣಿಗೆಯೊಂದರಲ್ಲಿ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ (ಏ.10) ಅವರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ದೆಹಲಿಯ ನಿವಾಸದಲ್ಲಿ ಹಣದ ರಾಶಿ ಪತ್ತೆಯಾದ ವಿವಾದದ ಬೆನ್ನಲ್ಲೇ ಈ ದಿಢೀರ್ ಬೆಳವಣಿಗೆ ನಡೆದಿದ್ದು, ಕಾನೂನು ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ಪತ್ರದಲ್ಲೇನಿದೆ?

ರಾಷ್ಟ್ರಪತಿಗಳಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಯಶವಂತ್ ವರ್ಮಾ ಅವರು ತಮ್ಮ ನಿರ್ಧಾರಕ್ಕೆ ಯಾವುದೇ ಸ್ಪಷ್ಟ ಕಾರಣವನ್ನು ನೀಡಿಲ್ಲ. ಈ ನಿರ್ಧಾರಕ್ಕೆ ನನ್ನನ್ನು ಪ್ರೇರೇಪಿಸಿದ ಕಾರಣಗಳ ಬಗ್ಗೆ ಬರೆದು ನಿಮ್ಮ ಗೌರವಾನ್ವಿತ ಕಚೇರಿಗೆ ಹೊರೆಯಾಗಲು ನಾನು ಇಷ್ಟಪಡುವುದಿಲ್ಲ. ಆದರೆ ತೀವ್ರ ದುಃಖದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ದೆಹಲಿ ಹೈಕೋರ್ಟ್‌ನಲ್ಲಿದ್ದ ಇವರನ್ನು ವಿವಾದದ ನಂತರ ಅಲಹಾಬಾದ್‌ಗೆ ವರ್ಗಾಯಿಸಲಾಗಿತ್ತು. ರಾಜೀನಾಮೆ ನೀಡಿದರೂ ಸಹ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವುದು ತಮ್ಮ ಪಾಲಿನ ಗೌರವ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಣದ ರಾಶಿ.. ಬೆಂಕಿ.. ಏನಾಗಿತ್ತು ಆ ದಿನ?

ಈ ಎಲ್ಲ ವಿವಾದಗಳಿಗೆ ಮುನ್ನುಡಿ ಬರೆದಿದ್ದು ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದ ಒಂದು ಅಗ್ನಿ ಅಘಾತ. ದೆಹಲಿಯಲ್ಲಿರುವ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಂದು ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ಅಲ್ಲಿ ಕಂಡ ದೃಶ್ಯ ನೋಡಿ ಬೆಕ್ಕಸ ಬೆರಗಾಗಿದ್ದರು.
ಮನೆಯ ಒಂದು ಭಾಗದಲ್ಲಿ ಕಂತೆ ಕಂತೆ ನಗದು ಪತ್ತೆಯಾಗಿತ್ತು. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆಕ್ಷನ್ ತಗೆದುಕೊಂಡರು. ವರ್ಮಾ ಅವರನ್ನು ಕೂಡಲೇ ದೆಹಲಿಯಿಂದ ಅಲಹಾಬಾದ್‌ಗೆ ವರ್ಗಾಯಿಸಲಾಯಿತು. ಅಷ್ಟೇ ಅಲ್ಲ, ಅಲ್ಲಿನ ಮುಖ್ಯ ನ್ಯಾಯಮೂರ್ತಿಗಳಿಗೆ ಇವರಿಗೆ ಯಾವುದೇ ನ್ಯಾಯಾಂಗ ಕೆಲಸಗಳನ್ನು ವಹಿಸಬೇಡಿ ಎಂಬ ಖಡಕ್ ಸೂಚನೆ ನೀಡಲಾಗಿತ್ತು.

ಇತಿಹಾಸದಲ್ಲೇ ಮೊದಲು: ವಿಡಿಯೋ ರಿಲೀಸ್ ಮಾಡಿದ ಕೋರ್ಟ್

ಸಾಮಾನ್ಯವಾಗಿ ಕೋರ್ಟ್ ವ್ಯವಹಾರಗಳು ಗೌಪ್ಯವಾಗಿರುತ್ತವೆ. ಆದರೆ ಈ ಪ್ರಕರಣದಲ್ಲಿ ಅಭೂತಪೂರ್ವ ಹೆಜ್ಜೆಯಿಟ್ಟ ನ್ಯಾಯಾಲಯ, ನ್ಯಾಯಮೂರ್ತಿಗಳ ಮನೆಯಲ್ಲಿ ಪತ್ತೆಯಾದ ಹಣದ ರಾಶಿಯ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಅಪ್‌ಲೋಡ್ ಮಾಡಿತ್ತು. ಇದು ಇಡೀ ದೇಶದ ಗಮನ ಸೆಳೆದಿತ್ತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಹಗರಣದ ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು.
ಆದರೆ ವರ್ಮಾ ಅವರು ಮಾತ್ರ ಈ ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತಲೇ ಬಂದಿದ್ದಾರೆ. ಆ ಸ್ಟೋರ್ ರೂಂ ಎಲ್ಲರಿಗೂ ಪ್ರವೇಶಕ್ಕೆ ಮುಕ್ತವಾಗಿತ್ತು, ಆ ಹಣ ನನಗಾಗಲಿ ಅಥವಾ ನನ್ನ ಕುಟುಂಬಕ್ಕಾಗಲಿ ಸೇರಿದ್ದಲ್ಲ ಎಂಬುದು ಅವರ ವಾದವಾಗಿತ್ತು.

ಇನ್ಮುಂದೆ ಅರೆಸ್ಟ್ ಮಾಡಬಹುದೇ? ಅಸಲಿ ಆಟ ಈಗ ಶುರು

ಈ ರಾಜೀನಾಮೆ ಕೇವಲ ಹುದ್ದೆ ಬಿಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಹಿಂದೆ ದೊಡ್ಡ ಕಾನೂನು ಪರಿಣಾಮವಿದೆ. ಭಾರತದ ಸಂವಿಧಾನದ ಪ್ರಕಾರ, ಅಧಿಕಾರದಲ್ಲಿರುವ ನ್ಯಾಯಾಧೀಶರಿಗೆ ಕೆಲವು ವಿಶೇಷ ರಕ್ಷಣೆಗಳಿರುತ್ತವೆ (Constitutional Immunity). ಇದರಿಂದಾಗಿ ಅವರ ವಿರುದ್ಧ ತನಿಖೆ ಅಥವಾ ಬಂಧನ ಪ್ರಕ್ರಿಯೆ ಅಷ್ಟು ಸುಲಭವಲ್ಲ.
ಈಗ ರಾಜೀನಾಮೆ ನೀಡಿರುವುದರಿಂದ ಅವರು ಒಬ್ಬ ಸಾಮಾನ್ಯ ನಾಗರಿಕರಾಗುತ್ತಾರೆ. ರಾಷ್ಟ್ರಪತಿಗಳು ಇವರ ರಾಜೀನಾಮೆಯನ್ನು ಅಂಗೀಕರಿಸಿದ ಕ್ಷಣದಿಂದಲೇ ಪೊಲೀಸರು ಅಥವಾ ತನಿಖಾ ಸಂಸ್ಥೆಗಳು ಇವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬಹುದು ಮತ್ತು ಬಂಧಿಸಬಹುದು. ಅಂದರೆ, ಸಂಸತ್ತಿನಲ್ಲಿ ಪದಚ್ಯುತಗೊಳಿಸುವ (Impeachment) ದೀರ್ಘ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಇವರು ಈ ದಾರಿ ಆರಿಸಿಕೊಂಡಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ, (ಏಜನ್ಸೀಸ್​).